Advertisement
ಹೌದು, ಜಿಲ್ಲಾಧಿಕಾರಿಗಳ ವಿಶೇಷ ಕಾಳಜಿಯಿಂದ ಒಂದೇ ವರ್ಷದಲ್ಲಿ ಜಿಲ್ಲೆಯಾದ್ಯಂತ 15 ಸಾವಿರಕ್ಕೂ ಅಧಿಕ ಜನರು ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ಮಾಸಾಶನ ಸೇರಿದಂತೆ ಇನ್ನಿತರ ಸಾಮಾಜಿಕ ಭದ್ರತಾ ಯೋಜನೆ ಲಾಭ ಪಡೆದುಕೊಂಡಿದ್ದಾರೆ. ವೃದ್ಧರು, ವಿಧವೆಯರು, ಅಂಗವಿಕಲರಿಗೆ ಮಾಸಾಶನ ಸೌಲಭ್ಯಕ್ಕೆ ತಾವೇ ಸ್ವತಃ ತಾಲೂಕುಗಳಲ್ಲಿ ಪಿಂಚಣಿಅದಾಲತ್ ನಡೆಸಿದ್ದಾರೆ. ಅಲ್ಲದೆ ಅಧಿಕಾರಿಗಳೇ ಮನೆಮನೆಗೆ ಹೋಗಿ ಫಲಾನುಭವಿಗಳನ್ನು ಗುರುತಿಸಿ ಸಾಮಾಜಿಕ ಭದ್ರತೆ ಒದಗಿಸುತ್ತಿದ್ದಾರೆ.
Related Articles
Advertisement
ಅಧಿಕಾರಿಗಳ ಸಹಕಾರ: ವಿವಿಧ ಮಾಸಾಶನ ವಿಚಾರದಲ್ಲಿ ಜಿಲ್ಲಾಧಿಕಾರಿ ವಿಶೇಷ ಕಾಳಜಿ ವಹಿಸುವುದನ್ನು ಅರಿತ ಅಧಿಕಾರಿ ವರ್ಗ ಸಹ ಈ ವಿಚಾರದಲ್ಲಿ ಆಸಕ್ತಿ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ನಿರಂತರವಾಗಿ ಬರುವ ಮಾಸಾಶನ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಕಾರ್ಯವೂ ಮುಂದುವರಿದೆ. ಸರ್ಕಾರ ಪ್ರಸ್ತತ ಆನ್‌ಲೈನ್ ಮೂಲಕ ಹಣ ಸಂದಾಯ ಮಾಡುವ ವ್ಯವಸ್ಥೆ ಜಾರಿಗೊಳಿಸಿದ್ದು ವಿವಿಧ ದಾಖಲಾತಿ ಕಾರಣದಿಂದಾಗಿ ಅಮಾನತು ಆಗಿದ್ದ ಸಾವಿರಾರು ಪ್ರಕರಣಗಳಿಗೆ ಸಂಬಂಧಿಸಿ ಅಧಿಕಾರಿಗಳೇ ದಾಖಲೆ ತರಿಸಿಕೊಂಡು ಮಾಸಾಶನ ಕೊಡಿಸುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಹೊಸದಾಗಿ ಸಲ್ಲಿಕೆಯಾದ 1706 ಅರ್ಜಿಗಳ ವಿಲೇವಾರಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ವಿವಿಧ ಮಾಸಾಶನ ಸೌಲಭ್ಯ ದೊರಕಿಸುವಲ್ಲಿ ಹಾಗೂ ಮಾಸಾಶನ ಅರ್ಜಿಗಳ ತ್ವರಿತ ವಿಲೇವಾರಿಯಲ್ಲಿ ಜಿಲ್ಲಾಧಿಕಾರಿ ವಹಿಸುತ್ತಿರುವ ಕಾಳಜಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಏಕಿಷ್ಟು ಕಾಳಜಿ? : ಜಿಲ್ಲಾಧಿಕಾರಿಗಳು ವಿವಿಧ ಮಾಸಾಶನ ಕೊಡಿಸುವಲ್ಲಿ ಏಕಿಷ್ಟು ಕಾಳಜಿ ತೋರುತ್ತಿದ್ದಾರೆ ಎಂಬುದಕ್ಕೆ ಅವರೇ ಹಲವು ಸಭೆ-ಸಮಾರಂಭಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. “ನಾನು ಐದು ವರ್ಷದವನಿದ್ದಾಗ ನನ್ನ ತಂದೆ ಅಕಾಲಿಕ ಮರಣ ಹೊಂದಿದರು. ಆಗ ನಮಗೆ ಕಿತ್ತು ತಿನ್ನುವ ಬಡತನ. ಆ ಸಮಯದಲ್ಲಿ ನನ್ನ ತಾಯಿ ವಿಧವಾ ವೇತನಕ್ಕೆ ಅರ್ಜಿ ಹಾಕಿದಾಗ ಅಧಿಕಾರಿಗಳು ತಾಯಿಗೆ ಅನೇಕ ಸಲ ಕಚೇರಿಗೆ ಅಲೆದಾಡಿಸಿದರು. 25 ರೂ. ಮಾಸಾಶನಕ್ಕೆ 100 ರೂ. ಲಂಚ ನೀಡಿ ನನ್ನ ತಾಯಿ ವಿಧವಾ ವೇತನದ ಆದೇಶಪತ್ರ ಪಡೆಯಬೇಕಾಯಿತು. ಇದನ್ನೆಲ್ಲ ಗಮನಿಸಿದ ನಾನು ಶ್ರದ್ಧೆಯಿಂದ ಓದಿ ಜಿಲ್ಲಾಧಿಕಾರಿಯಾದೆ. ನನ್ನ ತಾಯಿ ಪಟ್ಟ ಕಷ್ಟ ಬೇರೆ ಯಾವ ತಾಯಂದಿರೂ ಪಡಬಾರದೆಂದು ಮನೆ ಬಾಗಿಲಿಗೆ ಹೋಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮಾಸಾಶನ ಕೊಡಿಸುವ ಕೆಲಸ ಮಾಡುತ್ತಿದ್ದೇನೆ’.
ವೃದ್ಧಾಪ್ಯ ವೇತನ ಪಡೆಯಲು ಎಲ್ಲಿ ಅರ್ಜಿಕಬೇಕು ಗೊತ್ತಿರಲಿಲ್ಲ. ಪಿಂಚಣಿಗಾಗಿ ಕಚೇರಿಗೆ ಅಲೆದಾಡಲು ಆರೋಗ್ಯವೂ ಸರಿಯಿರಲಿಲ್ಲ. ಆದ್ದರಿಂದ ಪಿಂಚಣಿ ಪಡೆಯುವ ವಿಚಾರವನ್ನೇ ಕೈಬಿಟ್ಟಿದ್ದೆ. ಪಂಚಾಯಿತಿ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ದಾಖಲೆಗಳನ್ನು ಪಡೆದು ಪಿಂಚಣಿ ಬರುವಂತೆ ಮಾಡಿ ಸಹಾಯ ಮಾಡಿದ್ದಾರೆ. -ಬಸಪ್ಪ ಎಚ್.ಎನ್., ಸುರಹೊನ್ನೆ
ಕೋವಿಡ್ ಸಂದರ್ಭದಲ್ಲಿಯೂ ಕೆಲವು ಕಡೆ ಅಧಿಕಾರಿಗಳು ಮನೆ ಮನೆಗೆ ಹೋಗಿ ಫಲಾನುಭವಿಗಳನ್ನು ಹುಡುಕಿ ಮಾಸಾಶನ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆ ಮತ್ತೆ ಪಿಂಚಣಿ ಅದಾಲತ್ ಮುಂದುವರಿಸುತ್ತೇವೆ. -ಮಹಾಂತೇಶ್ ಬೀಳಗಿ, ದಾವಣಗೆರೆ ಡಿಸಿ
-ಎಚ್.ಕೆ. ನಟರಾಜ