ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಸೆ.5 ರಿಂದ 23 ರ ವರೆಗೂ ನಡೆಯಲಿರುವ ಕುಷ್ಠರೋಗ ಪತ್ತೆ ಅಭಿಯಾನದ ಕುರಿತು ಜಿಲ್ಲೆಯ ಜನರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಒಂದು ತಂಡವಾಗಿ ಕಾರ್ಯನಿರ್ವಹಿಸಿ ಕ್ಷೇತ್ರ ಮಟ್ಟದಲ್ಲಿ ಅಭಿಯಾನದ ಬಗ್ಗೆ ಪ್ರಚಾರ ನಡೆಸಬೇಕೆಂದು ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್ ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತುಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕುಷ್ಠರೋಗ ಅರಿವು ಸಂಚಾರಿ ರಥಕ್ಕೆ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಜನತೆ ಕುಷ್ಠರೋಗ ಪತ್ತೆ ಅಭಿಯಾನ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾದ್ಯಂತ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರದಡಿಯಲ್ಲಿ ಸೆ.5 ರಿಂದ 23 ರವರೆಗೆ ಕುಷ್ಠರೋಗ ಪ್ರಕರಣಗಳ ಪತ್ತೆ ಹಚ್ಚುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ರೋಗ ಪ್ರಕರಣಗಳನ್ನು ಸಂಪೂರ್ಣ ಸೊನ್ನೆಗೆ ತರುವ ಉದ್ದೇಶ ಹೊಂದಲಾಗಿದೆ. 2025ರ ವೇಳೆಗೆ ಜಿಲ್ಲೆಯನ್ನು ಸಂಪೂರ್ಣ ಕುಷ್ಠರೋಗ ಮುಕ್ತ ಜಿಲ್ಲೆ ಮಾಡಲಾಗುವುದು ಎಂದರು.
ಸಂಚಾರಿ ಕುಷ್ಠರೋಗ ಅರಿವು ರಥ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಅರಿವು ಮೂಡಿಸಬೇಕು. ಅಭಿಯಾನ ಕುರಿತು ಕ್ಷೇತ್ರ ಮಟ್ಟದಲ್ಲಿ ಜನ ಸಾಮಾನ್ಯರ ನಡುವೆ ಪರಿಣಾಮಕಾರಿ ಪ್ರಚಾರ ಕೈಗೊಳ್ಳಬೇಕೆಂದರು. ಕಾರ್ಯಕ್ರಮ ಕುರಿತು ಮಾಹಿತಿ ಶಿಕ್ಷಣ ಸಂಪರ್ಕ ಸಾಧನಗಳನ್ನು ಬಿಡುಗಡೆ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಂ.ಯೋಗೇಶ್ ಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅನಿಲ್ ಕುಮಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಚನ್ನಕೇಶವ ರೆಡ್ಡಿ, ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್, ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ರವಿಕುಮಾರ್, ಡಾ.ಮಂಜುಳಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಹೇಶ್ ಹಾಗೂ ಕಚೇರಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.