ರಿಯೋ ಡಿ ಜನೈರೊ(ಬ್ರೆಜಿಲ್): ವಿಮಾನ ಪತನವಾಗಿ ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು 14 ಮಂದಿ ಸಾವನ್ನಪ್ಪಿರುವ ಘಟನೆ ಬ್ರೆಜಿಲ್‌ನ ಉತ್ತರ ಅಮೆಜಾನ್ ರಾಜ್ಯದಲ್ಲಿ ಶನಿವಾರ(ಸೆ.16 ರಂದು) ನಡೆದಿದೆ.
ಉತ್ತರ ಅಮೆಜಾನ್ ರಾಜ್ಯದ ರಾಜಧಾನಿ ಮನೌಸ್‌ನಿಂದ ಸುಮಾರು 400 ಕಿಮೀ (248 ಮೈಲುಗಳು) ದೂರದಲ್ಲಿರುವ ಬಾರ್ಸೆಲೋಸ್ ಪ್ರಾಂತ್ಯದಲ್ಲಿ ಈ ವಿಮಾನ ಪತನ ಸಂಭವಿಸಿದೆ.
ರನ್ ವೇಯಿಂದ ಹೊರಟ ವಿಮಾನ ಮಳೆಯಾದ ಕಾರಣದಿಂದ ಮಾರ್ಗ ಕೂಡ ಸರಿಯಾಗಿ ಗೋಚರಿಸದೆ ಲ್ಯಾಂಡ್ ಆಗಲು ಯತ್ನಿಸಿದೆ. ಆದರೆ ಈ ವೇಳೆ ನಿಯಂತ್ರಣ ಕಳೆದುಕೊಂಡು ಬಾರ್ಸಿಲೋಸ್ ನ ಕಾಡಿನ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ.
ಇದನ್ನೂ ಓದಿ: Mussoorie; ಹೋಟೆಲ್ ನಲ್ಲಿ ಅಗ್ನಿ ಅವಘಡ; ಸುಟ್ಟು ಕರಕಲಾದ ಎರಡು ವಾಹನಗಳು
ವರದಿಯ ಪ್ರಕಾರ ವಿಮಾನದಲ್ಲಿದ್ದವರು ಮೀನುಗಾರಿಕೆಯ ಪ್ರವಾಸಿ ತಾಣವೊಂದಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಬಾರ್ಸೆಲೋಸ್ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಇಲ್ಲಿ ಹಲವಾರು ರಾಷ್ಟ್ರೀಯ ಉದ್ಯಾನವನಗಳಿವೆ. ಈ ಕಾರಣದಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಅಲ್ಲಿಗೆ ತೆರಳುತ್ತಿದ್ದರು ಎಂದು ವರದಿ ತಿಳಿಸಿದೆ.
“ಶನಿವಾರ ಬಾರ್ಸೆಲೋಸ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ 12 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಗಳ ಸಾವಿಗೆ ನಾನು ತೀವ್ರವಾಗಿ ದುಃಖ ವ್ಯಕ್ತಪಡಿಸುತ್ತೇನೆ” ಎಂದು ಉತ್ತರ ಅಮೆಜಾನ್ ರಾಜ್ಯದ ಗವರ್ನರ್ ವಿಲ್ಸನ್ ಲಿಮಾ ಟ್ವೀಟ್ ಮಾಡಿ ಹೇಳಿದ್ದಾರೆ.
ಸದ್ಯ ಮನೌಸ್ ಏರೋಟ್ಯಾಕ್ಸಿ ವಿಮಾನಯಾನ ಸಂಸ್ಥೆಯು ಅಪಘಾತ ಸಂಭವಿಸಿದೆ ಮತ್ತು ತನಿಖೆ ನಡೆಸುತ್ತಿದೆ ಎಂದು ಹೇಳಿದೆ. ಆದರೆ ಸಾವು ನೋವಿನ ಬಗ್ಗೆ ಹಾಗೂ ಗಾಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.