ಮಂಗಳೂರು : ಸಂಘಪರಿವಾರದ ಹರತಾಳದ ಕರೆಯ ಹೊರತಾಗಿಯೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಿಪಿಐ(ಎಂ) ಐಕ್ಯತಾ ರಾಲಿ ಉದ್ದೇಶಿಸಿ ಮಾತನಾಡಲು ಶನಿವಾರ ಮಂಗಳೂರಿಗೆ ಆಗಮಿಸಿದ್ದಾರೆ. ಕಾಸರಗೋಡಿನಿಂದ ರೈಲಿನಲ್ಲಿ ಆಗಮಿಸಿದ ವಿಜಯನ್ ಅವರನ್ನು ಸಿಪಿಐ(ಎಂ) ಕಾರ್ಯಕರ್ತರು ಜಯಘೋಷಗಳೊಂದಿಗೆ ಸ್ವಾಗತಿಸಿದರು.
ಸ್ವಾಗತದ ವೇಳೆ ಭದ್ರತಾ ವಿಚಾರವಾಗಿ ಪಿಣರಾಯಿ ವಿಜಯನ್ ಅವರೊಂದಿಗೆ ಆಗಮಿಸಿದ್ದ ಕೇರಳದ ಪೊಲೀಸ್ ಸಿಬಂದಿ ಮತ್ತು ಮಂಗಳೂರಿನ ಪೊಲೀಸರಿಗೆ ತೀವ್ರ ವಾಗ್ವಾದ ನಡೆಯಿತು.
ಇಲ್ಲಿ ಬಂದಿರುವ ವೇಳೆ ನಾವೇ ಭದ್ರತೆ ನೀಡುತ್ತೇವೆ ನೀವು ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮಂಗಳೂರು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ.
ನೂರಾರು ಪೊಲೀಸರು ಪಿಣರಾಯಿ ಅವರ ಬೆಂಗಾವಲಿಗೆ ನಿಂತಿದ್ದು ಎಲ್ಲೆಡೆ ಹದ್ದಿನ ಕಣ್ಣು ಇರಿಸಲಾಗಿದೆ.
ಕೋಮು ಸೌಹಾರ್ದ ರ್ಯಾಲಿ ಮತ್ತು ಸಭೆ ಹೊರತುಪಡಿಸಿ ಉಳಿದಂತೆ ಹರತಾಳ, ಬಂದ್ ಆಚರಿಸದಂತೆ ನಗರದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.