ಮಹಾನಗರ : ಪರಿಸರ ಪ್ರೇಮಿಗಳ ತಂಡವೊಂದು ಕೆ.ಪಿ.ಟಿ. ವೃತ್ತದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಂಡಿದ್ದು, ಕದ್ರಿ ಐಟಿಐ ಕಾಲೇಜಿನಲ್ಲಿ ರವಿವಾರ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಜೆ.ಆರ್. ಲೋಬೋ, ಮೇಯರ್ ಕವಿತಾ ಸನಿಲ್ ಮೊದಲಾದವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮೇಯರ್ ಕವಿತಾ ಸನಿಲ್, ಸಸಿ ನೆಡುವುದರ ಜತೆಗೆ ಅದರ ಪೋಷಣೆ ಕೂಡ ಅತಿ ಮುಖ್ಯ ಎಂದರು.
ಸಂಸ್ಥೆಯ ಕಾರ್ಯದರ್ಶಿ ಶವಾಜ್ ಮಹಮ್ಮದ್, ಹಣಕಾಸು ವ್ಯವಸ್ಥಾಪಕ ಗೋವಿಂದ ಪ್ರಸಾದ್, ಟ್ರಸ್ಟ್ ಸದಸ್ಯ ಕ್ಲಿಫರ್ಡ್ ಲೋಬೋ, ಯೋಗ ಕುಟೀರ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಅಜಾಜ್ ಸ್ಟೀಲ್‌ನ ಮನ್ಸೂರ್ ಅಜಾಜ್, ಬಯೋಗ್ರೀನ್ ನರ್ಸರಿಯ ಮೋಹನ್ ಕುಮಾರ್, ಸಾಫ್ಟ್ವೇರ್ ಎಂಜಿನಿಯರ್ ಶೇಖ್, ನ್ಯಾಯವಾದಿ ಲಕ್ಷ್ಮಣ್ ಕುಂದರ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ನಾಲ್ಕು ವರ್ಷಗಳಲ್ಲಿ ಹೂವಿನ ನಗರಿ
ಮುಂದಿನ ನಾಲ್ಕು ವರ್ಷಗಳಲ್ಲಿ ಮಂಗಳೂರನ್ನು ಹೂವಿನ ನಗರಿಯಾಗಿಮಾಡುವ ನಿಟ್ಟಿನಲ್ಲಿ ಈ ಉತ್ಸಾಹಿ ತಂಡ ಕೆಲಸ ಮಾಡುತ್ತಿದೆ. ಮೊದಲ ಹಂತವಾಗಿ ಕೆ.ಪಿ.ಟಿ. ವೃತ್ತದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 2,000 ಮೇ ಫ್ಲವರ್ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಂಡಿದೆ. ಮುಂದಿನ 2 ತಿಂಗಳುಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಅವುಗಳು ಮುಂದಿನ ನಾಲ್ಕು ವರ್ಷದಲ್ಲಿ ಹೂ ಬಿಡಲಿದ್ದು, ಆಗ ರಸ್ತೆಯ ಎರಡೂ ಬದಿಯಲ್ಲಿ ಹೂವಿನ ಸೌಂದರ್ಯ ಬಣ್ಣಿಸಲು ಅಸಾಧ್ಯ ಎನ್ನುತ್ತಾರೆ ಆಯೋಜಕರು.
ಸಸಿ ನೆಡುವ ಕಾರ್ಯಕ್ರಮವನ್ನು “ಮಂಗಳೂರು ಫ್ಲವರ್ ಸಿಟಿ” ಆಯೋಜಿಸಿದ್ದು, ಕೆಇಡಿಐಯುಎಂ ಅವರು ಅಗತ್ಯವಿರುವ ಫ್ಲೈವುಡ್ ನೀಡಿದ್ದಾರೆ. ಕ್ರೆಡಾೖ ಪ್ರಾಯೋಜಕತ್ವ ನೀಡಿದ್ದು, ಸಸಿಗಳ ಪೋಷಣೆಯ ಜವಾಬ್ದಾರಿಯನ್ನು ಬಯೋಗ್ರೀನ್ ನರ್ಸರಿ ವಹಿಸಿಕೊಂಡಿದೆ. ಒಂದು ಗಿಡಕ್ಕೆ 100 ರೂ. ನೀಡಿ ಬೆಂಗಳೂರಿನಿಂದ ತರಲಾಗಿದ್ದು, ಮೊದಿನ್ ವುಡ್ ಯುಎಇ 5 ಲಕ್ಷ ರೂ. ಧನ ಸಹಾಯ ನೀಡಿದ್ದಾರೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ಕೊಟ್ಟಾರ ಚೌಕಿಯಿಂದ ನಂತೂರು ಜಂಕ್ಷನ್ ವರೆಗೆ ಹಾಗೂ ನಗರದ ಕೆಲ ಸರ್ಕಲ್‌ಗಳು, ಪಾರ್ಕ್, ನದಿ ತೀರ ಸಹಿತ ಅನೇಕ ಕಡೆಗಳಲ್ಲಿ ಸಸಿಗಳನ್ನು ನೆಡುವ ಯೋಜನೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಫ್ಲವರ್ ಸಿಟಿಯಾಗಲಿ
ಮಂಗಳೂರನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂಬುದು ನಮ್ಮ ಉದ್ದೇಶ. ಬೆಂಗಳೂರಿಗೆ ಗಾರ್ಡನ್ ಸಿಟಿ ಎಂದು ಹೆಸರಿದೆ. ಹೂವಿನ ಸಸಿಗಳನ್ನು ರಸ್ತೆ ಬದಿಗಳಲ್ಲಿ ನೆಟ್ಟು, ಮುಂದಿನ ದಿನಗಳಲ್ಲಿ ಮಂಗಳೂರನ್ನು ಫ್ಲವರ್ ಸಿಟಿ ಎಂದು ಕರೆಯುವಂತೆ ಮಾಡಬೇಕು ಹಾಗೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವುದು ನಮ್ಮ ಗುರಿ.
ಮಹಾಬಲ ಮಾರ್ಲ, ಮಾಜಿ ಮೇಯರ್