ನವದೆಹಲಿ: “ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಲಾಗುತ್ತಿದೆ. ಹಾಗಿದ್ದರೆ ಅರ್ಥ ವ್ಯವಸ್ಥೆಗೆ ಒಳ್ಳೆಯದೇ ಆಗುತ್ತದೆ ಬಿಡಿ. ಏಕೆಂದರೆ ಕೆಲಸ ಕಳೆದುಕೊಂಡವರೆಲ್ಲ ಸ್ವಂತ ಉದ್ಯೋಗ ನಿರತರಾಗುತ್ತಾರೆ’
– ಹೀಗೆಂದು ಹೇಳಿರುವುದು ರೈಲ್ವೆ ಸಚಿವ ಪಿಯೂಷ್ ಗೋಯಲ್.
ಭಾರತದ ಆರ್ಥಿಕ ಶೃಂಗದಲ್ಲಿ ಮಾತನಾಡುತ್ತಾ ಅವರು ಈ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ಉದ್ಯೋಗ ಕ್ಷೇತ್ರದಲ್ಲಿನ ಆತಂಕದ ಬಗ್ಗೆ ಪ್ರಸ್ತಾಪಿಸುತ್ತಾ ಭಾರ್ತಿ ಏರ್‌ಟೆಲ್ ಅಧ್ಯಕ್ಷ ಸುನಿಲ್ ಭಾರತಿ ಮಿತ್ತಲ್ ಅವರು “ದೇಶದಲ್ಲಿನ ಟಾಪ್ 200 ಕಂಪನಿಗಳು ಉದ್ಯೋಗ ಸೃಷ್ಟಿಗೆ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ವ್ಯಾಪಾರ, ಉದ್ಯೋಗ ವಲಯದಲ್ಲಿ ಆತಂಕದ ಸ್ಥಿತಿ ಉಂಟಾಗಿದೆಯಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಗೋಯಲ್, ಕೆಲಸ ಕಳೆದುಕೊಂಡವರೆಲ್ಲ ಸ್ವಂತ ಉದ್ಯೋಗ ಆರಂಭಿಸಿ ಕೆಲಸ ಕೊಡುವವರಾಗಿ ಮಾರ್ಪಾಡಾಗುತ್ತಿದ್ದಾರೆ. ಅರ್ಥವ್ಯವಸ್ಥೆಯ ದೃಷ್ಟಿಯಿಂದ ಇದೊಂದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ. ಹಣಕಾಸು ಖಾತೆ ಮಾಜಿ ಸಚಿವ ಯಶವಂತ್ ಸಿನ್ಹಾ ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ದೇಶದ ಅರ್ಥವ್ಯವಸ್ಥೆ ಬಗ್ಗೆ ಬರೆದಿರುವ ಲೇಖನದಿಂದ ಉಂಟಾಗಿರುವ ಕೋಲಾಹಲದ ನಡುವೆಯೇ ಹಣಕಾಸು ಸಚಿವ ಜೇಟ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅರ್ಥವ್ಯವಸ್ಥೆ ಕುಸಿದು ಹೋಗಿಲ್ಲ ಎಂದು ಬಲವಾಗಿ ಸಮರ್ಥನೆ ನೀಡಿರುವಂತೆಯೇ ಕೇಂದ್ರ ಸಚಿವ ಗೋಯ ಲ್‌ರಿಂದ ಈ ಹೇಳಿಕೆ ಬಂದಿದೆ.