Advertisement

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪೈಲಟ್‌ ಭಾಗ್ಯ

09:09 AM Jun 27, 2022 | Team Udayavani |

ಬೆಂಗಳೂರು: ಕಟ್ಟಡ ಕಾರ್ಮಿಕ ಮಕ್ಕಳಿಗೆ ಉನ್ನತ ವ್ಯಾಸಂಗ ಮತ್ತು ಉದ್ಯೋಗ ತರಬೇತಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿರುವ ಕಾರ್ಮಿಕ ಇಲಾಖೆ, ಈಗ ವಿಮಾನ ಚಾಲನೆ (ಪೈಲಟ್‌) ತರಬೇತಿ ನೀಡುವ ಯೋಜನೆಯನ್ನು ರೂಪಿಸಿದೆ.

Advertisement

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪೈಲಟ್‌ ತರಬೇತಿ ನೀಡುವ ಯೋಜನೆ ಜಾರಿಗೊಳಿಸಲು ಕಾರ್ಮಿಕ ಇಲಾಖೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದ್ದು, ಎಲ್ಲ ಪ್ರಕ್ರಿಯೆಗಳು ನಿಗದಿತ ಅವಧಿಯಲ್ಲಿ ಮುಗಿದರೆ ಇದೇ ವರ್ಷ 10ರಿಂದ 15 ಮಕ್ಕಳು ಪೈಲಟ್‌ ಆಗಲಿದ್ದಾರೆ.

ಕಾರ್ಮಿಕ ಇಲಾಖೆಯು ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಲ್ಲಿರುವ ಸರಕಾರಿ ವೈಮಾನಿಕ ತರಬೇತಿ ಶಾಲೆಯ ಸಹಯೋಗದೊಂದಿಗೆ ತರಬೇತಿ ಯೋಜನೆ ಹಮ್ಮಿಕೊಂಡಿದೆ. ಯೋಜನೆಗೆ ಆಯ್ಕೆಯಾಗುವ ಮಕ್ಕಳ ಸಂಪೂರ್ಣ ತರಬೇತಿ ಶುಲ್ಕ ಹಾಗೂ ವೆಚ್ಚವನ್ನು ಕರ್ನಾಟಕ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಭರಿಸಲಿದೆ.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಸರಕಾರಿ ವೈಮಾನಿಕ ತರಬೇತಿ ಶಾಲೆ ಮೂಲಕ ವಿಮಾನ ಚಾಲನೆ ತರಬೇತಿ ನೀಡುವ ಮಾದರಿಯಲ್ಲಿ ಕಾರ್ಮಿಕ ಇಲಾಖೆ ಸೂಚಿಸುವ ಸೂಕ್ತ ಅಭ್ಯರ್ಥಿಗಳಿಗೂ ವಾಣಿಜ್ಯ ಪೈಲಟ್‌ ಲೈಸನ್ಸ್‌ (ಸಿಪಿಎಲ್‌) ಮತ್ತು ಖಾಸಗಿ ಪೈಲಟ್‌ ಲೈಸನ್ಸ್‌ (ಪಿಪಿಎಲ್‌) ತರಬೇತಿ ನೀಡಲಾಗುವುದು ಎಂದು ಸರಕಾರಿ ವೈಮಾನಿಕ ತರಬೇತಿ ಶಾಲೆ ಕಾರ್ಮಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಆಯ್ದ ಮಕ್ಕಳಿಗೆ ಪೈಲಟ್‌ ತರಬೇತಿ ಕೊಡಿಸುವ ಬಗ್ಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ್‌ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ತರಬೇತಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ, ಅವಧಿ ಮತ್ತು ವಿಧಾನ, ಶುಲ್ಕ ಇತ್ಯಾದಿಗಳ ಬಗ್ಗೆ ಸರಕಾರಿ ವೈಮಾನಿಕ ಶಾಲೆಯು ಪ್ರಸ್ತಾವನೆಯನ್ನು ಸಲ್ಲಿಸಿದೆ. ಇದನ್ನು ಪರಿಶೀಲಿಸಿ ಅಂತಿಮಗೊಳಿಸುವ ಕಾರ್ಯ ಇಲಾಖಾ ಮಟ್ಟದಲ್ಲಿ ನಡೆಯುತ್ತಿದ್ದು, ಶೀಘ್ರ ಅಂತಿಮ ರೂಪ ಸಿಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆ ಹಾಗೂ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಾನದಂಡಗಳನ್ನು ಆಧರಿಸಿ ಮೊದಲ ಹಂತದಲ್ಲಿ 10ರಿಂದ 15 ಮಕ್ಕಳನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಸಾಧಕ-ಬಾಧಕ, ಯಶಸ್ಸು ಆಧರಿಸಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ವಾಣಿಜ್ಯ ಪೈಲಟ್‌ ಲೈಸನ್ಸ್‌
-ವಿದ್ಯಾರ್ಹತೆ: ಪಿಯುಸಿ (ಭೌತಶಾಸ್ತ್ರ, ಗಣಿತ)
-ವಯೋಮಿತಿ: ಕನಿಷ್ಠ 18 ವರ್ಷ
-ತರಬೇತಿ ಅವಧಿ: 2 ವರ್ಷ
-ತರಬೇತಿ ವಿವರ: ಗ್ರೌಂಡ್‌ ತರಗತಿ
-ಹಾರಾಟ ತರಬೇತಿ: 200 ಗಂಟೆ
-ಸಿಮ್ಯುಲೇಟರ್‌: 10 ಗಂಟೆ
-ಶುಲ್ಕ: ಕರ್ನಾಟಕದವರಿಗೆ 37 ಲಕ್ಷ ರೂ.
-ಹೊರಗಿನವರಿಗೆ 42 ಲಕ್ಷ ರೂ.

ಖಾಸಗಿ ಪೈಲಟ್‌ ಲೈಸನ್ಸ್‌
-ವಿದ್ಯಾರ್ಹತೆ: ಎಸೆಸೆಲ್ಸಿ
-ವಯೋಮಿತಿ: 16 ವರ್ಷ ಮೇಲ್ಪಟ್ಟು
-ತರಬೇತಿ ಅವಧಿ: 1 ವರ್ಷ
-ತರಬೇತಿ ವಿವರ: ಗ್ರೌಂಡ್‌ ತರಗತಿ
-ಹಾರಾಟ ತರಬೇತಿ: 40 ಗಂಟೆ
-ಶುಲ್ಕ: ಕರ್ನಾಟಕದವರಿಗೆ 10 ಲಕ್ಷ ರೂ.
-ಹೊರಗಿನವರಿಗೆ 15 ಲಕ್ಷ ರೂ.

-ರಫೀಕ್‌ ಅಹ್ಮದ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next