Advertisement
1939ರಲ್ಲಿ ನಿರ್ಮಾಣ ಮಾಡಿ ರುವ ಕಟ್ಟಡಗಳಲ್ಲಿ ಇನ್ನೂ ಪಾಠ ಹೇಳಿಕೊಡಲಾಗುತ್ತಿದೆ. ಮೇಲ್ಛಾವಣಿ ಯಲ್ಲಿ ಬಿರುಕು ಬಿದ್ದಿದೆ. ಕಟ್ಟಡದ ಮೂಲೆಗಳಲ್ಲಿ ಗಾರೆ ಬಿದಿದ್ದು, ಯಾವಾಗಬೇಕಾದರೂ ಕಟ್ಟಡ ಕುಸಿಯುವ ಸಾಧ್ಯತೆ ಇದೆ. ಇತ್ತೀಚಿಗೆ ತರಗತಿಗಳು ನಡೆಯದೇ ಇರುವ ಕಾರಣ, ತರಗತಿ ಕೊಠಡಿಗಳು ಹೆಗ್ಗಣಗಳ ವಾಸಸ್ಥಳವಾಗಿದೆ. ಈ ಶಾಲೆಯ ಪರಿಸ್ಥಿತಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕಂಡಿಲ್ಲ. ಇಂತಹ ಶಾಲೆಗೆ ಮಕ್ಕಳನ್ನು ಕಳಿಸಿ ಎಂದು ಅಭಿಯಾನ ಮಾಡುತ್ತಾರೆ. ಆದರೆ, ಯಾವುದೇ ಮೂಲಸೌಲಭ್ಯ ಇಲ್ಲದ ಶಾಲೆಗೆ ಮಕ್ಕಳನ್ನು ಕಳುಹಿಸುವುದಾದರೂ ಹೇಗೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಕಡಿಮೆಯಾಗಿದೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ.
Related Articles
Advertisement
ಶಾಲೆ ಜಾಗದಲ್ಲಿ ಕಸದ ರಾಶಿ:ಶಾಲೆಯ ಹಿಂಭಾಗದಲ್ಲಿ ಶಾಲೆಗೆ ಸೇರಿದ ಜಾಗವಿದೆ. ಅದನ್ನು ಸ್ವತ್ಛವಾಗಿಟ್ಟುಕೊಳ್ಳದ ಕಾರಣ ಗ್ರಾಮದ ತಿಪ್ಪೆಯಾಗಿ ಪರಿವರ್ತನೆಯಾಗಿದೆ. ಅಲ್ಲಿಂದ ದುರ್ನಾತ ಬೀರುತ್ತಿದೆ. ಶಾಲೆಯ ಪ್ರವೇಶ ದ್ವಾರದಲ್ಲಿ ಕೂಡ ಕಸದ ರಾಶಿಗಳಿವೆ. ಅವುಗಳನ್ನು ಅಲ್ಲಿಯೇ ಸುಡುವುದರಿಂದ ಶಾಲೆಯ ಪ್ರವೇಶ ದ್ವಾರ ಮತ್ತಷ್ಟು ವಿಕಾರವಾಗಿದೆ.
ಐವರು ಶಿಕ್ಷಕರು ಮತ್ತು ಇಬ್ಬರು ಬಿಸಿಯೂಟ ಸಿಬ್ಬಂದಿ ಇದ್ದಾರೆ. ಆದರೆ, ಶಾಲೆಗೆ ಸ್ವತ್ಛತಾ ಸಿಬ್ಬಂದಿ ಇಲ್ಲ. ಅಡುಗೆ ಮಾಡುವವರೇ ಸ್ವತ್ಛತೆ ಮಾಡುತ್ತಿದ್ದಾರೆ. ಆದರೆ, ಅದು ಕೂಡ ಮೇಲ್ನೋಟಕ್ಕೆ ಎಷ್ಟು ಬೇಕೋ ಅಷ್ಟು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆಗಳು ಪ್ರಾರಂಭವಾದರೆ, ಶಾಲೆಯಲ್ಲಿ ಕುಳಿತುಕೊಳ್ಳುವ ಮಕ್ಕಳ ಪ್ರಾಣಕ್ಕೆ ಅಪಾಯವಿದೆ. ಹೀಗಾಗಿ ಪಾರಾಂಡಹಳ್ಳಿ ಸರ್ಕಾರಿ ಶಾಲೆಯ ಕಟ್ಟಡವನ್ನು ದುರಸ್ತಿಗೊಳಿಸಿ, ಮಕ್ಕಳಿಗೆ ಮೂಲ ಸೌಲಭ್ಯವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಕಲ್ಪಿಸಬೇಕಾಗಿದೆ.
-ಬಿ.ಆರ್.ಗೋಪಿನಾಥ್