ಬೆಂಗಳೂರು: ಐಪಿಎಲ್ ತಂಡಗಳ ಜೆರ್ಸಿ ವಿಚಾರವಾಗಿ ಟ್ವಿಟರ್ ಎಡವಟ್ಟು ಮಾಡಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿಯ ಇಮೋಜಿ ಪೋಸ್ಟ್ ಮಾಡಿ ಅಪಹಾಸ್ಯಕ್ಕೀಡಾಗಿದೆ.
ಈ ಬಾರಿಯ ಐಪಿಎಲ್ ಪಂದ್ಯಗಳ ಸೆಣಸಾಟಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಕ್ರಿಕೆಟ್ ಪ್ರೇಮಿಗಳಲ್ಲಿ ಐಪಿಎಲ್ ಜ್ವರ ಜೋರಾಗಿಯೇ ಕಾಣಿಸಿಕೊಂಡಿದೆ. ತಮ್ಮ ನೆಚ್ಚಿನ ತಂಡಗಳಿಗೆ ಬೆಂಬಲಿಸುವ ಹ್ಯಾಷ್ ಟ್ಯಾಗ್, ಮೀಮ್ಸ್ ಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದರ ನಡುವೆ ಟ್ವಿಟರ್ ವೊಂದು ಪ್ರಮಾದ ಮಾಡಿದ್ದು,ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದೆ.
ಪ್ರತಿವರ್ಷ ಟ್ವಿಟರ್ ಐಪಿಎಲ್‍ನಲ್ಲಿ ಭಾಗವಹಿಸುವ ತಂಡಗಳ ಹ್ಯಾಷ್ ಟ್ಯಾಗ್ ಹಾಗೂ ಜೆರ್ಸಿಯ ಇಮೋಜಿಗಳನ್ನು ರಿಲೀಸ್ ಮಾಡುತ್ತದೆ. ಪ್ರತಿವರ್ಷದಂತೆ ಈ ಬಾರಿಯೂ ಕೂಡ ಎಲ್ಲ ತಂಡಗಳಿಗಾಗಿ ಹ್ಯಾಷ್ ಟ್ಯಾಗ್ ಹಾಗೂ ಜೆರ್ಸಿ ಇಮೋಜಿಗಳನ್ನು ರಿವೀಲ್ ಮಾಡಿದೆ. ಆದರೆ, ಈ ವೇಳೆ ಒಂದು ತಪ್ಪು ಮಾಡಿದೆ. ಆರ್ ಸಿ ಬಿ ತಂಡದ ಹ್ಯಾಷ್ ಟ್ಯಾಗ್ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಳದಿ ಬಣ್ಣದ ಜೆರ್ಸಿಯ ಇಮೋಜಿ ಟ್ವೀಟ್ ಮಾಡಿದೆ.
ಟ್ವಿಟರ್ ನಿಂದ ಜರುಗಿರುವ ಈ ಅಚಾತುರ್ಯ ಗಮನಿಸಿರುವ ಕ್ರಿಕೆಟ್ ಪ್ರೇಮಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಟ್ವಿಟರ್ ವಿರುದ್ಧವೂ ಟೀಕಿಸಿರುವ ನೆಟ್ಟಿಗರು, ನಿಮಗೆ ಒಳ್ಳೆಯ ತಂತ್ರಜ್ಞರ ಅಗತ್ಯ ಎಂದು ಸಲಹೆ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಟ್ವಿಟರ್ ಖಾತೆಯೂ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಟ್ವಿಟರ್ ಈಗ ಸರಿಯಾದ ದಾರಿಯಲ್ಲಿದೆ ಎಂದು ಟ್ವೀಟ್ ಮಾಡಿದೆ. ಕೆಲವರು ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿಯಲ್ಲಿ ವಿರಾಟ್ ಫೋಟೊ ಅಂಟಿಸಿ, ಈ ಬಾರಿ ವಿರಾಟ್ ಕೊಹ್ಲಿ ಚೆನ್ನೈ ತಂಡದ ಪರವಾಗಿ ಮೈದಾನಕ್ಕೆ ಇಳಿಯಲಿದ್ದಾರೆಯೇ ಎಂದು ಛೇಡಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮಹೇಂದ್ರ ಸಿಂಗ್ ಧೋನಿಯವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನೆಡಸಲಿದ್ದಾರೆ.