ಪಿರಿಯಾಪಟ್ಟಣ: ಇಲ್ಲಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಪ್ರತಿ ವರ್ಷ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ. ಮಹದೇವ್ ಆಗಮಿಸಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ಇವರಿಬ್ಬರ ಗೈರು ಹಾಜರಿಯಲ್ಲಿ ತಂಬಾಕು ಮಂಡಳಿ ಉಪಾಧ್ಯಕ್ಷ, ಮಾಜಿ ಶಾಸಕ ಹೆಚ್.ಸಿ. ಬಸವರಾಜು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ನೆರೆ ಹಾವಳಿ, ಲಾಕ್ಡೌನ್ ಸಮಸ್ಯೆಯಿಂದ ರೈತರು ತತ್ತರಿಸಿ ಹೋಗಿದ್ದು, ಈ ಬಾರಿಯೂ ಭೂಮಿಗೆ ಬಿತ್ತಿದ ತಂಬಾಕು ಬೆಳೆ, ಅತೀವೃಷ್ಠಿಗೆ ತುತ್ತಾಗಿ ಬೆಳೆ ಕುಂಠಿತವಾಗಿ ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ಈ ಸಂದರ್ಭದಲ್ಲಿ ಸರ್ಕಾರ ಮತ್ತು ತಂಬಾಕು ಮಂಡಳಿ ಅವರ ನೆರವಿಗೆ ಧಾವಿಸಿ ಸೂಕ್ತ ಬೆಂಬಲ ಬೆಲೆ ನೀಡಬೇಕು ಅದಕ್ಕಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಖರೀದಿದಾರ ಕಂಪನಿಗಳಿಗೆ ಸಮರ್ಪಕ ಬೆಂಬಲ ಬೆಲೆ ನೀಡುವಂತೆ ಸೂಚಿಸಲಾಗಿದೆ ಎಂದರು.
ಮುಂದುವರೆದು, ಆರಂಭದಲ್ಲಿ 200 ರೂ.ಗೆ ಹರಾಜು ಮಾಡಲಾಗಿದೆ. ಅದರಿಂದ ಇಂದು ಪ್ರಾರಂಭದ ದಿನ ಐದು ಕಂಪನಿಗಳು ಖರೀದಿಯಲ್ಲಿ ಭಾಗವಹಿಸಿದ್ದು, 9 ಬ್ಯಾಂಕ್ ಗಳು ಗ್ಯಾರಂಟಿಯ ಬಗ್ಗೆ ಬೆಂಬಲ ಸೂಚಿಸಿವೆ. ಇನ್ನು ಕೆಲವು ದಿನಗಳಲ್ಲಿ ಆಂಧ್ರಪ್ರದೇಶ ಹರಾಜು ಮಾರುಕಟ್ಟೆ ಮುಗಿಯಲಿದ್ದು, ನಂತರ 21 ಕಂಪನಿಗಳು ತಂಬಾಕು ಖರೀದಿಯಲ್ಲಿ ಭಾಗವಹಿಸಲಿವೆ. ಆದ್ದರಿಂದ ತಂಬಾಕು ಖರೀದಿದಾರರು ತಂಬಾಕು ಬೆಲೆಯಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದರು.
ಉತ್ತಮ ಮಾರುಕಟ್ಟೆ ನಿರೀಕ್ಷೆ: ತಂಬಾಕು ಹರಾಜು ಮಂಡಳಿ ಕಾರ್ಯದರ್ಶಿ ವೇಣುಗೋಪಾಲ್ ಮಾತನಾಡಿ, ಕಳೆದ ಬಾರಿ 185 ರೂ. ಗಳಿಂದ ಆರಂಭವಾಗಿ 206 ರೂ. ಗಳ ವರೆಗೆ ಮಾರಾಟವಾಗಿದ್ದು, ಈ ಬಾರಿ ತಂಬಾಕು 200 ರೂ.ಗಳಿಗೆ ಆರಂಭ ಕಂಡಿರುವುದು ರೈತರಿಗೆ ತುಸು ಸಮಾಧಾನ ತಂದಿದೆ. ಬ್ರೆಜಿಲ್ ಮತ್ತು ಜಿಂಬಾಬ್ವೆ ದೇಶಗಳಲ್ಲಿ 50 ಮಿಲಿಯನ್ ತಂಬಾಕು ಅಧಿಕವಾಗಿರುವುದರಿಂದ ಗುಣಮಟ್ಟದ ತಂಬಾಕು ಮಾರಾಟಕ್ಕೆ ಅವಕಾಶವಿದೆ. ಅಲ್ಲದೆ ಈ ಬಾರಿ ಪೈಸೆ ಏರಿಕೆಯನ್ನು ತಡೆದು 1 ರೂ. ಗಳ ಪೂರ್ಣ ಪ್ರಮಾಣದ ಏರಿಕೆಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಇದು ರೈತರಿಗೆ ಲಾಭ ತರಲಿದೆ ಎಂದು ತಿಳಿಸಿದರು.
ಗುಣಮಟ್ಟದ ಬೇಲ್ ತನ್ನಿ: ಐಟಿಸಿ ಕಂಪನಿ ಲೀಫ್ ಮ್ಯಾನೇಜರ್ ಶ್ರೀನಿವಾಸ ರೆಡ್ಡಿ ಮಾತನಾಡಿ, ಈ ಬಾರಿ ರೈತರು ಆರಂಭದಲ್ಲಿ ಎಲ್ಲಾ ರೀತಿಯ ಗ್ರೇಟ್ ಮಾರಾಟ ಮಾಡುವುದರಿಂದ ವಿದೇಶಗಳಿಗೆ ಸ್ಯಾಂಪಲ್ ಕಳುಹಿಸಲು ಅನುಕೂಲವಾಗುತ್ತದೆ. ಅಲ್ಲದೆ ರಾಜ್ಯದಲ್ಲಿ ಶೇ. 25 ರಷ್ಟು ಮಾತ್ರ ಕಡಿಮೆ ಗುಣಮಟ್ಟದ ತಂಬಾಕಿದ್ದು, 40 ಉತ್ತಮ ಮತ್ತು 45 ರಷ್ಟು ಮಧ್ಯಮ ದರ್ಜೆ ತಂಬಾಕು ಉತ್ಪಾದನೆಯಾಗಿದೆ. ಆರಂಭದಲ್ಲಿ 7 ಕಂಪನಿಗಳು ತಂಬಾಕು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ. ಆದ್ದರಿಂದ ರೈತರು ಮಾರುಕಟ್ಟೆಯನ್ನು ಅರಿತು ಮಾರಾಟಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹರಾಜು ಅಧೀಕ್ಷಕರಾದ ರಾಮ್ ಮೋಹನ್, ಪ್ರಭಾಕರ್, ಶಂಭುಗೌಡ ಸೇರಿದಂತೆ ರೈತರು ಹಾಜರಿದ್ದರು.