Advertisement

ಥಿಯೇಟರ್‌ನತ್ತ ಪಿಂಕಿ ಎಲ್ಲಿ?: ಜೂ.2ರಂದು ಚಿತ್ರ ತೆರಗೆ

05:02 PM May 27, 2023 | Team Udayavani |

ಈಗಾಗಲೇ ಹಲವು ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಹಾಗೂ ಪ್ರಶಂಸೆ ಎರಡನ್ನು ಪಡೆದಿರುವ “ಪಿಂಕಿ ಎಲ್ಲಿ?’ ಚಿತ್ರ ಇದೇ ಜೂ. 2 ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ “ಪಿಂಕಿ ಎಲ್ಲಿ?’ ಚಿತ್ರತಂಡ ಸಿನಿಮಾದ ವಿಶೇಷತೆಗಳು ಮತ್ತು ಬಿಡುಗಡೆಯ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು.

Advertisement

ಮೊದಲಿಗೆ ಮಾತನಾಡಿದ ನಿರ್ದೇಶಕ ಪೃಥಿ ಕೋಣನೂರು, “ಸುಮಾರು 3 ವರ್ಷಗಳ ಹಿಂದೆ ಈ ಕಥೆ ಶುರುವಾಯ್ತು. ಬೆಂಗಳೂರಿನಲ್ಲಿ ನಡೆದ ಕಾಣೆಯಾದ ಮಗುವಿನ ನೈಜಘಟನೆಯೊಂದನ್ನು ಆಧರಿಸಿ ಈ ಸಿನಿಮಾ ಮಾಡಿದ್ದೇವೆ. ಮಗುವೊಂದು ಕಾಣೆಯಾಗಿದ್ದರೂ, ಈ ಕಥೆ ಮಗುವಿನ ಸುತ್ತ ಇರುವುದಿಲ್ಲ. ಮಗುವನ್ನು ಕಳೆದುಕೊಂಡವರ ಸುತ್ತ ಇರುತ್ತದೆ. ಕಥೆಯ ಒಂದೆಳೆ ಕೇಳಿ ಮೆಚ್ಚಿಕೊಂಡ ನಿರ್ಮಾಪಕ ಕೃಷ್ಣೇಗೌಡ ಸಿನಿಮಾ ನಿರ್ಮಾಣಕ್ಕೆ ಮುಂದಾದರು. ಇನ್ನು ಗುಂಜಲಮ್ಮ ಹಾಗೂ ಸಂಗಮ್ಮ ಎಂಬ ಇಬ್ಬರು ಮಹಿಳರಯರು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಸ್ಲಂ ನಿವಾಸಿಗಳು. ನಟನೆ ಗೊತ್ತಿಲ್ಲದ ಇವರು ಸಹಜವಾಗಿ ಅಭಿನಯಿಸಿರುವುದು ಈ ಚಿತ್ರದ ವಿಶೇಷ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಅನೇಕ ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಿದೆ’ ಎಂದು ಮಾಹಿತಿ ನೀಡಿದರು.

ಇನ್ನು ಅಕ್ಷತಾ ಪಾಂಡವಪುರ, ದೀಪಕ್‌ ಸುಬ್ರಹ್ಮಣ್ಯ, ಪೃಥ್ವಿ, ಗುಂಜಲಮ್ಮ, ಸಂಗಮ್ಮ ಮುಂತಾದವರು “ಪಿಂಕಿ ಎಲ್ಲಿ?’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ನಿರ್ದೇಶಕರು ಕಥೆ ಹೇಳುವ ರೀತಿಯೆ ವಿಭಿನ್ನ. ನನಗೂ ಅವರು ಕಥೆ ಹೇಳುವ ರೀತಿ ಆಶ್ಚರ್ಯವಾಯಿತು. ಈ ಚಿತ್ರದಲ್ಲಿ ಮಗುವನ್ನು ಕಳೆದುಕೊಂಡಿರುವ ತಾಯಿಯ ಪಾತ್ರ ನನ್ನದು’ ಎಂದು ತಮ್ಮ ಪರಿಚಯ ಮಾಡಿಕೊಟ್ಟರು ನಟಿ ಅಕ್ಷತಾ ಪಾಂಡವಪುರ.

“ಆರಂಭದಲ್ಲಿ ನಾನು ಕಥೆ ಕೇಳಲಿಲ್ಲ. ನಿರ್ದೇಶಕರು ಮಗು ಕಳೆದು ಹೋಗಿರುವ ಸುತ್ತಲ್ಲಿನ ಕಥೆ ಎಂದು ಕಥೆಯ ಒಂದೆಳೆ ಹೇಳಿದರು. ನಾನು ಆಗಲೇ ಚೆನ್ನಾಗಿದೆ. ನೀವು ಕೆಲಸ ಶುರು ಮಾಡಿಕೊಳ್ಳಿ ಎಂದು ಹೇಳಿದೆ. ಬೆಂಗಳೂರಿನಲ್ಲಿ ಮಗುವಿನ ಭವಿಷ್ಯಕ್ಕಾಗಿ ತಂದೆ-ತಾಯಿ ಕೆಲಸಕ್ಕಾಗಿ ಮಗುವನ್ನು ನೋಡಿಕೊಳ್ಳಲು ಬಿಟ್ಟು ಕೆಲಸಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಆ ಮಗುವೆ ಇನ್ನೊಬ್ಬರ ಭವಿಷ್ಯಕ್ಕೆ ದಾರಿಯಾಗಿರುತ್ತದೆ. ಇಂತಹ ಅಪರೂಪದ ಕಥೆ ಈ ಚಿತ್ರದಲ್ಲಿದೆ. ಇದೇ ಜೂ. 2ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಎಲ್ಲರೂ ನೋಡಿ ಪ್ರೋತ್ಸಾಹಿಸಿ’ ಎನ್ನುವುದು ನಿರ್ಮಾಪಕ ಕೃಷ್ಣೇಗೌಡ ಮಾತು.

ಚಿತ್ರದಲ್ಲಿ ನಟಿಸಿರುವ ದೀಪಕ್‌ ಸುಬ್ರಹ್ಮಣ್ಯ, ಗುಂಜಲಮ್ಮ, ಸಂಗಮ್ಮ ಮುಂತಾದವರು ಚಿತ್ರದ ಬಗ್ಗೆ ಮತ್ತು ತಮ್ಮ ಪಾತ್ರದ ಕುರಿತು ಮಾತನಾಡಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next