Advertisement

ಕುಟುಂಬವೊಂದಕ್ಕೆ ಬಹಿಷ್ಕಾರ; ತಹಶೀಲ್ದಾರ್‌ರಿಂದ ಸ್ಥಳ ಪರಿಶೀಲನೆ

06:13 PM Sep 14, 2022 | Suhan S |

ಸಾಗರ: ತಾಲೂಕಿನ ಬರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಳಕೆರೆ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿರುವ ದೂರಿನ ಹಿನ್ನೆಲೆಯಲ್ಲಿ ಬುಧವಾರ ತಹಶೀಲ್ದಾರ್ ಮಲ್ಲೇಶ್  ಬಿ. ಪೂಜಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದರು.

Advertisement

ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಲೆಗೆ ಜಾಗ ಮಂಜೂರಾಗಿರುವ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಶಾಲೆ ತುಂಬ ಚಿಕ್ಕದಾಗಿದ್ದು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಹಿಂದೆ ಗ್ರಾಮದ ಸರ್ವೇ ನಂ. 17 ರಲ್ಲಿ ಶಾಲೆ ನಿರ್ಮಾಣಕ್ಕಾಗಿ 3 ಎಕರೆ ಜಾಗವನ್ನು ಮೀಸಲು ಇರಿಸಲಾಗಿತ್ತು. ಇದೀಗ ಜಾಗವನ್ನು ರಮೇಶ್ ಅವರು ತಮಗೆ ಮಂಜೂರು ಆಗಿದೆ ಎಂದು ಹೇಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿ, ನಾವು ಯಾವುದೇ ರೀತಿಯ ಬಹಿಷ್ಕಾರ ಹಾಕಿಲ್ಲ. ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆಗೆ ಜಮೀನು ಮಂಜೂರು ಮಾಡಲು ಮನವಿ ಮಾಡಿದರು.

ಬಹಿಷ್ಕಾರ ಹಾಕಿದ್ದಾರೆ ಎಂದು ದೂರಿರುವ ಸಂತ್ರಸ್ತೆ ಜಯಲಕ್ಷ್ಮೀ ರಮೇಶ್, ಈ ಜಾಗವು 2003-04 ರಲ್ಲಿ ನಮಗೆ ಮಂಜೂರಾಗಿದ್ದು 2020 ರಲ್ಲಿ ನಮ್ಮ ಹೆಸರಿಗೆ ಖಾತೆಯಾಗಿದೆ. ಕಳೆದ ಹಲವು ವರ್ಷಗಳಿಂದ ನಾವು ಇಲ್ಲಿ ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದೇವೆ. ಈಗ ಶಾಲೆಗೆ ಜಾಗ ಬಿಟ್ಟುಕೊಟ್ಟಿಲ್ಲ ಎಂದು ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪಿಸಿದರು.

ಪರಸ್ಪರರ ದೂರು ಪ್ರತಿದೂರು ಆಲಿಸಿದ ತಹಶೀಲ್ದಾರ್, ರಮೇಶ್ ಅವರಿಗೆ ಜಮೀನು ಮಂಜೂರಾಗಿರುವ ಕುರಿತು ಕಚೇರಿಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ. ಶಾಲೆಗೆ 3 ಎಕರೆ ಸರ್ಕಾರಿ ಜಾಗವನ್ನು ಕೊಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದರೆ ಅದನ್ನು ಮೊದಲು ತೆರವುಗೊಳಿಸಿ. ಬಹಿಷ್ಕಾರ ಮುಂದುವರೆಸಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್, ಗ್ರಾಮ ಸುಧಾರಣಾ ಸಮಿತಿ ಪ್ರಮುಖರಾದ ಬಸವರಾಜ್, ಅಣ್ಣಪ್ಪ, ಶಿವಕುಮಾರ್, ಕನ್ನಪ್ಪ ಮುಳಕೆರೆ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next