Advertisement

ಕುಂದಾಪುರ: ಪೈಪ್‌ಲೈನ್‌ಗಾಗಿ ಅಗೆತ, ಕಳಪೆ ಕಾಮಗಾರಿ ಆರೋಪ

08:32 PM May 22, 2019 | sudhir |

ಕುಂದಾಪುರ: ನಗರದ ಜನತೆಗೆ 24 ತಾಸು ಕುಡಿಯುವ ನೀರು ಪೂರೈಸಲು ಕೋಡಿಯಲ್ಲಿ ನಿರ್ಮಿಸಿದ ಟ್ಯಾಂಕ್‌ನಿಂದ ನಗರಕ್ಕೆ ಹಾಕಿದ ಪೈಪ್‌ಲೈನ್‌ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಕಾಮಗಾರಿ
ಕೋಡಿಯಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯ ಜನರಿಗೆ, ವಾಣಿಜ್ಯ ಉಪಯೋಗಕ್ಕೆ ದಿನದ 24 ತಾಸು ನೀರು ಒದಗಿಸಲು ಯೋಜನೆಯ ಕಾಮಗಾರಿ ಆಗುತ್ತಿದೆ. 23.1 ಕೋ.ರೂ. ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು ಏಶ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಸಾಲದಿಂದ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಹೂಡಿಕೆ ಯೋಜನೆ (ಜಲಸಿರಿ) ಮೂಲಕ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಕರ್ನಾಟಕ ಸಮಗ್ರ ನೀರು ನಿರ್ವಹಣೆ ಹೂಡಿಕೆಯಲ್ಲಿ ಕಾಮಗಾರಿ ನಡೆಯುತ್ತಿದೆ.

ಇದಕ್ಕೆ ಕೋಲ್ಕತಾದ ಮೆ| ಜಿ.ಕೆ. vಬ್ಲ್ಯು ಕನ್ಸಲ್ಟ್ ಸಂಸ್ಥೆ ತಾಂತ್ರಿಕ ಸಲಹೆ ನೀಡುತ್ತಿದೆ. 2017ರಲ್ಲಿ ಕಾಮಗಾರಿಗೆ ಟೆಂಡರ್‌ ಮಂಜೂರಾಗಿದೆ. ಒಟ್ಟು ಅವಧಿ 25 ತಿಂಗಳು. ಆದ್ದರಿಂದ ಆದಷ್ಟು ಶೀಘ್ರ ಕಾಮಗಾರಿ ಮುಗಿಸಬೇಕಿದೆ. ಕಾಮಗಾರಿ ಮುಗಿದ ಅನಂತರ 96 ತಿಂಗಳು ಅಂದರೆ 9 ವರ್ಷ ಅದರ ನಿರ್ವಹಣೆ ಹೊಣೆಯೂ ಕಾಮಗಾರಿ ನಿರ್ವಹಿಸಿದ ಸಂಸ್ಥೆಯದ್ದೇ ಆಗಿದೆ.

ಕಳಪೆ ಕಾಮಗಾರಿ ಆರೋಪ
ಪುರಸಭೆಯ ಮುಖ್ಯರಸ್ತೆ ಮೂಲಕ ಪೈಪ್‌ಜೋಡಣೆ ಕೆಲಸ ನಡೆಯುತ್ತಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದ ಇಂಟರ್‌ಲಾಕ್‌ಗಳನ್ನು ತೆಗೆದು ಪೈಪ್‌ಲೈನ್‌ ಅಳವಡಿಸಲಾಗಿದೆ. ಆದರೆ ಕಿತ್ತು ಹಾಕಿದ ಇಂಟರ್‌ಲಾಕ್‌ಗಳನ್ನು ಮರುಜೋಡಣೆ ಮಾಡಿಲ್ಲ. ಅಲ್ಲಲ್ಲಿ ಕಳಪೆ ಮಟ್ಟದ ಕೆಲಸ ಮಾಡಲಾಗಿದೆ. ಅಧಿಕಾರಿಗಳ ಸಭೆಯಲ್ಲಿ ಈ ಹಿಂದೆಯೇ ಇಂತಹ ಕಳಪೆ ಸಾಧ್ಯತೆ ಕುರಿತು ಪುರಸಭೆ ಸದಸ್ಯ ಗಿರೀಶ್‌ ದೇವಾಡಿಗ ಅವರು ಆರೋಪಿಸಿದ್ದರು. ಆದರೆ ಸಮರ್ಪಕವಾಗಿ ಕಾಮಗಾರಿ ನಿರ್ವ್‌ಹಿಸುವ ಭರವಸೆ ಎಂಜಿನಿಯರ್‌ಗಳಿಂದ ಹಾಗೂ ಗುತ್ತಿಗೆದಾರ ಸಂಸ್ಥೆಯ ಕಡೆಯವರಿಂದ ಬಂದಿತ್ತು. ಹಾಗಿದ್ದರೂ ಕೂಡ ಈಗ ಕಾಮಗಾರಿ ಸರಿಯಾಗಿ ನಡೆದಿಲ್ಲ. ಸರಿಪಡಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ವಹಿಸಿದಂತೆಯೂ ಕಂಡು ಬರುವುದಿಲ್ಲ. ಈ ಕುರಿತು ಗಿರೀಶ್‌ ದೇವಾಡಿಗ ಅವರು ಪುರಸಭೆ ಮುಖ್ಯಾಧಿಕಾರಿಗಳಿಗೆ ಮೇ 22ರಂದು ಲಿಖೀತ ದೂರು ನೀಡಿದ್ದಾರೆ.

ಅಂದಗೆಡಿಸಿದ ಪುರಸಭೆ
ಮುಖ್ಯಮಂತ್ರಿಗಳ ವಿಶೇಷ ಅನುದಾನ 5 ಕೋಟಿ ರೂ. ಪುರಸಭೆಗೆ ಬಂದಾಗ, ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿ ಇಂಟರ್‌ಲಾಕ್‌ ಅಳವಡಿಸಿ ಸುಂದರ ಕುಂದಾಪುರ ನಿರ್ಮಾಣಕ್ಕಾಗಿ ಸುಮಾರು 50 ಲಕ್ಷ ರೂ. ಮೀಸಲಿಟ್ಟು ಕಾಮಗಾರಿ ಪ್ರಾರಂಭಕ್ಕೆ ಚಾಲನೆ ಕೊಟ್ಟಿದ್ದೆವು. ಆದರೆ ಕಾಮಗಾರಿ ಪೂರ್ಣಗೊಂಡು ಕೆಲವೇ ದಿನಗಳಲ್ಲಿ ಕೋಡಿಗೆ ಕುಡಿಯುವ ನೀರಿನ ಪೈಪ್‌ ಅಳವಡಿಸುವುದಕ್ಕಾಗಿ ಆ ಇಂಟರ್‌ಲಾಕ್‌ನ್ನು ತೆಗೆದು ಮರುಜೋಡಣೆಯನ್ನು ಅಸಮರ್ಪಕವಾಗಿ ಮಾಡಿ, ನಗರದ ಕಳೆಯನ್ನೆ ಹಾಳು ಮಾಡಿರುವುದು ಕಂಡುಬರುತ್ತದೆ. ಇದನ್ನು ಕೂಡಲೇ ಸರಿಪಡಿಸಬೇಕಾಗಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿನಂತಿಸುತ್ತೇನೆ.
-ರಾಜೇಶ್‌ ಕಾವೇರಿ, ಪುರಸಭಾ ಮಾಜಿ ಉಪಾಧ್ಯಕ್ಷ

Advertisement

ದೂರು ಕೊಟ್ಟಿದ್ದೇನೆ
ಪುರಸಭೆಯಲ್ಲಿ ಕೋಡಿಗೆ ನೀರೊದಗಿಸುತ್ತಿರುವ ಪೈಪ್‌ಲೈನ್‌ ಕಾಮಗಾರಿಗಳು ಕಳಪೆಯಿಂದ ಕೂಡಿರುತ್ತಿದ್ದು, ಇದನ್ನು ಈ ಹಿಂದೆ ನಡೆದಂತಹ ಅನೇಕ ಅಧಿಕಾರಿಗಳ ಸಭೆಯಲ್ಲಿ ನಾನು ವಿಷಯ ಪ್ರಸ್ತಾಪಿಸಿದ್ದೆ. ಸರಿಪಡಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು. ಆದರೆ ಇವತ್ತಿನವರೆಗೂ ಸರಿಪಡಿಸುವಂತಹ ವ್ಯವಸ್ಥೆ ಕಂಡುಬಂದಿಲ್ಲ. ಆ ಕಾರಣಕ್ಕಾಗಿ ಇವತ್ತು ಪುರಸಭೆ ಮುಖ್ಯ ಅಧಿಕಾರಿಯವರನ್ನು ಖುದ್ದಾಗಿ ಭೇಟಿಯಾಗಿ ಪತ್ರದ ಮೂಲಕ ದೂರನ್ನು ನೀಡಿದ್ದೇನೆ.
-ಗಿರೀಶ್‌ ಜಿ.ಕೆ., ಪುರಸಭಾ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next