Advertisement

Piriyapatna ಕೆ.ವೆಂಕಟೇಶ್ ರವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

05:41 PM May 19, 2023 | Team Udayavani |

ಪಿರಿಯಾಪಟ್ಟಣ: ಮೈಸೂರು ಜಿಲ್ಲೆ ಒಕ್ಕಲಿಗ ಸಮಾಜದ ಪ್ರಭಾವಿ ಮುಖಂಡ, ಸರ್ವಜನಾಂಗದ ನಾಯಕ, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 6 ಬಾರಿ ಶಾಸಕರಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಕೆ.ವೆಂಕಟೇಶ್ ರವರಿಗೆ ಸಚಿವ ಸ್ಥಾನ ನೀಡುವಂತೆ ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ ಒತ್ತಾಯಿಸಿದರು.

Advertisement

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆ.ವೆಂಕಟೇಶ್ ಸೌಮ್ಯ ಸ್ವಭಾವದ ಮುತ್ಸದ್ದಿ ರಾಜಕಾರಣಿ, ಜನತಾ ಪರಿವಾರದ ಹಿನ್ನೆಲೆಯುಳ್ಳ ಇವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಪರಮಾಪ್ತರಾಗಿದ್ದು, ಇವರು 1980 ರಲ್ಲಿ ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗುವ ಮೂಲಕ ರಾಜಕಾರಣ ಆರಂಭಿಸಿ ತಮ್ಮ 42 ವರ್ಷಗಳ ಕಾಲದ ಸುದೀರ್ಘ ರಾಜಕಾರಣದಲ್ಲಿ 9 ಚುನಾವಣೆಗಳನ್ನು ಎದುರಿಸಿ 6 ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ, ಒಮ್ಮೆ ಬಿಡಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ 20 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಇವರನ್ನು ಸಿದ್ದರಾಮಯ್ಯನವರ ಸರ್ಕಾರದಲ್ಲಿ ಮಂತ್ರಿ ಮಾಡಬೇಕು ಎಂದರು.

ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್ ಮಾತನಾಡಿ, 2013 ರ ಸಿದ್ದರಾಮಯ್ಯ ಸರ್ಕಾರದಲ್ಲಿ ಕೆ.ವೆಂಕಟೇಶ್ ರವರಿಗೆ ಅನ್ಯಾಯವಾಗಿದೆ ಈ ಬಾರಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಅವರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದರು.

ಪುರಸಭಾ ಸದಸ್ಯ ಮಂಜುನಾಥ್ ಮಾತನಾಡಿ ಮೈಸೂರು, ಮಂಡ್ಯ, ಹಾಸನ ಜಿಲ್ಲೆ ಸೇರಿದಂತೆ ಹಳೆ ಮೈಸೂರು ಪ್ರಾಂತ್ಯದ ಒಕ್ಕಲಿಗ ಸಮಾಜದ ಪ್ರಭಾವಿ ನಾಯಕರಾದ ಕೆ.ವೆಂಕಟೇಶ್ ರವರ ಮುತ್ಸದಿತನಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಚಿವ ಸ್ಥಾನ ಕಲ್ಪಿಸಬೇಕು. ಈ ಹಿಂದೆ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಕೇವಲ ಶಾಸಕರಾಗಿದ್ದುಕೊಂಡೇ ರಾಜ್ಯದಲ್ಲಿಯೇ ಹೆಚ್ಚು ಜನತಾ ಮನೆಗಳನ್ನು ತರುವ ಮೂಲಕ ಬಡ ಜನತೆಗೆ ಆಶ್ರಯ ಕಲ್ಪಿಸಿದ್ದರು ನಂತರ ಕಾವೇರಿ ನದಿ ಸ್ಥಳೀಯ ಮಟ್ಟದಲ್ಲಿ ಸದ್ಬಳಕೆ ಆಗಬೇಕು, ರೈತರ ಕೃಷಿಗೆ ಹಾಗೂ ತಾಲ್ಲೂಕಿನ ಎಲ್ಲರೂ ಕಾವೇರಿ ನೀರನ್ನು ಕುಡಿಯಬೇಕು ಎಂಬ ಮಹದಾಸೆಯಿಂದ ತಾಲ್ಲೂಕಿನಲ್ಲಿ ಮುತ್ತಿನ ಮುಳುಸೋಗೆ ಗ್ರಾಮದ ಬಳಿ ಕಾವೇರಿ ನದಿಯಿಂದ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿದ್ದಾರೆ ಕರಡಿಲಕ್ಕನ ಕೆರೆ ಏತ ನೀರಾವರಿ ಜಾರಿಗೊಳಿಸಿ ಅನ್ನದಾತರಲ್ಲಿ ವಿಶ್ವಾಸ ಮೂಡಿಸುವ ಮೂಲಕ ತಾಲ್ಲೂಕಿನಲ್ಲಿ ರೈತರಿಗೆ ಗಂಗೆ ತಂದ ಭಗೀರಥ ಎನಿಸಿದ್ದಾರೆ. ತಾಲೂಕಿನಲ್ಲಿ ಅನೇಕ ಪದವಿ ಕಾಲೇಜುಗಳು, ಗ್ರಾಮಾಂತರ ಪ್ರದೇಶದ ಪ್ರಮುಖ ಸ್ಥಳಗಳಿಗೆ ಪದವಿ ಪೂರ್ವ ಕಾಲೇಜು, ಐಟಿಐ, ಡಿಪ್ಲೊಮಾ ಕಾಲೇಜುಗಳನ್ನು ಪ್ರಾರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ, ಇನ್ನುಳಿದಂತೆ ಆರೋಗ್ಯ ಕ್ಷೇತ್ರದಲ್ಲಿ ಪಟ್ಟಣದ ಪ್ರಮುಖ ಭಾಗದಲ್ಲಿ 100 ಹಾಸಿಗೆಯುಳ್ಳ ಹೈಟೆಕ್ ಆಸ್ಪತ್ರೆ, ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು,ಉಪ ಆರೋಗ್ಯ ಕೇಂದ್ರಗಳ ಸ್ಥಾಪನೆ ಸೇರಿದಂತೆ ಅನೇಕ ಗುರುತರವಾದ ಐತಿಹಾಸಿಕ ಅಭಿವೃದ್ದಿ ಕೆಲಸಗಳನ್ನು ಮಾಡಿರುವ ಇವರ ಸೇವೆ ಅನನ್ಯವಾಗಿದ್ದು ರಾಜ್ಯ ಮಟ್ಟದಲ್ಲಿಯೂ ಇವರ ಸೇವೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಇವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಪಿ.ಎಸ್.ವಿಷಕಂಠಯ್ಯ, ಸದಸ್ಯರಾದ ಪಿ.ಎಸ್.ರವಿ, ಶ್ಯಾಂ, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಮುಖಂಡರಾದ ತಮ್ಮಣ್ಣಯ್ಯ, ಪಿ.ಮಹದೇವ್, ಎಂ.ಮಂಜು, ಚನ್ನಕಲ್ ಶೇಖರ್, ಪಿ.ಪಿ.ಪುಟ್ಟಯ್ಯ, ಡಿ.ಎ.ಜವರಪ್ಪ, ರಾಜಶೇಖರ್, ಸುರೇಶ್, ಚಿಕ್ಕೇಗೌಡ, ಪುಟ್ಟರಾಜು, ಅಬ್ದುಲ್ ವಾಜೀದ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next