ಕಳೆದ ಶುಕ್ರವಾರ ದಸರಾ ಹಬ್ಬದ ಸಂದರ್ಭದಲ್ಲಿ ನಟ ಶರಣ್ ಮತ್ತು ರಾಗಿಣಿ ಅಭಿನಯದ ಕಾಮಿಡಿ ಚಿತ್ರ “ಅಧ್ಯಕ್ಷ ಇನ್ ಅಮೆರಿಕಾ’ ಅದ್ಧೂರಿಯಾಗಿ ತೆರೆಗೆ ಬಂದಿತ್ತು. ಚಿತ್ರ ತೆರೆಕಂಡ ಬಳಿಕ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಇದೇ ಖುಷಿಯನ್ನು ಹಂಚಿಕೊಳ್ಳಲು “ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದ ಸಕ್ಸಸ್ ಮೀಟ್ ಹೆಸರಿನಲ್ಲಿ ಚಿತ್ರತಂಡ ಪತ್ರಕರ್ತರು ಮತ್ತು ಮಾಧ್ಯಮಗಳ ಮುಂದೆ ಬಂದಿತ್ತು.
ಮೊದಲಿಗೆ ಮಾತನಾಡಿದ ಚಿತ್ರದ ನಿರ್ಮಾಪಕ ಟಿ.ಜಿ ವಿಶ್ವಪ್ರಸಾದ್, “ಆರಂಭದಿಂದಲೂ “ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದ ಮೇಲೆ ನಮಗೆ ಭರವಸೆಯಿತ್ತು. ಅದರಂತೆ ಚಿತ್ರ ಬಿಡುಗಡೆಯಾದ ಬಳಿಕ ಪ್ರೇಕ್ಷಕರು ಉತ್ತಮ ರೀತಿಯಲ್ಲಿ ಸ್ವೀಕರಿಸುತ್ತಿದ್ದಾರೆ. ಅಂದುಕೊಂಡಿದ್ದಕ್ಕಿಂತ ಬಿಗ್ ರೆಸ್ಪಾನ್ಸ್ ಸಿಗುತ್ತಿದೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ಚಿತ್ರ ಬಿಡುಗಡೆಯಾಗಿದ್ದು, ಅಲ್ಲೂ ಕೂಡ ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಆದರೆ ಈ ಎಲ್ಲಾ ಖುಷಿಯ ನಡುವೆ ನಮಗೆ ಪೈರಸಿಯಿಂದ ದೊಡ್ಡ ತೊಂದರೆ ಆಗುತ್ತಿದೆ. ಕೆಲವು ಕಿಡಿಗೇಡಿಗಳಿಂದ ಚಿತ್ರ ಪೈರಸಿಯಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವುದು ನಮಗೆ ನೋವು ತರುತ್ತಿದೆ. ಈಗಾಗಲೇ ಹೈದರಬಾದ್‌ನಲ್ಲಿರುವ ನಮ್ಮ ತಂಡದವರು ಸೋಶಿಯಲ್ ಮೀಡಿಯಾಗಳಲ್ಲಿ ಬರುತ್ತಿರುವ ಪೈರಸಿ ಕಾಪಿಯನ್ನು ಪತ್ತೆ ಹಚ್ಚಿ ತೆಗೆದು ಹಾಕುತ್ತಿದ್ದಾರೆ. ಆದರೆ ಇಂತಹ ಕೃತ್ಯಗಳನ್ನು ಕಾನೂನಿನ ಮೂಲಕವೇ ಕಡಿವಾಣ ಹಾಕಬೇಕು’ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ಯೋಗಾನಂದ್ ಮುದ್ದಾನ್, “ಶರಣ್ ನಟನೆಗೆ ನಿರ್ದೇಶನ ಮಾಡಲು ಅವಕಾಶ ನನಗೆ ಸಿಕ್ಕಿದ್ದು “ಯೋಗ’, ಚಿತ್ರ ಸಕ್ಸಸ್ ಕಂಡಿದ್ದರಿಂದ ಈಗ ಆಗಿದ್ದು “ಆನಂದ’. ಟೀಂ ಅಂಡ್ ಟೈಮ್ ಎರಡು ಚೆನ್ನಾಗಿರುವುದರಿಂದ ಎಲ್ಲವೂ ಒಳ್ಳೆಯದೇ ಆಗಿದೆ. ಮಂಡ್ಯಾ, ಮೈಸೂರು ಕಡೆಗಳಲ್ಲಿ ಥಿಯೇಟರ್‌ಗೆ ಭೇಟಿ ನೀಡಿದಾಗ ಜನರು ಜೈಕಾರ ಹಾಕಿದರು. ಮೊದಲ ನಿರ್ದೇಶನದ ಚಿತ್ರಕ್ಕೆ ಇಂಥದ್ದೊಂದು ಬೆಂಬಲ, ಯಶಸ್ಸು ಸಿಕ್ಕಿರುವುದು ತುಂಬಾನೇ ಖುಷಿ ನೀಡಿದೆ’ ಎಂದು ಹೇಳಿಕೊಂಡರು.
ಚಿತ್ರದ ಬಗ್ಗೆ ಮಾತನಾಡಿದ ನಾಯಕಿ ರಾಗಿಣಿ ದ್ವಿವೇದಿ, “ಸಿನಿಮಾ ಬಿಡುಗಡೆ ಹಂತಕ್ಕೆ ಬಂದಾಗ ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂತೆ ಆಗುತ್ತಿತ್ತು. ಆದ್ರೆ ಈಗ ಅಂಥ ಭಯವಿಲ್ಲ. ನಮ್ಮ ನಿರೀಕ್ಷೆಯಂತೆ ಚಿತ್ರ ಹಿಟ್ ಆಗಿದ್ದು, ಖುಷಿ ಕೊಟ್ಟಿದೆ. ಶರಣ್ ಜೊತೆಗಿನ ಕಾಂಬಿನೇಶನ್, ನಿರ್ದೇಶಕರ ಕೆಮಿಸ್ಟ್ರಿ, ನಿರ್ಮಾಪಕರ ಪ್ಯಾಷನ್‌ನಿಂದ ಚಿತ್ರ ಹಿಟ್ ಆಗಿದೆ’ ಎಂದರು.
ಇನ್ನು ನಾಯಕ ನಟ ಶರಣ್ ಅವರಿಗೂ “ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರ ಡಬಲ್ ಖುಷಿಯನ್ನು ನೀಡಿದೆಯಂತೆ. ಈ ಬಗ್ಗೆ ಮಾತನಾಡುವ ಶರಣ್, “ನನಗೆ ಚಿತ್ರದ ಬಿಡುಗಡೆಗೂ ಮೊದಲೇ ಸಾಕಷ್ಟು ನಿರೀಕ್ಷೆಯಿತ್ತು. ಚಿತ್ರ ರಿಲೀಸ್‌ಗೂ ಮೊದಲೇ ಸಕ್ಸಸ್ ಮೀಟ್ ಮಾಡುತ್ತೇವೆ ಎಂಬ ಕಾನ್ಫಿಡೆನ್ಸ್ ಇತ್ತು. ಈ ಚಿತ್ರದಿಂದ ರಾಗಿಣಿ ಎನ್ನುವ ಅಧ್ಯಕ್ಷಿಣಿ ಹುಟ್ಟಿದ್ದಾರೆ. ರಾಗಿಣಿ ಇಲ್ಲಿ ತಮ್ಮ ಹತ್ತು ವರ್ಷದ ಅನುಭವವನ್ನು ಧಾರೆ ಎರೆದಿದ್ದಾರೆ. ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ’ ಎಂದ ಶರಣ್ “ಒಳ್ಳೆಯ ಚಿತ್ರಗಳನ್ನು ಪೈರಸಿ ಮೂಲಕ ಹಾಳು ಮಾಡಬೇಡಿ. ದಯವಿಟ್ಟು ಚಿತ್ರವನ್ನು ಚಿತ್ರಮಂದಿರಲ್ಲಿ ನೋಡಿರಿ’ ಎಂದು ಪ್ರೇಕ್ಷಕರಲ್ಲಿ ಕೇಳಿಕೊಂಡರು.
ಸಕ್ಸಸ್‌ಮೀಟ್‌ನಲ್ಲಿ ಹಾಜರಿದ್ದ ಕಾರ್ಯಕಾರಿ ನಿರ್ಮಾಪಕಿ ವಿಜಯಾ, ವಕೀಲೆ ಪಾತ್ರ ಮಾಡಿರುವ ವಂದನಾ ಪ್ರಸಾದ್ ಸೇರಿದಂತೆ ಚಿತ್ರದ ಇತರೆ ಕಲಾವಿದರು ಮತ್ತು ತಂತ್ರಜ್ಞರು, “ಅಧ್ಯಕ್ಷ’ನ “ಅಮೆರಿಕಾ’ ಜರ್ನಿಯ ಸಕ್ಸಸ್ ಅನ್ನು ಹಂಚಿಕೊಂಡರು.