ಅದು 2008ರ ಸಮಯ. ಜಗತ್ತಿನಾದ್ಯಂತ ವಿವಿಧ ಕಂಪೆನಿಗಳಲ್ಲಿ, ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಅಧಿಕೃತ ಇಮೇಲ್ ತೆರೆಯಲು ಹೆದರುತ್ತಿದ್ದರು. ಎಲ್ಲಿ ಕೆಲಸದಿಂದ ತೆಗೆದು ಹಾಕಿರುವ ಆದೇಶ ಬಂದಿದೆಯೋ ಎಂಬ ಆತಂಕ ಕಾಡುತ್ತಿತ್ತು. ಇದೀಗ ಮತ್ತೆ ಅಂಥದೇ ಪರಿಸ್ಥಿತಿ ಬಂದೊದಗಿದೆ. ಟ್ವಿಟರ್, ಮೆಟಾ, ಅಮೆಜಾನ್ ಹೀಗೆ ಪಟ್ಟಿ ಬೆಳೆಯಲು ಆರಂಭವಾಗಿದೆ. ಮುಂದಿನ ತಿಂಗಳ ಕೊನೆಯ ಭಾಗ ಅಥವಾ 2023ರ ಮೊದಲಾರ್ಧದಲ್ಲಿ ಜಗತ್ತಿಗೆ ಮತ್ತೆ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳಲಿದೆ ಎಂದು ಹೇಳುತ್ತಿರುವಂತೆಯೇ ವಿವಿಧ ಕಂಪೆನಿಗಳು ಉದ್ಯೋಗಿಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಶುರು ಮಾಡಿವೆ. ಅದರ ಕಾರಣಗಳತ್ತ ಪಕ್ಷಿನೋಟ ಇಲ್ಲಿದೆ.
ಉದ್ಯೋಗಿಗಳನ್ನು ತೆಗೆದು ಹಾಕಲು ಕಾರಣವೇನು?
1. ಜಗತ್ತಿನಾದ್ಯಂತ ಏರುತ್ತಿರುವ ಹಣದುಬ್ಬರದ ಪ್ರಮಾಣ.
2. ಕೆಲವೊಂದು ಕ್ಷೇತ್ರಗಳಲ್ಲಿ ಬೇಡಿಕೆ ಕುಸಿದಿರುವ ಕಾರಣ. ಆ ವಿಭಾಗಕ್ಕೆ ನಿರೀಕ್ಷಿತ ಆದಾಯ ಬರುತ್ತಿಲ್ಲ.
3. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಅಭಿವೃದ್ಧಿಗೊಳ್ಳುತ್ತಿದೆ. ಹೀಗಾಗಿ, ಮಾನವರು ಮಾಡುವ ಕೆಲಸಗಳನ್ನು ಸ್ವಯಂ ಚಾಲಿತವಾಗಿ ನಿರ್ವಹಿಸುವ ವ್ಯವಸ್ಥೆ ಜಾರಿ.
4. ಕೆಲವೊಂದು ಕ್ಷೇತ್ರಗಳಲ್ಲಿ ನಿರೀಕ್ಷಿತ ಬಂಡವಾಳ ಹೂಡಿಕೆ ಆಗುತ್ತಿಲ್ಲ. ಹೀಗಾಗಿ, ವೆಚ್ಚ ಕಡಿತ, ನಷ್ಟ ಎಂಬ ಕಾರಣದಿಂದ ಘಟಕಗಳನ್ನು ಮುಚ್ಚಲಾಗುತ್ತದೆ. ಆಗ ಅಲ್ಲಿ ಇರುವ ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸುವ ಅನಿವಾರ್ಯ ಪರಿಸ್ಥಿತಿ ಉದ್ಭವಿಸುತ್ತದೆ.
5. ಫೆ.24ರಿಂದ ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿ ಅಂತಾರಾಷ್ಟ್ರೀಯ ವ್ಯವಸ್ಥೆಯ ಮೇಲೆ ಊಹಿಸಲು ಸಾಧ್ಯವಿಲ್ಲದ ರೀತಿಯ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತಿದೆ. ಹೀಗಾಗಿ ಉದ್ಯೋಗ ಕಡಿತದ ನಿರ್ಧಾರವನ್ನು ಕಂಪೆನಿಗಳು ಕೈಗೊಳ್ಳುತ್ತಿವೆ.
ನಮ್ಮ ದೇಶದಲ್ಲೂ ಆಗಿದೆ
ಬಹುರಾಷ್ಟ್ರೀಯ ಕಂಪೆನಿಗಳಾದ ಮೆಟಾ, ಅಮೆಜಾನ್, ಟ್ವಿಟರ್… ಹೀಗೆ ದೊಡ್ಡ ಕಂಪೆನಿಗಳಲ್ಲಿ ಆಗಿರುವ ಉದ್ಯೋಗ ಕಡಿತದ ಬಗ್ಗೆ ಎಲ್ಲಡೆ ಚರ್ಚೆಯಾಗುತ್ತಿದೆ. ನಮ್ಮ ದೇಶದಲ್ಲಿ ಕೂಡ ಯುನಿಕಾರ್ನ್ ಗಳು ಸೇರಿದಂತೆ ಹಲವು ಸ್ಟಾರ್ಟ್‌ಅಪ್ ಗಳಲ್ಲಿ ನಷ್ಟದ ಕಾರಣದ ಮುಂದಿಟ್ಟುಕೊಂಡು ಕೆಲಸ ಮಾಡುವವರಿಗೆ ಪಿಂಕ್ ಸ್ಲಿಪ್ ನೀಡಲಾಗಿದೆ. 2020ರಲ್ಲಿ ಕೊರೊನಾ ಧಾಂಗುಡಿ ಇರಿಸಿದ ಬಳಿದ ನಮ್ಮ ದೇಶದ ಸ್ಟಾರ್ಟ್ ಅಪ್ ಅಥವಾ ನವೋದ್ಯಮ ಕ್ಷೇತ್ರದಲ್ಲಿಯೇ ಸರಿ ಸುಮಾರು 23 ಸಾವಿರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಪ್ರಸಕ್ತ ವರ್ಷವೊಂದರಲ್ಲಿ ಇದುವರೆಗೆ 44 ಸ್ಟಾರ್ಟ್‌ಅಪ್ ಗಳು 15,216 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿವೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ 14 ಕಂಪೆನಿಗಳಿಂದ 6,898 ಮಂದಿ ಮನೆಗೆ ಮರಳಿದ್ದಾರೆ. ಅನ್‌ಅಕಾಡೆಮಿಯಿಂದಲೂ ಶೇ.5 ಮಂದಿ ಉದ್ಯೋಗಿಗಳು ಅಂದರೆ 2,500 ಮಂದಿಯನ್ನು, ಬೈಜೂಸ್‌ನಿಂದ 600 ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಇದು ಸರಿಯಲ್ಲ ಎನ್ನುವವರು ಇದ್ದಾರೆ
ಉದ್ಯೋಗಿಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಸರಿ ಅಲ್ಲ ಎನ್ನುತ್ತಾರೆ ಆನ್‌ಲೈನ್ ಶಿಕ್ಷಣ ಸಂಸ್ಥೆ ಅಪ್‌ಗ್ರಾಡ್‌ನ ರಾನ್ನಿ ಸೂðವೆವಾಲಾ. ಕೆಲಸ ಕಳೆದುಕೊಳ್ಳುವವರ ಬಗ್ಗೆ ಕಂಪೆನಿಗಳು ಧೈರ್ಯದ ಮಾತುಗಳನ್ನಾಡಬೇಕು ಎಂದು ಪ್ರತಿಪಾದಿಸುತ್ತಾರೆ. ಇದಲ್ಲದೆ ಸಿಐಇಎಲ್ ಎಚ್‌ಆರ್ ಸರ್ವಿಸಸ್‌ನ ಎಂಡಿ ಮತ್ತು ಸಿಇಒ ಆದಿತ್ಯ ನಾರಾಯಣ ಮಿಶ್ರಾ ಪ್ರಕಾರ ಉದ್ಯೋಗಗಳನ್ನು ಕಡಿತಗೊಳಿಸಿ, ಕೆಲಸದಿಂದ ತೆಗೆದು ಹಾಕುವ ಸಂದರ್ಭಗಳಲ್ಲಿ ಕಂಪೆನಿಗಳು ಮಾನವೀಯತೆಯಿಂದ ನಡೆದುಕೊಳ್ಳಬೇಕು ಎನ್ನುತ್ತಾರೆ.
Related Articles
ದೇಶದ ಸಿಇಒಗಳ ಅಭಿಮತ ಏನು?
ದೇಶದಲ್ಲಿ ಇರುವ ಶೇ.86ರಷ್ಟು ಸಿಇಒಗಳ ಪ್ರಕಾರ ಜಗತ್ತಿನ ಶೇ.71ರ ಪೈಕಿ ಆರ್ಥಿಕ ಹಿಂಜರಿತದಿಂದಾಗಿ ಮುಂದಿನ 12 ತಿಂಗಳಲ್ಲಿ ಶೇ.10ರಷ್ಟು ಕಂಪೆನಿಗಳ ಲಾಭದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಟೀಮ್‌ಲೀಸ್ ಸರ್ವಿಸಸ್‌ನ ಉಪಾಧ್ಯಕ್ಷ ಅಜಯ್ ಥಾಮಸ್ ಹೇಳುತ್ತಾರೆ. ದೇಶದಲ್ಲಿ ಇರುವ ಸ್ಟಾರ್ಟಪ್ ಕ್ಷೇತ್ರಗಳ ಮೇಲೆ ಹೂಡಿಕೆಯಾಗುತ್ತಿದ್ದರೂ, ಕೆಲವೊಂದು ಕಂಪೆನಿಗಳಿಗೆ ಹೂಡಿಕೆಯ ಕೊರತೆ ಉಂಟಾಗು ತ್ತಿದೆ. ಹೀಗಾಗಿ ಆ ಕ್ಷೇತ್ರಗಳಲ್ಲಿ ಉದ್ಯೋಗ ನಷ್ಟ ಉಂಟಾಗುತ್ತಿದೆ ಎನ್ನುತ್ತಾರೆ.
ಏರಿಕೆಯಾಗಲಿದೆ ನಿರುದ್ಯೋಗ ಪ್ರಮಾಣ
ಜಗತ್ತಿನಾದ್ಯಂತ ಸೆಪ್ಟಂಬರ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ.3.5 ಇದ್ದದ್ದು ಡಿಸೆಂಬರ್ ವೇಳೆಗೆ ಶೇ.3.7ಕ್ಕೆ ಹೆಚ್ಚಲಿದೆ. 2023ರ ಜೂನ್‌ಗೆ ಅದರ ಪ್ರಮಾಣ ಶೇ.4.3ಕ್ಕೆ ವೃದ್ಧಿಸಲಿದೆ. ಮುಂದಿನ ವರ್ಷಾಂತ್ಯದ ವರೆಗೂ ಅದೇ ಪ್ರಮಾಣ ಮುಂದುವರಿಯಲಿದೆ. ಕೆಲವರು ಪ್ರತಿಪಾದಿಸುವ ಪ್ರಕಾರ 2024ರಲ್ಲೂ ಶೇ.4.3ರ ಪ್ರಮಾಣವೇ ಮುಂದುವರಿಯಲಿದೆ.
ಖಚಿತಪಡಿಸಿವೆ ಕೆಲವು ರಾಷ್ಟ್ರಗಳು
ಯುನೈಟೆಡ್ ಕಿಂಗ್‌ಡಮ್, ಐರೋಪ್ಯ ಒಕ್ಕೂಟ ಈಗಾಗಲೇ ಆರ್ಥಿಕ ಹಿಂಜರಿತ ಪ್ರವೇಶ ಮಾಡಿದೆ ಎಂದೇ ಹೇಳಿಕೊಂಡಿವೆ. ಇನ್ನುಳಿದಂತೆ ಜಗತ್ತಿನ ಇತರ ರಾಷ್ಟ್ರಗಳು ಮೌನವನ್ನು ಮುರಿದು ಇನ್ನಷ್ಟೇ ಮಾತನಾಡಬೇಕಾಗಿದೆ.
ತಜ್ಞರು ಹೇಳುವುದೇನು?
ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂಬ ಬಗ್ಗೆ ಭವಿಷ್ಯ ನುಡಿದಿರುವ ಪರಿಣತರ ಪ್ರಕಾರ “ಇದೊಂದು ಅಲ್ಪಕಾಲದ ಆರ್ಥಿಕ ಹಿಂಜರಿತ. ಆದರೆ ಅದರ ಪ್ರತಿಕೂಲ ಪರಿಣಾಮ ಕೊಂಚ ಕಾಡಲಿದೆ’. ಜಗತ್ತಿನ ಹಲವು ರಾಷ್ಟ್ರಗಳಲ್ಲಿ 2023ರ ಮೊದಲ ಎರಡು ತ್ತೈಮಾಸಿಕದಲ್ಲಿ ಜಿಡಿಪಿ ಪ್ರಮಾಣ ಭಾರೀ ಪ್ರಮಾಣದಲ್ಲಿ ಅಂದರೆ ಶೇ.0.2ರಷ್ಟು ಕುಸಿತ ಕಾಣಲಿದೆ. ಎರಡನೇ ತ್ತೈಮಾಸಿಕದಲ್ಲಿ ಶೇ.0.1 ಇಳಿಕೆಯಾಗಲಿದೆ. ಆ ಎರಡು ತ್ತೈಮಾಸಿಕಗಳಲ್ಲಿ ಕೂಡ ಉದ್ಯೋಗ ಕಡಿತ ಉಂಟಾಗುವುದು ಮುಂದುವರಿಯಲಿದೆ. ಎಷ್ಟು ಸಮಯದವರೆಗೆ ಮುಂದೆ ಬರಲಿರುವ ಆರ್ಥಿಕ ಹಿಂಜರಿತ ಇರಲಿದೆ ಎಂಬುದರ ಬಗ್ಗೆ ಒಮ್ಮತಾಭಿಪ್ರಾಯ ಮೂಡಿಲ್ಲ. ಶೇ.50 ಮಂದಿಯ ಪ್ರಕಾರ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಮೊದಲ ಮತ್ತು ಎರಡನೇ ಮಹಾಯುದ್ಧದ ಬಳಿಕದ ವಿತ್ತೀಯ ಬಿಕ್ಕಟ್ಟಿನ ಬಗ್ಗೆ ಅಧ್ಯಯನ ನಡೆಸಿದ್ದವರ ಪ್ರಕಾರ ಸರಿ ಸುಮಾರು 10 ತಿಂಗಳ ವರೆಗೆ ವಿತ್ತೀಯ ಬಿಕ್ಕಟ್ಟು ಮತ್ತು ಅದರ ಪರಿಣಾಮ ಕಾಣಿಸಿಕೊಳ್ಳಲಿದೆ.
ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಬದಲಾವಣೆಯಿಂದ ಕೆಲ ಸಂಸ್ಥೆಗಳ ಆರ್ಥಿಕ ಕುಸಿತದಿಂದ ಭಾರತದ ಮೇಲೂ ಸ್ವಲ್ಪ ಮಟ್ಟಿಗೆ ಮರಿಣಾಮ ಬೀರಬಹುದು. ಭಾರತೀಯರಿಗೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗುವುದಿಲ್ಲ. ಭಾರತಕ್ಕೆ ಹೋಲಿಸಿದರೆ ವಿದೇಶದಲ್ಲಿ ಹೂಡಿಕೆ, ಉದ್ಯೋಗಿಗಳಿಗೆ ನೀಡುವ ವೇತನ, ಅಲ್ಲಿನ ಖರ್ಚು-ವೆಚ್ಚಗಳು ಹೆಚ್ಚಾಗುತ್ತಿವೆ. ದೇಶ ಹಾಗೂ ವಿದೇಶಗಳಲ್ಲಿರುವ ಬಹುತೇಕ ಬೃಹತ್ ಕಂಪೆನಿಗಳು ಲಾಭದಲ್ಲಿವೆ.
-ವಿ.ವೆಂಕಟೇಶ್, ನಿಕಟಪೂರ್ವ ಅಧ್ಯಕ್ಷ,
ಇಸಾಕಾ ಸಂಸ್ಥೆ, ಬೆಂಗಳೂರು ಚಾಪ್ಟರ್.
ತಂತ್ರಜ್ಞಾನ ಕ್ಷೇತ್ರ ಹುಲಿ ಮೇಲಿನ ಸವಾರಿ. ಇಲ್ಲಿ ಅನೇಕ ಸವಾಲುಗಳು ಇವೆ. ಹಾಗಂತ ಆತಂಕಪಡುವ ಅಗತ್ಯವಿಲ್ಲ. ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. ತಾಂತ್ರಿಕ ಕಂಪೆನಿಗಳು ನೀಡುವ ಹೊರಗುತ್ತಿಗೆಯ ಅವಕಾಶ ಕೂಡ ನಮ್ಮ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಯಾಗಿ, ನಮ್ಮವರಿಗೇ ಹೆಚ್ಚಿನ ಲಾಭವಾಗುವ ನಿರೀಕ್ಷೆ ನಮ್ಮದು.
-ಡಾ| ಸಿ.ಎನ್.ಅಶ್ವತ್ಥ ನಾರಾಯಣ, ಐಟಿ, ಬಿಟಿ ಸಚಿವ
ಉದ್ಯೋಗ ಕಡಿತ
ಭಾರತ
ಸ್ಟಾರ್ಟ್‌ಅಪ್ ಜನ
ಉಡಾನ್ 350
ಫ್ರಂಟ್ ರೋ 125-130
ಬೈಜೂಸ್ 2,500
ವಜಿರೆಕ್ಸ್ 60ಕ್ಕೂ ಹೆಚ್ಚು
ದೂಕಾನ್ 23
ಓಲಾ 200
ಸಾಸ್ 200
ರುಪೀಕ್ 230
ಹೆಲ್ತ್‌ಟೆಕ್ 120
ಲಿಡೋ 150
ಓಕೆ ಕ್ರೆಡಿಟ್ 40
ಬ್ಲಿಂಕಿಟ್ 1,600
ಓಲಾ ದಾರ್ಶ್ 2,100
ವ್ಹೆ„ಟ್ ಹ್ಯಾಟ್ ಜ್ಯೂ. 1,000
ಅಮೆರಿಕದಲ್ಲಿ
ಕಂಪೆನಿ ಜನ
ಮೆಟಾ 11,000
ಟ್ವಿಟರ್ 3,500
ಕಾರ್‌ವಾನಾ 2,500
ಕಾಯಿನ್‌ಬೇಸ್ 1,100
ಜೆ.ಪಿ.ಮಾರ್ಗನ್ ಚೇಸ್ 1,000
ಲೋನ್ ಡಿಪೋ 2,000
ಟೆಸ್ಲಾ 229
ಫೋರ್ಡ್ 8,000
ಕ್ರೆಡಿಟ್ ಸ್ವಿಸ್ 5,000
ಟ್ವಿಲಿಯೋ 800-900
ಮೈಕ್ರೋಸಾಫ್ಟ್ ಶೇ.1ಕ್ಕಿಂತ ಕಡಿಮೆ
(ಒಟ್ಟು ಉದ್ಯೋಗಿಗಳ ಪೈಕಿ)
ಫಿಲಿಪ್ಸ್ 4,000
ಮಾಹಿತಿ ಕೃಪೆ: ವಿವಿಧ ಜಾಲತಾಣಗಳು