Advertisement

ಮಣ್ಣಪಳ್ಳವನ್ನು ಜಿಲ್ಲೆಯಲ್ಲೇ ಮಾದರಿ ಕೆರೆ ಮಾಡಲು ಯೋಜನೆ

04:44 PM Jun 13, 2019 | Team Udayavani |

ಉಡುಪಿ: ಮಣಿಪಾಲ ಸುತ್ತಮುತ್ತಲಿನ ಪ್ರದೇಶಗಳ ಜಲಮೂಲವನ್ನು ಹೆಚ್ಚಿಸಲು ಮಳೆ ನೀರು ಸಂಗ್ರಹಿಸಿ ರೀಚಾರ್ಜ್‌ ಮಾಡುವುದರೊಂದಿಗೆ ಜನಾಕರ್ಷಣೆಯ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಮಣ್ಣಪಳ್ಳವನ್ನು ಜಿಲ್ಲೆಯಲ್ಲೇ ಮಾದರಿ ಕೆರೆ ಮಾಡುವ ಯೋಜನೆ ಹೊಂದಲಾಗಿದೆ.

Advertisement

ನಗರಾಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಸುಮಾರು 60 ಲ.ರೂ.ವೆಚ್ಚದಲ್ಲಿ ಮಣ್ಣಪಳ್ಳ ಕೆರೆಯ ಹೂಳೆತ್ತಲು ನಿರ್ಧರಿಸಿದ್ದು, ಈ ವಾರಾಂತ್ಯದಲ್ಲಿ ಟೆಂಡರ್‌ ಕರೆದು ಮುಂದಿನ ವಾರದಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.

ಕುಡಿಯಲು ಯೋಗ್ಯ ಮಾಡುವ ಉದ್ದೇಶ
ನೀರಿನ ಮಟ್ಟವನ್ನು ಏರಿಸುವ ಉದ್ದೇಶದಿಂದ ಕೆರೆಯ ಹೂಳು ತೆಗೆಯುವುದು ಮತ್ತು ಲ್ಯಾಟರೈಟ್‌ ಕಲ್ಲನ್ನು ಅಗೆಯಲಾಗುತ್ತದೆ. ಆ ಮೂಲಕ ಕೆರೆಯನ್ನು ಇನ್ನಷ್ಟು ಆಳ ಮಾಡಿ ನೀರಿನ ಸಂಗ್ರಹ ಹೆಚ್ಚಿಸಲಾಗುತ್ತದೆ. ಪರಿಸರದಲ್ಲಿ ಅಂತರ್ಜಲ ವೃದ್ಧಿಗೆ ಕಾರಣವಾಗುವ ಮಣ್ಣಪಳ್ಳ ಕೆರೆಯ ನೀರನ್ನು ಬೇಸಗೆಯ ತುರ್ತು ಸಂದರ್ಭ ಕುಡಿಯಲು ಕೂಡ ಪೂರೈಕೆ ಮಾಡಬಹುದೆಂಬ ಉದ್ದೇಶ ಹೊಂದಲಾಗಿದೆ.

ಹೂಳೆತ್ತಿದರೆ ನೀರಿನ ಮಟ್ಟ ವೃದ್ಧಿ
2015-16ನೇ ಸಾಲಿನಲ್ಲಿ 10.50 ಲ.ರೂ. ವೆಚ್ಚದಲ್ಲಿ ಭಾಗಶಃ ಕೆರೆಯ ಹೂಳೆತ್ತಲಾಗಿತ್ತು. ಈಗ ಬಹಳಷ್ಟು ಹೂಳು ತುಂಬಿದ್ದು, ಟೆಂಡರ್‌ ಪ್ರಕ್ರಿಯೆ ನಡೆದ ಕೂಡಲೇ ಕಾಮಗಾರಿ ಆರಂಭವಾಗಲಿದೆ. ಜಲಕ್ಷಾಮದಿಂದಾಗಿ ನೀರಿನ ಮಟ್ಟವೂ ಈ ಬಾರಿ ಬಹಳಷ್ಟು ಇಳಿಮುಖವಾಗಿದೆ. ಮಳೆನೀರು ಸಂಗ್ರಹಿಸಿಡುವುದರಿಂದ ಬೇಸಗೆ ಕಾಲದಲ್ಲಿ ನೀರಿನ ಲಭ್ಯತೆ ಉಂಟಾಗುವ ಜತೆಗೆ ಸುತ್ತಮುತ್ತಲಿನ ಪ್ರದೇಶದಲ್ಲೂ ನೀರಿನ ಒರತೆ ಹೆಚ್ಚಾಗುವ ಉದ್ದೇಶವನ್ನು ಇರಿಸಲಾಗಿದೆ.

ಸೈಕ್ಲಿಂಗ್‌ ಟ್ರ್ಯಾಕ್‌
ಮಣ್ಣಪಳ್ಳ ಕೆರೆಯ ಸುತ್ತ ಈಗಾಗಲೇ ನಿರ್ಮಾಣವಾಗಿರುವ ಸುಮಾರು 3 ಕಿ.ಮೀ.ಉದ್ದದ ವಾಕಿಂಗ್‌ ಟ್ರ್ಯಾಕ್‌ ಅನ್ನು ವಿಸ್ತರಿಸಲು ಯೋಚಿಸಲಾಗಿದೆ. ಕೆರೆಯ ಸುತ್ತ ವಿದ್ಯುತ್‌ ದೀಪ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಾಕಿಂಗ್‌ ಟ್ರ್ಯಾಕ್‌ ಪಕ್ಕದಲ್ಲೇ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಎಂಬಂತೆ ಕೆರೆಯ ಸುತ್ತ 59 ಲ.ರೂ. ವೆಚ್ಚದಲ್ಲಿ ಸುಮಾರು 4 ಕಿ.ಮೀ. ಉದ್ದದ ಸೈಕ್ಲಿಂಗ್‌ ಟ್ರ್ಯಾಕ್‌ ಹಾಗೂ ಅಂಗವಿಕಲರು ಗಾಲಿಕುರ್ಚಿಯಲ್ಲಿ ತಿರುಗಾಡಲು ಅನುಕೂಲವಾಗುವಂತಹ ಟ್ರ್ಯಾಕ್‌ ಕೂಡ ಇಲ್ಲಿ ನಿರ್ಮಾಣವಾಗಲಿದೆ.

Advertisement

ಸಂಪರ್ಕ ರಸ್ತೆ ಅಭಿವೃದ್ಧಿ
ಕೆರೆಯ ಸಮೀಪದಲ್ಲಿರುವ ವಾಹನ ಪಾರ್ಕಿಂಗ್‌ ಪ್ರದೇಶವನ್ನು ಸಮತಟ್ಟುಗೊಳಿಸಿ ಹೆಚ್ಚಿನ ವಾಹನ ನಿಲ್ಲಲು ವ್ಯವಸ್ಥೆ ಮಾಡಲಾಗುತ್ತದೆ. ಕೆರೆಯ ಸಂಪರ್ಕ ರಸ್ತೆಗೂ ಯೋಜನೆ ರೂಪಿಸಲಾಗಿದ್ದು, 41 ಲ.ರೂ. ಅಂದಾಜು ಮೊತ್ತದಲ್ಲಿ ನಡೆಯಲಿದೆ.

ನೀರಿನ ಚಿಲುಮೆ; ಹೆಚ್ಚಿಸುವ ಕೆಲಸ
ಮರ-ಗಿಡ, ಕೆರೆಗಳಿರುವ ಪ್ರದೇಶಗಳಲ್ಲಿ ನೀರಿನ ಚಿಲುಮೆಗಳು ಅಧಿಕವಾಗಿದ್ದು, ಇವುಗಳನ್ನು ರಕ್ಷಿಸುವಂತಹ ಕೆಲಸವೂ ಇಲ್ಲಿ ನಡೆಯಲಿದೆ. ದಿನನಿತ್ಯ ನೂರಾರು ಜನರು ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದು, ಜನಾಕರ್ಷಣೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ವರ್ಷಕ್ಕೆ 1 ಎಕ್ರೆ ಪ್ರದೇಶದಲ್ಲಿ 1 ಕೋಟಿ ಲೀ. ನೀರು ಬೀಳುತ್ತಿದೆ. ಇದರಲ್ಲಿ ಶೇ.10ರಷ್ಟು ಮಾತ್ರ ಉಳಿತಾಯವಾಗುತ್ತಿದೆ. ಉಳಿದ ನೀರು ಪೋಲಾಗುತ್ತಿದ್ದು, ಜಲಮರುಪೂರಣ, ರೀಚಾರ್ಜ್‌ ಪ್ರಕ್ರಿಯೆಗಳನ್ನು ಮಾಡಿಕೊಂಡರೆ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಮಹತ್ವದ ಹೆಜ್ಜೆಯನ್ನಿರಿಸಿದೆ.

ಆರು ತಿಂಗಳೊಳಗೆ ಪೂರ್ಣ
ನಗರಾಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಸುಮಾರು 60 ಲ.ರೂ.ವೆಚ್ಚದಲ್ಲಿ ಮಣ್ಣಪಳ್ಳ ಕೆರೆಯ ಹೂಳೆತ್ತಲು ನಿರ್ಧರಿಸಿದೆ. ಈ ವಾರಾಂತ್ಯದಲ್ಲಿ ಟೆಂಡರ್‌ ಕರೆದು ಮುಂದಿನ ವಾರದಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ. ಮಳೆಬಂದರೂ ಕೂಡ ಕಾಮಗಾರಿ ಮುಂದುವರಿಯಲಿದೆ. ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಇದೆ.
– ಸಂತೋಷ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next