Advertisement

ಕೇರಳ ಸಿಎಂಗೆ ಉರುಳಾಗುತ್ತಾ ಬಂಗಾರ…ಯಾರಿವರು ಸ್ವಪ್ನಾ ಸುರೇಶ್?

11:00 AM Jun 14, 2022 | Team Udayavani |

ಕೇರಳ ರಾಜಕಾರಣವನ್ನೇ ಅಲ್ಲಾಡಿಸಿದ್ದ ಸ್ವಪ್ನಾ ಸುರೇಶ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅಲ್ಲಿನ ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಬ್ಯಾಗ್‌ಗಟ್ಟಲೆ ಹಣ ಬಂದಿತ್ತು ಎಂದು ನೇರ ಆರೋಪ ಮಾಡಿದ್ದಾರೆ. ವಿಪಕ್ಷಗಳ ನಾಯಕರು ಪಿಣರಾಯಿ ವಿಜಯನ್‌ ಅವರ ರಾಜೀನಾಮೆಗೆ ಒತ್ತಾಯ ಮಾಡುತ್ತಿದ್ದಾರೆ. ಹಾಗಾದರೆ ಏನಿದು ಕೇಸ್‌? ಯಾವಾಗ ಬೆಳಕಿಗೆ ಬಂತು? ಈಗ ಏನಾಗಿದೆ? ಈ ಕುರಿತ ಒಂದು ಸಮಗ್ರ ನೋಟ ಇಲ್ಲಿದೆ.

Advertisement

ಯಾರಿವರು ಸ್ವಪ್ನಾ ಸುರೇಶ್‌?

2013ರಲ್ಲಿ ದುಬಾೖ ನಿವಾಸಿಯಾಗಿದ್ದ ಸ್ವಪ್ನಾ ಸುರೇಶ್‌, ಏರ್‌ ಇಂಡಿಯಾ ಸ್ಯಾಟ್ಸ್‌ನಲ್ಲಿ ಎಚ್‌ಆರ್‌ ಎಕ್ಸಿಕ್ಯೂಟಿವ್‌ ಆಗಿ ಕೆಲಸಕ್ಕೆ ಸೇರಿದ್ದರು. ಇದು ತಿರುವನಂತಪುರದ ಏರ್‌ಪೋರ್ಟ್‌ ಸೇವೆಯ ಸಂಸ್ಥೆಯಾಗಿತ್ತು. ಈ ಸಂಸ್ಥೆಯಲ್ಲಿಯೂ ಸ್ವಪ್ನಾ ಸುರೇಶ್‌ ತಮ್ಮ ಪ್ರಭಾವ ಬಳಸಿ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಸುಳ್ಳು ದೂರು ದಾಖಲಿಸಲು ಸಂಚು ರೂಪಿಸಿದ್ದರು ಎಂಬ ಆರೋಪವಿದೆ. ಈಕೆಯ ಸಂಚು ಬಹಿರಂಗವಾಗಿ, ತನಿಖೆಗೆ ಆದೇಶವಾಗಿದ್ದರೂ, ತನ್ನ ಪ್ರಭಾವದಿಂದ ತನಿಖೆ ಹಾದಿ ತಪ್ಪುವಂತೆ ನೋಡಿಕೊಂಡಿದ್ದರು.

ಬಳಿಕ 2016ರಲ್ಲಿ ತಿರುವನಂತಪುರದಲ್ಲಿರುವ ಯುಎಇ ಕಾನ್ಸುಲೇಟ್‌ ಜನರಲ್‌ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದರು. ಈಕೆಗಿದ್ದ ಉತ್ತಮ ಅರಬ್‌ ಭಾಷೆಯಲ್ಲಿನ ಮಾತು ಈ ಕೆಲಸಕ್ಕೆ ಸೇರಲು ಉಪಯೋಗಕ್ಕೆ ಬಂದಿತ್ತು. ಅಲ್ಲದೆ ಕೇರಳ ಸರಕಾರ ಕೂಡ ಯುಎಇ ಕಾನ್ಸುಲೇಟ್‌ನೊಂದಿಗೆ ಉತ್ತಮ ಸಂಬಂಧವಿರಿಸಿಕೊಂಡಿದ್ದ ಕಾರಣ ಬಹುಬೇಗನೇ ಪ್ರಸಿದ್ಧಿಯಾಗಿದ್ದರು. ಅಲ್ಲದೆ ಸಾಮಾ ಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸದೃಢ ರಾದವರೊಂದಿಗೆ ಉತ್ತಮ ಒಡನಾಟವನ್ನೂ ಬೆಳೆಸಿಕೊಂಡ ಸ್ವಪ್ನಾ, ತನ್ನನ್ನು ಒಬ್ಬ ರಾಜತಾಂತ್ರಿಕ ಅಧಿಕಾರಿ ಎಂದೇ ಬಿಂಬಿಸಿಕೊಂಡಿದ್ದರು. ಆದರೆ ಒಂದು ವರ್ಷದ ತರುವಾಯ ಕ್ರಿಮಿನಲ್‌ ದೂರಿನ ಆಧಾರದ ಮೇಲೆ ರಾಯಭಾರ ಕಚೇರಿ ಈಕೆಯನ್ನು ಕೆಲಸದಿಂದ ತೆಗೆದುಹಾಕಿತ್ತು.
ಇದಾದ ಅನಂತರ, ಸ್ವಪ್ನಾ ಸುರೇಶ್‌ ಅವರು ಐಟಿ ಕಾರ್ಯದರ್ಶಿ ಎಂ. ಶಿವಶಂಕರ್‌ ಅವರ ಜತೆಗೆ ಇನ್ನಷ್ಟು ಆಪ್ತರಾದರು. ಇದಕ್ಕೆ ಕಾರಣವೂ ಇದೆ. ಶಿವಶಂಕರ್‌ ಅಧ್ಯಕ್ಷರಾಗಿದ್ದ ಕೇರಳ ರಾಜ್ಯ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಲಿಮಿಟೆಡ್‌ನ‌ಲ್ಲಿ ಬ್ಯುಸಿನೆಸ್‌ ಡೆವಲಪ್‌ಮೆಂಟ್‌ ಮ್ಯಾನೇಜರ್‌ ಆಗಿ ಕೆಲಸಕ್ಕೆ ಸೇರಿದ್ದರು. ಕೆಎಸ್‌ಐಟಿಐಎಲ್‌ ಅಧಿಕಾರಿಗಳ ಪ್ರಕಾರ, ಸ್ವಪ್ನಾ ಸುರೇಶ್‌ ಪದವಿ ಪಡೆದಿರುವುದರಿಂದ ಈ ಕೆಲಸ ನೀಡಲಾಗಿದೆ. ಆದರೆ ವಿದೇಶದಲ್ಲಿರುವ ಅವರ ಸಹೋದರನ ಪ್ರಕಾರ, ಈಕೆ 10ನೇ ತರಗತಿಯನ್ನೂ ಪಾಸು ಮಾಡಿಲ್ಲ.

ಸ್ವಪ್ನಾ ಸುರೇಶ್‌ ಅವರ ಈಗಿನ ಆರೋಪವೇನು?
ರಾಜಕೀಯವಾಗಿ ಭಾರೀ ಬಿಸಿ ಪಡೆದುಕೊಂಡಿರುವ ಈ ಪ್ರಕರಣದಲ್ಲಿ ಸ್ವಪ್ನಾ ಸುರೇಶ್‌ ಅವರೇ ಪ್ರಮುಖ ಆರೋಪಿ. ಈಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಬಹುದೊಡ್ಡ ಆರೋಪ ಮಾಡಿದ್ದಾರೆ. ಅಂದರೆ 2016ರಲ್ಲಿ ಪಿಣರಾಯಿ ವಿಜಯನ್‌ ಅವರು ಯುಎಇಗೆ ಭೇಟಿ ನೀಡಿದ ವೇಳೆ ಕಂತೆಗಟ್ಟಲೇ ಹಣವನ್ನು ತೆಗೆದುಕೊಂಡು ಹೋಗಿದ್ದರು ಎಂದು ಆರೋಪಿಸಲಾಗಿದೆ. ಸ್ವಪ್ನಾ ಅವರೇ ಹೇಳಿದ ಪ್ರಕಾರ, ನಾನು ಆಗ ತಿರುವನಂತಪುರದ ಯುಎಇ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್‌ ಅವರು ಸಿಎಂ ಒಂದು ಬ್ಯಾಗ್‌ ಮರೆತಿದ್ದಾರೆ. ಅದನ್ನು ತತ್‌ಕ್ಷಣ ತರಬೇಕು. ಹಾಗೆಯೇ ಅತ್ಯಂತ ಶೀಘ್ರವಾಗಿ ಕ್ಲಿಯರೆನ್ಸ್‌ ಮಾಡಿಕೊಡಿ ಎಂದಿದ್ದರು. ಆಗ ಅವರು ಹೇಳಿದ್ದ ಬ್ಯಾಗ್‌ ಅನ್ನು ಅಧಿಕಾರಿಗೆ ನೇರವಾಗಿ ತಲುಪಿಸಲಾಗಿತ್ತು. ಅದರಲ್ಲಿ ಕರೆನ್ಸಿ ಇತ್ತು. ಅಲ್ಲದೆ, ರಾಯಭಾರ ಕಚೇರಿಯಲ್ಲಿದ್ದ ಸ್ಕ್ಯಾನರ್‌ ಮೂಲಕ ನೋಡಿದಾಗ ಅದರಲ್ಲಿ ಕರೆನ್ಸಿ ಇದ್ದ ಮಾಹಿತಿ ನನಗೆ ಸಿಕ್ಕಿತ್ತು.

Advertisement

ಶಿವಶಂಕರ್‌ ವಿರುದ್ಧವೂ ಸ್ವಪ್ನಾ ಆರೋಪ
ಕೇವಲ ಸಿಎಂ ಅಷ್ಟೇ ಅಲ್ಲ, ಶಿವಶಂಕರ್‌ ಕೂಡ ಆಗಾಗ ಇದೇ ರೀತಿ ಕೆಲವೊಂದು ವಸ್ತುಗಳನ್ನು ರವಾನೆ ಮಾಡುತ್ತಿದ್ದರು. ಶಿವಶಂಕರ್‌ ಅವರ ನಿರ್ದೇಶನದ ಮೇರೆಗೆ ಹಲವಾರು ಬಾರಿ ಬಿರಿಯಾನಿ ವೆಸೆಲ್ಸ್ ಗಳನ್ನು ಕೇರಳ ಮುಖ್ಯಮಂತ್ರಿ ಅಧಿಕೃತ ಕಚೇರಿ ಕ್ಲಿಫ್‌ ರೆಸಿಡೆನ್ಸ್‌ಗೆ ಕೌನ್ಸಲ್‌ ಜನರಲ್‌ ಕಚೇರಿಯಿಂದ ಕಳುಹಿಸಲಾಗುತ್ತಿತ್ತು. ಇದರಲ್ಲಿ ಕೇವಲ ಬಿರಿಯಾನಿ ಮಾತ್ರವಲ್ಲ, ಕೆಲವು ಮೆಟಲ್‌ ವಸ್ತುಗಳೂ ಇರುತ್ತಿದ್ದವು ಎಂದು ಸ್ವಪ್ನಾ ಸುರೇಶ್‌ ಆರೋಪಿಸಿದ್ದಾರೆ. ಜತೆಗೆ, ಸಿಎಂ, ಅವರ ಪತ್ನಿ, ಪುತ್ರಿ, ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್‌ ಕೂಡ ಈ ಕಳ್ಳಸಾಗಾಣಿಕೆಯಲ್ಲಿ ಭಾಗಿ ಯಾಗಿದ್ದಾರೆ ಎಂದೂ ಹೇಳಿದ್ದಾರೆ. ಈಗ ಪ್ರಕರಣ ಇನ್ನೂ ತನಿಖಾ ಹಂತದಲ್ಲೇ ಇದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸ್ವಪ್ನಾ ಸುರೇಶ್‌ ನೇರವಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧವೇ ನೇರ ಆರೋಪ ಮಾಡುತ್ತಿದ್ದಾರೆ. ಇದನ್ನು ವಿಜಯನ್‌ ಅಲ್ಲಗಳೆದಿದ್ದಾರೆ. ಅತ್ತ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಸಿಎಂ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next