Advertisement

ಪಿತೃಪಕ್ಷ: ಇಂದು ಸರ್ವಪಿತೃ ಅಮಾವಾಸ್ಯೆ

10:03 PM Sep 27, 2019 | Sriram |

ಸರ್ವ ಪಿತೃ ಅಮಾವಾಸ್ಯೆಯಂದು ಮಾಡುವಂತಹ ಪಿತೃಶ್ರಾದ್ಧವನ್ನು ಶ್ರದ್ಧಾ ಪೂರ್ವಕವಾಗಿ ಮಾಡಬೇಕು. ಇದನ್ನು ನಮ್ಮ ಆದ್ಯ ಕರ್ತವ್ಯವೆಂದೇ ಭಾವಿಸಿ ಮಾಡಿದಾಗ ಮಾತ್ರ ನಮ್ಮ ಪಿತೃಗಳು ಸಂತುಷ್ಟರಾಗಿ ಅವರ ಅನುಗ್ರಹ ಪ್ರಾಪ್ತವಾಗಲಿದೆ.

Advertisement

ಕುಂದಾಪುರ: ಪಿತೃ ಅಮಾವಾಸ್ಯೆ ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಧರ್ಮೀಯರಿಗೆ ಪವಿತ್ರವಾದ ಆಚರಣೆಗಳಲ್ಲಿ ಒಂದಾಗಿದೆ. ಸಂವತ್ಸರ ಪೂರ್ತಿ ಪಿತೃದೇವತೆಗಳು ಸಂತೃಪ್ತರಾಗಿರಬೇಕಾದರೆ ಭಾದ್ರಪದ ಕೃಷ್ಣ ಪಕ್ಷದ ಈ ಪಿತೃಪಕ್ಷದಲ್ಲಿ ಒಂದು ದಿನವಾದರೂ ಶ್ರಾದ್ಧ ಕರ್ಮಾದಿಗಳನ್ನು ಮಾಡಬೇಕು.

ಮನೆಯಲ್ಲಿ ಅಶಾಂತಿ, ಭಯ ಕಂಟಕಗಳು ಇದ್ದಲ್ಲಿ ಇದನ್ನು ಪಿತೃಶಾಪ ಎನ್ನುವುದಾಗಿದೆ. ಇದಕ್ಕೆ ಕಾರಣ ಪಿತೃಕಾರ್ಯಗಳು ಸರಿಯಾಗಿ ನಡೆಯ ದಿದ್ದರೆ ಹೀಗೆ ಆಗುತ್ತೆ ಎನ್ನುತ್ತದೆ ಜೋತಿಷ ಶಾಸ್ತ್ರ. ಹಾಗಾಗಿ ಈ ಮಹಾಲಯದಲ್ಲಿ ಪಿಂಡಪ್ರದಾನ ಪೂರ್ವಕವಾದ ಶ್ರಾದ್ಧ ಮಾಡುವುದು. ಈ ಪಿತೃಪಕ್ಷದ ಹದಿನಾರು ದಿನಗಳಲ್ಲಿ ಒಂದು ದಿನ ಶ್ರಾದ್ಧ ಮಾಡುವುದರ ಜತೆಯಲ್ಲಿ ಈ ಹದಿನಾರು ದಿನಗಳಲ್ಲಿ ದ್ವಾದಶಪಿತೃಗಳಿಗೆ ಅಥವಾ ಸರ್ವಪಿತೃಗಳಿಗೆ ತರ್ಪಣ ಕೊಡಬೇಕು.

ಪಿತೃಪಕ್ಷದಲ್ಲಿ ಮಾಡುವ ಪಿತೃಕಾರ್ಯ ಗಳು ಬಹು ದೊಡ್ಡ ಯಜ್ಞಕ್ಕೆ ಸಮಾನ ವಾದದ್ದು ಎಂಬುದಾಗಿ ಪದ್ಮಪುರಾಣದಲ್ಲಿ ತಿಳಿಸಲಾಗಿದೆ. ಈ ಸಮಯದಲ್ಲಿ ಅಂದರೆ ಮಹಾಲಯ ಅಮಾವಾಸ್ಯೆಯವರೆಗೆ ದೇವತಾ ಕಾರ್ಯಗಳು ಶುಭ ಕಾರ್ಯಗಳು ಹಾಗೂ ವಿವಾಹ ಮಾಡುವಂತಿಲ್ಲ. ಮರಣ ಹೊಂದಿದ ಪೂರ್ವಜರ ನೆನಪಿ ಗಾಗಿ ಅವರನ್ನು ದೇವತಾ ಸ್ವರೂಪಿ ಗಳೆಂದು ಅವರಿಗಾಗಿ ಮಾಡುವ ಈ ಪಿತೃಕರ್ಮಾಂಗಗಳು ಈ ಮಹಾಲಯ ಪಕ್ಷದಲ್ಲಿ ಮಾಡುವುದರಿಂದ ವಿಶೇಷ ಪುಣ್ಯ ಲಭಿಸಿ, ಪಿತೃಗಳು ತೃಪ್ತರಾಗುತ್ತಾರೆ.

ಈ ಪಿತೃಪಕ್ಷ ಮಹಾ ಲಯದ ಸರ್ವಪಿತೃ ಅಮಾವಾಸ್ಯೆ ಯಂದು ಮಾಡುವ ಪಿತೃಶ್ರಾದ್ಧ ವಿಧಿಯಿಂದ ಪರಲೋಕದ ಪಿತೃಗಳಿಗೆ ಸದ್ಗತಿಯುಂಟಾಗಲಿದೆ. ಈ ಸರ್ವ ಪಿತೃ ಅಮಾವಾಸ್ಯೆಯಂದು ಮಾಡುವ ಪಿಂಡಪ್ರದಾನ, ತಿಲಹೋಮ, ತೀರ್ಥಸ್ನಾನ, ಅದರಲ್ಲೂ ಸಮುದ್ರ ಸ್ನಾನ ಇತ್ಯಾದಿಗಳಿಂದ ವಿಶೇಷ ಪುಣ್ಯ ಲಭಿಸುತ್ತದೆ ಎಂಬುದು ಪುರಾಣಗಳಲ್ಲಿ ಉಲ್ಲೇಖ.

Advertisement

ಮಹಾಲಯ ಎಂದರೆ “ಪಿತೃಲೋಕ’ ಎಂಬುದಾಗಿ ತಿಳಿದು ಬರುತ್ತದೆ. ಮಹಾಲಯವನ್ನು “ಬ್ರಹ್ಮಲೋಕ’ ವೆಂತಲೂ ಕರೆಯುತ್ತಾರೆ.

“ಧರ್ಮೋ ರಕ್ಷತಿ ರಕ್ಷಿತಃ’ ಎಂಬಂತೆ ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ಸತ್ಯ ಅರಿತು ಇಂತಹ ಧಾರ್ಮಿಕ ಆಚರಣೆಗಳನ್ನು ಶುದ್ಧ ಮನಸ್ಸಿನಿಂದ ಆಚರಿಸುವಂತಾಗಲಿ.

-ವೈ. ಎನ್‌. ವೆಂಕಟೇಶಮೂರ್ತಿ ಭಟ್ಟ, ಪ್ರಧಾನ ಅರ್ಚಕರು, ಶ್ರೀ ಮುಖ್ಯಪ್ರಾಣ ದೇವಸ್ಥಾನ ದೊಡ್ಮನೆಬೆಟ್ಟು, ಕೋಟೇಶ್ವರ

Advertisement

Udayavani is now on Telegram. Click here to join our channel and stay updated with the latest news.