Advertisement

ದೇಶಕ್ಕೆ ಪ್ರವಾಸಿಗರ ಸೆಳೆಯಲು ಯೋಜನೆ ಅಭಿವೃದ್ಧಿ ಅಗತ್ಯ

12:29 PM Mar 05, 2018 | Team Udayavani |

ಮೈಸೂರು: ಭಾರತಕ್ಕೆ ಹೆಚ್ಚಿನ ಸಂಖ್ಯೆ ಪ್ರವಾಸಿಗರು ಆಗಮಿಸುವಂತೆ ಮಾಡುವ ನಿಟ್ಟಿನಲ್ಲಿ ಪ್ರವಾಸಿ ಯೋಜನೆಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಕೆ.ಜೆ.ಅಲೊನ್ಸ್‌ ತಿಳಿಸಿದರು.

Advertisement

ಮೈಸೂರು ಹೊಟೇಲ್‌ ಮಾಲೀಕರ ಸಂಘ, ಮೈಸೂರು ಟ್ರಾವೆಲ್ಸ್‌ ಅಸೋಸಿಯೇಷನ್‌, ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಟೂರಿಸಂ ಫೋರಂ ವತಿಯಿಂದ ನಗರದ ಜೆ.ಕೆ.ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ಟ್ರಾವೆಲ್‌ ಮಾರ್ಟ್‌-18 ಉದ್ಘಾಟಿಸಿ ಮಾತನಾಡಿದರು.

ಕಳೆದ ವರ್ಷ ಭಾರತಕ್ಕೆ 10 ಮಿಲಿಯನ್‌ ವಿದೇಶಿ ಪ್ರವಾಸಿಗರು ಆಗಮಿಸಿದ್ದರು. ಈ ಪ್ರಮಾಣ ದುಪ್ಪಟ್ಟಾಗಬೇಕೆಂಬುದು ತಮ್ಮ ಗುರಿ. ಮೈಸೂರು ಸುಂದರ ಪ್ರವಾಸಿ ಕೇಂದ್ರವಾಗಿದ್ದು, ವಿಶ್ವವಿಖ್ಯಾತ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ಕೆಆರ್‌ಎಸ್‌ ಸೇರಿದಂತೆ ಹಲವು ಪ್ರವಾಸಿ ತಾಣಗಳು ಮೈಸೂರು ಹಾಗೂ ಸುತ್ತಮುತ್ತಲ ಊರುಗಳಲ್ಲಿವೆ.

ಅಲ್ಲದೆ ಮೈಸೂರು ಯೋಗದ ತವರೂರಾಗಿದ್ದು, ದಕ್ಷಿಣ ಭಾರತ ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆದ್ದರಿಂದ ಇಲ್ಲಿಗೆ ಪ್ರವಾಸಿಗರ ಸಂಖ್ಯೆ, ಅದರಲ್ಲಿಯೂ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಬರುವ ಅವಕಾಶಗಳಿದ್ದು, ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಚೀನ ಇತಿಹಾಸ: ಈ ಬಾಗದ ಅನೇಕ ನಗರಗಳು ಪ್ರಾಚೀನ ಇತಿಹಾಸವನ್ನು ಹೊಂದಿದ್ದು, ಇಂತಹ ನಗರಕ್ಕೆ ಸಂಪರ್ಕ ಕಲ್ಪಿಸಲು ಅಗತ್ಯವಿರುವ ಎಲ್ಲಾ ನೆರವು ನೀಡಲು ಕೇಂದ್ರ ಸಿದ್ಧವಿದೆ. ಈಗಾಗಲೇ ಉಡಾನ್‌ ಯೋಜನೆಯಡಿ ಸಂಚರಿಸುತ್ತಿರುವ ವಿಮಾನವನ್ನು ಮೈಸೂರಿನಿಂದ ಇತರ ನಗರಕ್ಕೂ ಕಲ್ಪಿಸುವ ಕುರಿತು ಕೇಂದ್ರ ವಿಮಾನಯಾನ ಸಚಿವರೊಡನೆ ಮಾತುಕತೆ ನಡೆಸಲಾಗುವುದು.

Advertisement

ಅಂತೆಯೇ ಪ್ರವಾಸೋದ್ಯಮ ಸಮುದಾಯ ವನ ನಿರ್ಮಾಣಕ್ಕೆ ಅಗತ್ಯ ಸ್ಥಳ ಗುರುತಿಸಿದರೆ, ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಮೈಸೂರು ಅರಮನೆ, ದಸರಾಗೆ ಸಂಬಂಧಿಸಿದಂತೆ ಉನ್ನತ ಗುಣಮಟ್ಟದ ವೀಡಿಯೋ ಕಳುಹಿಸಿದರೆ ಕೇಂದ್ರ ಸರ್ಕಾರದ ವೆಬ್‌ಸೈಟ್‌ಗೆ ಅಳವಡಿಸಲಾಗುವುದು. ಇದರಿಂದ ಸಾಕಷ್ಟು ಮಂದಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂದರು.

ಮೂರು ದಿನಗಳ ಕಾಲ ಜೆ.ಕೆ. ಮೈದಾನದಲ್ಲಿ ನಡೆಯುವ ಈ ಟ್ರಾವೆಲ್ಸ್‌ ಮಾರ್ಟ್‌ನಲ್ಲಿ ಹತ್ತಾರು ಹೊಟೇಲ್‌ ಉದ್ಯಮಿಗಳು ಪಾಲ್ಗೊಂಡಿದ್ದು, ನಗರದ ಶೈಲೆಂಟ್‌ ಶೋರ್ಸ್‌, ಸಂದೇಶ್‌ ದಿ ಪ್ರಿನ್ಸ್‌, ಜೆ.ಪಿ. ಪ್ಯಾಲೇಸ್‌, ಮೋನಾಲಿ, ವೈನಾಡು ಹೊಟೇಲ್‌ಗ‌ಳನ್ನು ಪರಿಚಯಿಸುವ ಸಾಕಷ್ಟು ಸ್ಟಾಲ್‌ಗ‌ಳನ್ನು ತೆರೆಯಲಾಗಿದೆ. ಇದರೊಂದಿಗೆ ಪ್ರವಾಸೋದ್ಯಮ ಆಕರ್ಷಣೆಗೆ ಅನುಕೂಲವಾಗುವ ಮಳಿಗೆಗಳನ್ನು ಸಹ ತೆರೆಯಲಾಗಿದೆ.

ಮಾಜಿ ಸಚಿವ ಎಸ್‌.ಎ. ರಾಮದಾಸ್‌, ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ಎಂ. ರಾಜೇಂದ್ರ, ಉದ್ಯಮಿ ಡಾ. ಜಗನ್ನಾಥ ಶೆಣೈ, ಟ್ರಾವೆಲ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಬಿ.ಎಸ್‌.ಪ್ರಶಾಂತ್‌, ಮೈಸೂರು ಟ್ರಾವೆಲ್‌ ಮಾರ್ಟ್‌ನ ಅಧ್ಯಕ್ಷ ಸಿ.ಎ. ಜಯಕುಮಾರ್‌, ಮೈಸೂರು ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next