ಕಳೆದ ವಾರ ಇದ್ದಕ್ಕಿದ್ದಂತೆ ತಲೆ ನೋವು ಜಾಸ್ತಿ ಆಯ್ತು. ವಾಂತಿ ಶುರುವಾಯಿತು. ಹೆಂಡತಿಗೂ ಮನೆ ಕೆಲಸ, ಮಕ್ಕಳ ಚಾಕರಿ ಮತ್ತು ಆಫೀಸ್ ಕೆಲಸ. ಹಾಸಿಗೆಯಿಂದ ಏಳಲೂ ಆಗುತ್ತಿಲ್ಲ. ಅವಳಂತೂ ಅಡುಗೆ ಮನೆಯಲ್ಲೇ ಲ್ಯಾಪ್‌ಟಾಪ್ ಇಟ್ಟುಕೊಂಡು, ಒಗ್ಗರಣೆ ಹಾಕುವಾಗ ಒಂದು ಫೈಲ್ ನೋಡೋದು, ಅನ್ನಕ್ಕೆ ಇಟ್ಟಾಗ ಬಾಸ್‌ಗೆ ವರದಿ ಕೊಡೋದು, ಇದರ ಮಧ್ಯೆ, ಮಕ್ಕಳು ಗಲಾಟೆ ಮಾಡಿದಾಗ ಹಾಲಿಗೆ ಓಡಿಬರೋದು ಮಾಡುತ್ತಳೇ ಇದ್ದಳು.
ನನಗೋ ಒಳಗೊಳಗೇ ಭಯ. ಈ ತಲೆ ನೋವೇನಾದರೂ ಕೊರೊನಾದ ಲಕ್ಷಣವೇ ಅನ್ನೋ ಅನುಮಾನ ಶುರುವಾದ ಮೇಲೆ, ನೋವು ಇನ್ನೂ ಜಾಸ್ತಿಯಾಯಿತು. ಇದನ್ನು ಹೆಂಡತಿ ಮಕ್ಕಳಿಗೆ ಹೇಗೆ ಹೇಳ್ಳೋದು? ರೂಮಿನ ಬಾಗಿಲು ಹಾಕಿ ಮಲಗಿದೆ. ಹೊರಗೆ ಹೆಂಡತಿಯ ಭರತನಾಟ್ಯ. ಎಂಥಾ ಶಿಕ್ಷೆ ಗೊತ್ತಾ? ಅವರ ಅಮ್ಮನನ್ನು ಕಷ್ಟಕಾಲಕ್ಕೆ ಕರೆಸೋಣ ಅಂದರೆ, ಆಕೆ ಇರೋದು ಶಿರಸಿಯಲ್ಲಿ. ಅಲ್ಲಿಂದ ಬರುವುದಾದರೂ ಹೇಗೆ? ಇಂಥ ಸಂದರ್ಭದಲ್ಲಿ ನೆರವಿಗೆ ಬಂದದ್ದು, ಆತ್ಮೀಯ ಗೆಳೆಯ, ಆಯುರ್ವೇದ ಪಂಡಿತ ಚಂದ್ರಕಾಂತ.
ಏತಕ್ಕೋ ಕರೆ ಮಾಡಿದವನು, ನನ್ನ ದೀನ ಸ್ಥಿತಿಯ ಹಿನ್ನೆಲೆ, ಮುನ್ನೆಲೆಯ ಮಾಹಿತಿ ಪಡೆದವನೇ, ಅದಕ್ಕೆ ಔಷಧ ಹೇಳಿದ. ಜೀರಿಗೆ ಕಷಾಯ ಮಾಡಿ, ಅದಕ್ಕೆ ಇಂತಿಂಥದ್ದನ್ನು ಬೆರೆಸಿ, ದಿನಕ್ಕೆ ಐದು ಸಲ ಕುಡಿಯಲು ಹೇಳಿದ. ನನ್ನ ಸ್ಥಿತಿಯನ್ನು ಕಡೆಗೊಮ್ಮೆ ಹೆಂಡತಿಗೆ ಹೇಳಿಕೊಂಡೆ. ಅವಳು ಅದು ಹೇಗೋ ಸಮಯ ಹೊಂದಿಸಿಕೊಂಡು ಕಷಾಯ ಮಾಡಿಕೊಟ್ಟಳು. ಒಂದು ದಿನ ಪೂರ್ತಿ ಅದನ್ನೇ ಕುಡಿದಾದ ಮೇಲೆ, ತಲೆನೋವು ಸ್ವಲ್ಪ ಕಡಿಮೆಯಾಯಿತು.
ನಮ್ಮ ಫಜೀತಿಯ ವಿವರವನ್ನೆಲ್ಲ ಫೋನ್ ಮೂಲಕ ತಿಳಿದ ಸಂಬಂಧಿಗಳು, ಅಯ್ಯೋ, ಪಾಪ.. ಛೇ, ಹೀಗಾಗಬಾರದಿತ್ತು ಅಂತೆಲ್ಲಾ ಲೊಚಗುಟ್ಟಿದರು. ತೋರಿಕೆಗೆ ಸಮಾಧಾನದ ಮಾತಾಡಿದರು. ನಮ್ಮ ಮನೆಯ ಮೇಲಿನ ಮಹಡಿಯಲ್ಲಿದ್ದ ಮನೆ ಮಾಲೀಕರಿಗೆ, ನಮ್ಮ ನರಳಾಟ ಕೇಳಿಸಿತೋ ಏನೋ; ಇಡೀ ಮನೆಯನ್ನು ಸೀಲ್‌ಡೌನ್ ಮಾಡಿಕೊಂಡಿದ್ದರು. ನಮ್ಮ ಮನೆ ಕಡೆ ಇಣುಕುವುದರಿಲಿ, ತಮ್ಮ ಉಸಿರು ಕೂಡ ಇತ್ತ ಸುಳಿಯದಂತೆ ನೋಡಿಕೊಂಡರು.
ಈ ಸಂದರ್ಭದಲ್ಲೇ, ನನಗೆ ಹೀಗೇಕಾಯಿತು ಎಂದು ಕಾರಣ ಹುಡುಕಿದೆ. ನನಗೆ ಪಿತ್ತ ಹೆಚ್ಚಾಗಿದ್ದರಿಂದ ವಾಂತಿಯಾಗಿತ್ತು. ಪಿತ್ತಕ್ಕೆ ಕಾರಣ, ಕಡಲೇ ಬೀಜ. ಊರಿಂದ ತಂದಿದ್ದ ಕಡಲೇ ಬೀಜವನ್ನು, ಅರ್ಧ ಕೆ.ಜಿ.ಯಷ್ಟು ತಿಂದುಹಾಕಿದ್ದೆ. ಇದು ಹೆಂಡತಿಗೂ ತಿಳಿದಿರಲಿಲ್ಲ. ಹೀಗಾಗಿ, ಪಿತ್ತವಾಗಿ, ವಾಂತಿ ಆಗಿತ್ತು. ಆದ್ದರಿಂದ ಮೂಗು, ಕಣ್ಣೆಲ್ಲಾ ಕೆಂಪಾಗಿತ್ತು. ಅದರ ಹಿಂದೆಯೇ ತಲೆನೋವೂ ಜೊತೆಯಾಗಿತ್ತು.
ಆಗಲೇ ಮನೆ ಮಾಲೀಕರು, ಲೈಟ್ ಬಿಲ್ ಕೊಡಲು ಬಂದರು. ನನ್ನ ಸ್ಥಿತಿ ನೋಡಿ ಚಂಗನೆ ಓಡಿದವರು, ಮತ್ತೆ ಬರಲೇ ಇಲ್ಲ. ಒಂದು ದಿನದ ನಂತರ, ತಲೆಯಿಂದ ನೋವು, ಭಾರ ಇಳಿಯುತ್ತಾ ಹೋಯಿತು. ಹೆಂಡತಿಯ ಮೇಲಿದ್ದ ಭಾರವೂ ಕಡಿಮೆಯಾಗುತ್ತಾ ಹೋಯಿತು. ಅವರವರ ಜವಾಬ್ದಾರಿಗಳನ್ನು ನಿಭಾಯಿಸುವ ಹೊತ್ತಿಗೆ ಹೆಂಡತಿ ಹಾಸಿಗೆ ಹಿಡಿದಳು! ಆಮೇಲಿನ ನನ್ನ ಕತೆಯನ್ನು ನೀವೇ ಊಹಿಸಿಕೊಳ್ಳಿ…