Advertisement

ಗ್ರಾ.ಪಂ. ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

09:55 PM Jul 23, 2019 | mahesh |

ಕಡಬ: ಕೋಡಿಂಬಾಳ ಗ್ರಾಮದ ಪಟ್ರಡ್ಕ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಮಾಂಸದ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದ ಅಶ್ರಫ್‌ನ ವಿರುದ್ಧ ಸ್ಥಳೀಯ ನಿವಾಸಿ ಸದಾನಂದ ಪಿ. ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಕಡಬ ಗ್ರಾ.ಪಂ.ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Advertisement

ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ ಹಾಗೂ ಪಿಡಿಒ ಚೆನ್ನಪ್ಪ ಗೌಡ ಕಜೆಮೂಲೆ ಅವರು ಅಶ್ರಫ್‌ ಅವರನ್ನು ಸ್ಥಳಕ್ಕೆ ಕರೆಸಿ ವಿಚಾರಣೆ ನಡೆಸಿದಾಗ ಅವರು ತಪ್ಪೊಪ್ಪಿಕೊಂಡಿದ್ದು, ಮುಂದೆ ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ತ್ಯಾಜ್ಯ ಸುರಿಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಪರವಾನಿಗೆ ಇಲ್ಲದೆ ವ್ಯಾಪಾರ
ಅವರು ಕೋಡಿಂಬಾಳ ಪೇಟೆಯಲ್ಲಿ ನಡೆಸುತ್ತಿರುವ ಕೋಳಿ ಮಾಂಸ ಮಾರಾಟದ ಅಂಗಡಿಯ ದಾಖಲೆಪತ್ರಗಳನ್ನು ಪರಿಶೀಲಿಸಿದಾಗ ಗ್ರಾ.ಪಂ. ನೀಡುವ ವ್ಯಾಪಾರ ಅನುಮತಿ ಪತ್ರ (ಲೈಸನ್ಸ್‌) ನವೀಕರಿಸದಿರುವುದು ಬೆಳಕಿಗೆ ಬಂದಿದೆ. ನಿಗದಿತ ರೀತಿಯ ಟ್ಯಾಂಕ್‌ ನಿರ್ಮಿಸಿ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಮಾಡಿ ಆಹಾರ ನಿರೀಕ್ಷಕರ ನಿರಾಕ್ಷೇಪಣ ಪತ್ರದೊಂದಿಗೆ ಅಗತ್ಯ ದಾಖಲೆ ಪತ್ರಗಳನ್ನು ಹಾಜರುಪಡಿಸಿ ಗ್ರಾ.ಪಂ.ನಿಂದ ಅನುಮತಿ ಪಡೆಯುವ ತನಕ ಅನಧಿಕೃತವಾಗಿ ನಡೆಸುತ್ತಿರುವ ವ್ಯಾಪಾರ ಸ್ಥಗಿತಗೊಳಿಸಲು ಪಿಡಿಒ ಆದೇಶಿಸಿದ್ದಾರೆ.

ಸಮರ್ಪಕ ವಿಲೇಗೆ ಸೂಚನೆ
ಕಡಬ ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 15ಕ್ಕೂ ಹೆಚ್ಚು ಕೋಳಿ ಮಾಂಸ ಮಾರಾಟದ ಅಂಗಡಿಗಳಿವೆ. ಎಲ್ಲ ಅಂಗಡಿಗಳವರು ಸಮರ್ಪಕ ರೀತಿಯಲ್ಲಿ ಕೋಳಿ ತ್ಯಾಜ್ಯಗಳನ್ನು ವಿಲೇವಾರಿಯ ವ್ಯವಸ್ಥೆ ಮಾಡಿಕೊಳ್ಳಲು ಈಗಾಗಲೇ ಸೂಚಿಸಲಾಗಿದೆ ಎಂದು ಗ್ರಾ.ಪಂ. ಪಿಡಿಒ ಅವರು ಹೇಳಿದ್ದಾರೆ.

ಅಂಗಡಿಗಳಿಗೆ ನೋಟಿಸ್‌
ಕೆಲವು ಅಂಗಡಿಗಳವರು ಸಾರ್ವಜನಿಕ ಸ್ಥಳಗಳಲ್ಲಿ ಕೋಳಿ ತ್ಯಾಜ್ಯಗಳನ್ನು ಸುರಿಯುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಕೋಳಿ ವ್ಯಾಪಾರದ ಅಂಗಡಿಗಳಿಗೆ ನೋಟಿಸ್‌ ನೀಡುತ್ತಿದ್ದೇವೆ. ನಾವು ಪರಿಶೀಲನೆಗೆ ತೆರಳುವ ವೇಳೆ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆಗಳು ಇಲ್ಲದೇ ಇದ್ದಲ್ಲಿ ಅಂತಹ ಅಂಗಡಿಗಳ ವ್ಯಾಪಾರ ಅನುಮತಿಯನ್ನು ರದ್ದುಗೊಳಿಸಿ ಅಂಗಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
– ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಪಿಡಿಒ

Advertisement
Advertisement

Udayavani is now on Telegram. Click here to join our channel and stay updated with the latest news.

Next