Advertisement

ಸಸಿಗಳನ್ನು ನೆಟ್ಟು, ಬೆಳೆಸಿ ಪರಿಸರ ಕಾಪಾಡಿ

09:10 PM Jun 05, 2019 | Lakshmi GovindaRaj |

ಹಾಸನ: ಸಸಿಗಳನ್ನು ನೆಡುವ ಮೂಲಕ ಪರಿಸರ ಕಾಪಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ ಸಲಹೆ ನೀಡಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಸಂರಕ್ಷಣಾ ಬಳಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ತಾಪಮಾನದ ಏರಿಕೆ, ಜನಸಂಖ್ಯಾ ಸ್ಫೋಟವೇ ಪರಿಸರ ನಾಶಕ್ಕೆ ಕಾರಣ. ತಾಪಮಾನ ಏರಿಕೆ, ಜನಸಂಖ್ಯೆ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರವಾಪಾಡೋಣ ಎಂದರು.

ಅಂತರ್ಜಲ ಸಂರಕ್ಷಿಸಿ: ಗಿಡ ಮರಗಳನ್ನು ನೆಡುವುದಲ್ಲದೆ ಪರಿಸರವನ್ನು ಸಂರಕ್ಷಿಸಬೇಕು. ಅಂತರ್ಜಲ ನಾಶವನ್ನು ತಡೆಗಟ್ಟುವ ಮೂಲಕ ನಮ್ಮ ಮುಂದಿನ ಪಿಳೀಗೆಗೆ ಸಹಕಾರ ನೀಡಬೇಕು. ಪ್ರಕೃತಿ ನಾಶವು ನಮಗೆ ನಾವೇ ಮಾಡಿಕೊಳ್ಳುವಂತಹ ನಾಶವಾಗಿದ್ದು, ಪರಿಸರವನ್ನು ಸಂರಕ್ಷಿಸುವುದರೊಂದಿಗೆ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳೋಣ ಎಂದು ತಿಳಿಸಿದರು.

ಸಸಿ ನೆಟ್ಟು ಪೋಷಿಸಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್‌.ವಿಜಯ್‌ ಪ್ರಕಾಶ್‌ ಮಾತನಾಡಿ, ಸಸಿಗಳನ್ನು ನೆಡುವುದು ಒಂದು ಧಾರ್ಮಿಕ ಕಾರ್ಯವಾಗಬೇಕು ಈ ಮೂಲಕ ಪ್ರಕೃತಿ ಮಾತೆಗೆ ನಾವು ಕೊಡುವ ವರದಾನವಾಗಬೇಕು. ಕೇವಲ ಸಸಿಗಳನ್ನು ನೆಡುವುದು ಮಾತ್ರವಲ್ಲ ಅವುಗಳನ್ನು ಪೋಷಿಸಿ, ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.

Advertisement

ಕೆರೆ, ನಾಲೆಗಳ ಸ್ವಚ್ಛತೆ: ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಎಲ್ಲಾ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸಣ್ಣ ಕೆರೆಗಳನ್ನು, ನಾಲೆಗಳನ್ನು ಸ್ವಚ್ಛಗೊಳಿಸುವಂತಹ ಕಾರ್ಯಗಳು ನಡೆಯುತ್ತಿವೆ. ಅಕ್ಟೋಬರ್‌ – ನವೆಂಬರ್‌ ತಿಂಗಳೊಳಗೆ 1,500 ಚೆಕ್‌ಡ್ಯಾಂ ಹಾಗೂ 1500 ಕೆರೆಗಳ ಹೂಳೆತ್ತುವ ಕೆಲಸಗಳು ನಡೆಯಲಿದೆ ಎಂದು ವಿಜಯ ಪ್ರಕಾಶ್‌ ಅವರು ತಿಳಿಸಿದರು.

ಪರಿಸರ ಜಾಗೃತಿ ಮೂಡಿಸಿ: ಶಾಲೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ, ಸ್ವಚ್ಛತೆ, ನೈರ್ಮಲ್ಯ, ಜಲಸಂರಕ್ಷಣೆಗಳ ಬಗ್ಗೆ ತಿಳಿವಳಿಕೆ ಮೂಡಬೇಕು. ಹಾಸನ ಜಿಲ್ಲೆಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ, ಯಶಸ್ವಿಯುತವಾಗಿ ಪರಿಸರ ಜಾಗೃತಿಯಂತಹ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದಕ್ಕೆ ಎಲ್ಲಾ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಸಹಕರಿಸಬೇಕು ಎಂದರು.

ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್‌.ಆರ್‌ ಚನ್ನಕೇಶವ ಅವರು ಮಾತನಾಡಿ, ಪರಿಸರವನ್ನು ಉಳಿಸಿ ಬೆಳೆಸುವಂತಹ ಚಿಂತನೆ ವಿದ್ಯಾರ್ಥಿ ಜೀವನದಿಂದಲೇ ಪ್ರಾರಂಭವಾಗಬೇಕು. ಮಕ್ಕಳಲ್ಲಿ ಈ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಬೇಕು ಇದಕ್ಕೆ ಎಲ್ಲಾ ಪೋಷಕರು, ಶಿಕ್ಷಕರ ಪಾತ್ರ ಅತಿ ಮುಖ್ಯ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮೊದಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಣ್ಣ ಅವರು ವಿಶ್ವ ಪರಿಸರ ದಿನದ ಅಂಗವಾಗಿ ಒಂದು ಲಕ್ಷ ಗಿಡ ನೆಡುವ ಕಾರ್ಯ ಯೋಜನೆಯ ಅನುಷ್ಠಾನಕ್ಕೆ ಗಿಡನೆಡುವ ಮೂಲಕ ಚಾಲನೆ ನೀಡಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಸಿ.ಕೆ.ಬಸವರಾಜ್‌, 2ನೇ ಅಧಿಕ ಜಿಲ್ಲಾ ನ್ಯಾಯಾಧೀಶ‌ ಡಿ.ವೈ.ಬಸಾಪುರ್‌, 5ನೇ ಅಧಿಕ ಜಿಲ್ಲಾ ನ್ಯಾಯಾಧೀಶ ರವೀಂದ್ರ ಹೆಗ್ಗಡೆ, ನಗರಸಭೆ ಆಯುಕ್ತೆ ರೂಪಾಶೆಟ್ಟಿ, ಉಪವಿಭಾಗಾಧಿಕಾರಿ ಮತ್ತು ಹಸಿರು ಭೂಮಿ ಟ್ರಸ್ಟ್‌ ಪ್ರತಿಷ್ಠಾನದ ಗೌರವಾಧ್ಯಕ್ಷ‌ ಎಚ್‌.ಎಲ್‌.ನಾಗರಾಜ್‌, ತಹಸೀಲ್ದಾರ್‌ ಶ್ರೀನಿವಾಸಯ್ಯ, ವಕೀಲರ ಸಂಘದ ಅಧ್ಯಕ್ಷ‌ ಜೆ.ಪಿ.ಶೇಖರ್‌ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next