ಮೈಸೂರು: ರಾಜ್ಯಕ್ಕೆ ವ್ಯಾಪಿಸಿರುವ ಅಕ್ರಮ ಪಿಸ್ತೂಲ್ ಮಾಫಿಯಾ ಸಮಸ್ಯೆಯನ್ನು ಮೂಲದಲ್ಲೇ ಬಗೆಹರಿಸಿದರೆ ಮಾತ್ರ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿ ಶನಿವಾರ ನಡೆದ 2ನೇ ತಂಡದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಮಾತನಾಡಿದರು. ಉತ್ತರ ಪ್ರದೇಶದಲ್ಲಿ ಶಸ್ತ್ರಗಳು ಸುಲಭವಾಗಿ ಸಿಗುತ್ತವೆ. ಹೀಗಾಗಿ ಕರ್ನಾಟಕ ರಾಜ್ಯಕ್ಕೆ ಈ ಎರಡು ರಾಜ್ಯಗಳಿಂದ ಅಕ್ರಮವಾಗಿ ಪಿಸ್ತೂಲು ರವಾನೆ ಆಗುತ್ತಿದೆ. ಈ ಮಾಫಿಯಾವನ್ನು ಮೂಲದಲ್ಲೇ ಬಗೆಹರಿಸಿದರೆ ಮಾತ್ರ ನಿಯಂತ್ರಿಸಲು ಸಾಧ್ಯವಿದೆ ಎಂದರು.
ಗೌರಿ ಹತ್ಯೆ ಪ್ರಕರಣದ ಪ್ರಗತಿಯ ಬಗ್ಗೆ ವಿಧಾನಸೌಧದಲ್ಲಿ ವಿವರಿಸಿದ್ದು, ಅದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಉಳಿದ ಮಾಹಿತಿಯನ್ನು ಎಸ್‌ಐಟಿ ಮುಂದಿನ ದಿನಗಳಲ್ಲಿ ತಿಳಿಸಲಿದೆ ಎಂದು ಸ್ಪಷ್ಟಪಡಿಸಿದರು.
ಸುಳ್ಳು ಕೇಸ್: ರಾಜಕೀಯ ಕಾರಣಕ್ಕಾಗಿ ರೌಡಿಶೀಟ್, ಕೇಸ್ ದಾಖಲಿಸಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪ ತಳ್ಳಿಹಾಕಿದರು. ಬಿಜೆಪಿ ಮತ್ತು ಜೆಡಿಎಸ್‌ನವರು ಸುಮ್ಮನೆ ಸಲ್ಲದ ಆರೋಪ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಯಾರ ಮೇಲೂ ಕೇಸ್ ಹಾಕಿಲ್ಲ. ಅದರ ಅಗತ್ಯವೂ ನಮಗಿಲ್ಲ.
ಕೊಲೆ, ಕೊಲೆಯತ್ನ ಮುಂತಾದ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳ ಮೇಲೆ ರೌಡಿ ಶೀಟ್ ಓಪನ್ ಮಾಡಲಾಗಿದೆ. ವಯಸ್ಸಾದವರು, ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗದ ವ್ಯಕ್ತಿಗಳ ಮೇಲಿರುವ ರೌಡಿಶೀಟ್ ಮುಚ್ಚುವಂತೆ ತಾವೇ ಅಧಿಕಾರಿಗಳಿಗೆ ಹೇಳಿದ್ದು, ಚುನಾವಣೆ ಹತ್ತಿರದಲ್ಲಿರುವ ಕಾರಣಕ್ಕೆ ಇಂತಹ ಆರೋಪ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಸಂಬಂಧ ಕೇಂದ್ರ ಚುನಾವಣಾ ಆಯೋಗವು ಏಳು ಅಂಶಗಳನ್ನು ತಿಳಿಸಿದ್ದೆ. ಸ್ಥಳೀಯ ಜಿಲ್ಲೆಯವರನ್ನು, ಮೂರು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವವರನ್ನು ವರ್ಗಾವಣೆ ಮಾಡಬೇಕು ಎಂದು ಆಯೋಗ ಸೂಚಿಸಿದೆ. ಅದರಂತೆ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆಗಲಿದೆ. ವೇತನ ಆಯೋಗದ ಶಿಫಾರಸ್ಸಿನಂತೆ ಪೊಲೀಸರ ವೇತನ ಪರಿಷ್ಕರಿಸಲಾಗುವುದು.
-ರಾಮಲಿಂಗಾರೆಡ್ಡಿ, ರಾಜ್ಯ ಗೃಹ ಸಚಿವ