ಇಟಾನಗರ( ಅರುಣಾಚಲ ಪ್ರದೇಶ): ಭಾರತ- ಚೀನಾ ಗಡಿಯಲ್ಲಿ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಮೀನು ಹಿಡಿಯಲು ಹೋಗಿದ್ದ ಐವರು ಭಾರತೀಯರನ್ನು ಚೀನಾ ಪಡೆಯ ಸೈನಿಕರು ಅಪಹರಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ನಿನೊಂಗ್ ಎರಿಂಗ್ ಆರೋಪಿಸಿದ್ದಾರೆ.
ಸುಬಾನ್ಸರಿ ಜಿಲ್ಲೆಯ ಭಾರತ – ಚೀನಾ ಗಡಿ ಭಾಗದಿಂದ ಐವರನ್ನು ಅಪಹರಿಸಲಾಗಿದೆ. ಅಪಹರಣಕ್ಕೆ ಒಳಗಾದವರನ್ನು ತನು ಬಾಕರ್, ಪ್ರಸತ್ ರಿಂಗ್ಲಿಂಗ್, ಗಾರು ದಿರಿ, ದೋಂಗ್ತು ಇಬಿಯಾ ಮತ್ತು ತೋಚ್ ಸಿಂಗ್ಕಮ್ ಎಂದು ಗುರುತಿಸಲಾಗಿದೆ. ಮೀನು ಹಿಡಿಯಲು ತೆರಳಿದ್ದ ವೇಳೆ ಇವರನ್ನು ಚೀನಿ ಸೈನಿಕರು ಅಪಹರಿಸಿದ್ದಾರೆ ಎನ್ನಲಾಗಿದೆ.
ಲಡಾಖ್ ಮತ್ತು ಡೋಕ್ಲಾಂ ಬಳಿಕ ಈಗ ಚೀನಾ ಪಡೆ ಅರುಣಾಚಲ ಪ್ರದೇಶದಲ್ಲಿ ತನ್ನ ಆಕ್ರಮಣ ಆರಂಭಿಸಿದೆ. ಅದೂ ಅಲ್ಲದೆ ಗಡಿ ರೇಖೆಯನ್ನೂ ದಾಟಿ ಬಂದಿದ್ದಾರೆ ಎಂದು ಶಾಸಕ ಎರಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ರಾಗಿಣಿಗೆ ಡ್ರಗ್ಸ್ ಸೇವಿಸಿ ಎಂದು ಹೇಳಿರಲಿಲ್ಲ,ಬಂಧನದಿಂದ ಬಿಜೆಪಿಗೆ ಮುಜುಗರವಿಲ್ಲ: ಸೋಮಶೇಖರ್
ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಗಡಿಯ ಗಡಿ ವಾಸ್ತವ ರೇಖೆಯು ಜಿಲ್ಲಾ ಕೇಂದ್ರ ದಪೊರಿಜೊದಿಂದ ಸುಮಾರು 260 ಕಿಲೋ ಮೀಟರ್ ದೂರದಲ್ಲಿದ್ದು ಅದಕ್ಕೆ ಹತ್ತಿರದ ಪೊಲೀಸ್ ಠಾಣೆ ನಚೊ ಸುಮಾರು 130 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ರಸ್ತೆ ಸಂಪರ್ಕ ಇಲ್ಲದಿರುವುದರಿಂದ ಗ್ರಾಮಸ್ಥರು ಟ್ರಕ್ ಮೂಲಕ ಹೋಗಬೇಕು. ಮೊಬೈಲ್ ಸಂಪರ್ಕ ಸಮಸ್ಯೆ ಕೂಡ ಇದೆ.
ನಮಗೆ ಯಾವುದೇ ರೀತಿಯ ಅಧಿಕೃತ ದೂರು ಬಂದಿಲ್ಲ. ಸಾಮಾಜಿಕ ಜಾಲತಾಣದ ಸುದ್ದಿಯನ್ನು ಗಮನಿಸಿದ್ದೇವೆ. ಇದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಸ್ಥಳೀಯ ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ.