ಹೈದರಾಬಾದ್: ಬಹುಶಃ ಈ ಬಾರಿ ಪ್ರೊ ಕಬಡ್ಡಿಯಲ್ಲಿ ದಾಖಲಾದ ಅತ್ಯಂತ ರೋಮಾಂಚಕ ಪಂದ್ಯವೆಂದರೆ ಭಾನುವಾರದ ಬೆಂಗಳೂರು ಬುಲ್ಸ್-ದಬಾಂಗ್ ಡೆಲ್ಲಿ ನಡುವಿನದ್ದು. ಇಡೀ ಪಂದ್ಯಪೂರ್ತಿ ಹಿನ್ನಡೆ ಹೊಂದಿದ್ದ ಬೆಂಗಳೂರು ಪಂದ್ಯ ಮುಗಿದಾಗ ಗೆಲ್ಲುತ್ತದೆಂದು ಯಾರೂ ಊಹಿಸಿರಲಿಲ್ಲ.
ಪಂದ್ಯದ ಮೊದಲರ್ಧದಲ್ಲಿ ಡೆಲ್ಲಿ 25, ಬೆಂಗಳೂರು 16 ಅಂಕಗಳನ್ನು ಗಳಿಸಿದ್ದವು. 2ನೇ ಅವಧಿಯ ಕೊನೆಯ ಆರು ನಿಮಿಷಗಳವರೆಗೂ ಪರಿಸ್ಥಿತಿ ಡೆಲ್ಲಿ ನಿಯಂತ್ರಣದಲ್ಲೇ ಇತ್ತು. ಅದಾದ ಮೇಲೆ ದಿಢೀರನೆ ಸ್ಥಿತಿ ಬದಲಾಯಿತು. 52 ಅಂಕ ಗಳಿಸಿದ್ದ ಬೆಂಗಳೂರು, 49 ಅಂಕ ಗಳಿಸಿದ್ದ ಡೆಲ್ಲಿಯನ್ನು ಹಿಂದಕ್ಕೆ ತಳ್ಳಿ ಗೆಲುವು ಸಾಧಿಸಿತು.
ಬೆಂಗಳೂರು ಪರ ದಾಳಿಗಾರ ಭರತ್ ಅದ್ಭುತವಾಗಿ ಹೋರಾಡಿದರು. ಅವರು 24 ದಾಳಿಗಳಲ್ಲಿ 23 ಅಂಕ ಗಳಿಸಿದರು. ವಿಕಾಶ್ ಕಂಡೊಲ 14 ದಾಳಿಗಳಲ್ಲಿ 10 ಅಂಕ ಗಳಿಸಿದರು. ರಕ್ಷಣಾ ವಿಭಾಗದಲ್ಲಿ ಎಂದಿನಂತೆ ಅಮನ್ ಉತ್ತಮವಾಗಿ ಪ್ರದರ್ಶನ ನೀಡಿ 4 ಅಂಕ ಗಳಿಸಿದರು.
ಡೆಲ್ಲಿ ಪರ ವಿಕಾಶ್ ಮಲಿಕ್ 14 ದಾಳಿಗಳಲ್ಲಿ 14 ಅಂಕ ಸಂಪಾದಿಸಿದರು. ಹಾಗೆ ನೋಡಿದರೆ ಖ್ಯಾತ ದಾಳಿಗಾರ ನವೀನ್ ಕುಮಾರ್ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಅವರು 23 ದಾಳಿಗಳಲ್ಲಿ 11 ಅಂಕ ಮಾತ್ರ ಪಡೆದರು. ಬಹುಶಃ ಡೆಲ್ಲಿಗೆ ಹಿನ್ನಡೆಯಾಗಿದ್ದು ಇಲ್ಲೇ.
Related Articles