ಭೋಪಾಲ್:ತರಬೇತಿ ವೇಳೆ ಲಘು ವಿಮಾನವೊಂದು ದೇವಸ್ಥಾನದ ಮೇಲಿನ ಗರ್ಭಗುಡಿಗೆ ಡಿಕ್ಕಿ ಹೊಡೆದು ಪತನಗೊಂಡಿದ್ದು, ಈ ಸಂದರ್ಭದಲ್ಲಿ ಹಿರಿಯ ಪೈಲಟ್ ದುರ್ಮರಣಕ್ಕೀಡಾಗಿರುವ ಘಟನೆ ಮಧ್ಯಪ್ರದೇಶದ ರೇವಾ ಎಂಬಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕನ್ನಡ ಕುಲಕೋಟಿಗೆ ಕೈಮುಗಿದು ಹಣೆಮಣಿದ ಮೇರು ಸಾಹಿತಿ ಪ್ರೊ.ದೊಡ್ಡ ರಂಗೇಗೌಡ
ಮಧ್ಯಪ್ರದೇಶದ ರೇವಾ ಜಿಲ್ಲೆಯ ಡುಮ್ರಿ ಗ್ರಾಮದಲ್ಲಿರುವ ದೇವಸ್ಥಾನದ ಗರ್ಭಗುಡಿಯ ಶಿಖರಕ್ಕೆ ಡಿಕ್ಕಿ ಹೊಡೆದು ಖಾಸಗಿ ಲಘು ವಿಮಾನ ಪತನಗೊಂಡಿತ್ತು. ಘಟನೆಯಲ್ಲಿ ತರಬೇತಿ ಪಡೆಯುತ್ತಿದ್ದ ಪೈಲಟ್ ಗಾಯಗೊಂಡಿರುವುದಾಗಿ ವರದಿ ವಿವರಿಸಿದೆ.
ಶುಕ್ರವಾರ(ಜನವರಿ 06) ಮುಂಜಾನೆ ಈ ಅವಘಡ ಸಂಭವಿಸಿದೆ. ಲಘು ವಿಮಾನ ದೇವಸ್ಥಾನದ ಗರ್ಭಗುಡಿಗೆ ಡಿಕ್ಕಿ ಹೊಡೆದು ಪತನಗೊಂಡಿತ್ತು. ಗಾಯಗೊಂಡ ತರಬೇತು ಪೈಲಟ್ ನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ರೇವಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ ಎಎನ್ ಐಗೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೇಲ್ನೋಟಕ್ಕೆ ಕಂಡು ಬಂದಂತೆ ಪ್ರತಿಕೂಲ ಹವಾಮಾನ ಮತ್ತು ಅತಿಯಾದ ಮಂಜು ಕವಿದಿದ್ದರಿಂದ ಲಘು ವಿಮಾನ ದೇವಸ್ಥಾನದ ಗರ್ಭಗುಡಿಗೆ ಡಿಕ್ಕಿ ಹೊಡೆಯಲು ಕಾರಣವಾಗಿದೆ ಎಂದು ವರದಿ ವಿವರಿಸಿದೆ.