Advertisement

ಸುಂದರ ಬೆಂಗಳೂರು ನಿರ್ಮಿಸಲು ಯೋಜನೆ

06:44 AM Jan 01, 2019 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಸ್ವತ್ಛ, ಸುಂದರ ಹಾಗೂ ಹಸಿರು ನಗರವನ್ನಾಗಿಸುವ ಅಂಶಗಳಿಗೆ ಹೊಸ ವರ್ಷದಲ್ಲಿ ಆದ್ಯತೆ ನೀಡಲು ಬಿಬಿಎಂಪಿ ಯೋಜನೆ ರೂಪಿಸಿದೆ.

Advertisement

ನಗರದಲ್ಲಿನ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಒದಗಿಸುವ ಜತೆಗೆ ಹೆಚ್ಚಿನ ಸ್ಥಳಗಳಲ್ಲಿ ಸಸಿಗಳನ್ನು ನೆಡುವ ಮೂಲಕ ನಗರದಲ್ಲಿ ಹಸಿರುವ ಪರಿಸರವನ್ನು ಹೆಚ್ಚಿಸುವ ಯೋಜನೆ ಹೊಂದಿದೆ. ಇದರೊಂದಿಗೆ ಜನರ ಆರೋಗ್ಯ ಸಂರಕ್ಷಣೆ, ಸಮರ್ಪಕ ತ್ಯಾಜ್ಯ ವಿಲೇವಾರಿ, ಸಂಪನ್ಮೂಲ ಕ್ರೂಢೀಕರಣಕ್ಕೆ ಆದ್ಯತೆ ನೀಡಲು ಬಿಬಿಎಂಪಿ ನಿರ್ಧರಿಸಿದೆ.

ಹೊಸ ವರ್ಷದಲ್ಲಿ ಪಾಲಿಕೆಯಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಯೋಜನೆಗಳ ಬಗ್ಗೆ ಮೇಯರ್‌ ಗಂಗಾಂಬಿಕೆ ಅವರು “ಉದಯವಾಣಿ’ ಜತೆ ಮಾತನಾಡಿ, ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿರುವುದರಿಂದ ವಾಯುಮಾಲಿನ್ಯ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು. ಜತೆಗೆ ಪ್ರಸಕ್ತ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ನಗರದ ಹಸಿರನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.

ಮೇಯರ್‌ ಆಗಿ ಆಯ್ಕೆಯಾದ ಮೊದಲ ದಿನವೇ ಘೋಷಿಸಿದಂತೆ ಬೆಂಗಳೂರನ್ನು ಸ್ವತ್ಛ ಹಾಗೂ ಸುಂದರ ನಗರವಾಗಿ ರೂಪಿಸುವುದು ನನ್ನ ಮೊದಲ ಆದ್ಯತೆ. ಆ ನಿಟ್ಟಿನಲ್ಲಿ ಹಸಿ ತ್ಯಾಜ್ಯ ವಿಲೇವಾರಿಗೆ ಆದಷ್ಟು ಬೇಗ ವಾರ್ಡ್‌ವಾರು ಟೆಂಡರ್‌ ಕರೆಯಲಾಗುವುದು ಹಾಗೂ ತ್ಯಾಜ್ಯ ವಿಂಗಡಣೆಯ ಕುರಿತು ಜನರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪಾಲಿಕೆಯಿಂದ ಹಾಗೂ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ಅಡಿಯಲ್ಲಿ ಸಾಕಷ್ಟು ಅನುದಾನ ನೀಡಲಾಗಿದ್ದು, ಹಲವಾರು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಖರೀದಿಸಲಾಗಿದೆ. ಆದರೆ, ಅವುಗಳ ಸಮರ್ಪಕ ಬಳಕೆಯಾಗುತ್ತಿಲ್ಲ ಎಂಬ ಆರೋಪವಿದ್ದು, ಕೂಡಲೇ ಎಲ್ಲ ಮುಖ್ಯ ಆರೋಗ್ಯಾಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆಸಲಾಗುವುದು.

Advertisement

ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳ ಸೇರಿದಂತೆ ಪಾಲಿಕೆಗೆ ವಿವಿಧ ಮೂಲಗಳಿಂದ ಬರಬೇಕಾದ ಆದಾಯ ಕ್ರೋಢೀಕರಣಕ್ಕೆ ಮಹತ್ವ ನೀಡಲಾಗುವುದು. ಜತೆಗೆ ಆದಾಯ ಸೋರಿಕೆ ತಡೆಗೆ ವಿಶೇಷ ಕಾಳಜಿ ವಹಿಸುವ ಮೂಲಕ ತೆರಿಗೆ ಸಂಗ್ರಹಿಸಲಾಗುವುದು ಹಾಗೂ ಪಾಲಿಕೆಯ ಎಂಟೂ ವಲಯಗಳಲ್ಲಿ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳನ್ನು ಪತ್ತೆ ಮಾಡಿ ತೆರಿಗೆ ಸಂಗ್ರಹಿಸುತ್ತೇವೆ ಎಂದು ತಿಳಿಸಿದರು.

ಪಾಲಿಕೆಯ 2019-2020ನೇ ಸಾಲಿನ ಬಜೆಟ್‌ನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಅಭಿವೃದ್ಧಿಗೆ ಯೋಜನೆಗಳನ್ನು ಒಳಗೊಂಡ ಜನಪರ ಬಜೆಟ್‌ ಮಂಡಿಸಲಾಗುವುದು. ಜತೆಗೆ ಬಜೆಟ್‌ ಶೀಘ್ರ ಅನುಷ್ಠಾನಗೊಳಿಸಲು ಸಹ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದಂಡ ಪ್ರಯೋಗ ಅನಿವಾರ್ಯ: ನಗರದಲ್ಲಿನ ತ್ಯಾಜ್ಯ ಸಮಸ್ಯೆ ಪರಿಹಾರ, ತ್ಯಾಜ್ಯ ವಿಂಗಡಣೆ ಪ್ರಮಾಣ ಹೆಚ್ಚಳ ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ತಡೆಯುವ ಉದ್ದೇಶದಿಂದ ಮಾರ್ಷಲ್‌ಗ‌ಳು ಅನಿವಾರ್ಯವಾಗಿದೆ. ಅದರಂತೆ ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಹಾಗೂ ವಿಂಗಡಣೆ ಮಾಡದವರ ವಿರುದ್ಧ ಅನಿವಾರ್ಯವಾಗಿ ದಂಡ ಪ್ರಯೋಗ ಮಾಡಬೇಕಿದೆ ಎಂದು ಮೇಯರ್‌ ಗಂಗಾಂಬಿಕೆ ಹೇಳಿದರು.

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next