Advertisement

ಲಭಿಸದ ಸ್ಪಂದನೆ; ಪಿಲಿಕುಳ ಕಂಬಳ ಈ ಬಾರಿಯೂ ಅನುಮಾನ

11:15 PM Feb 17, 2020 | mahesh |

ಮಹಾನಗರ: ಕರಾವಳಿಯ ಜಾನಪದ ಕ್ರೀಡೆ ಕಂಬಳದ ವೇಗದ ಓಟಗಾರ ಶ್ರೀನಿವಾಸಗೌಡರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಮೆಚ್ಚುಗೆ ವ್ಯಕ್ತಪಡಿಸಿ ದೇಶಾದ್ಯಂತ ಸುದ್ದಿಯಾಗುತ್ತಿದ್ದರೆ ಇತ್ತ ಸರಕಾರಿ ಪ್ರಾಯೋಜಕತ್ವದ ಪಿಲಿಕುಳ ಕಂಬಳ ಆಯೋಜನೆಯನ್ನು ಇದೀಗ ಸರಕಾರ ಸತತ 6ನೇ ವರ್ಷವೂ ಕೈಬಿಡುತ್ತಿರುವುದು ಬಹುತೇಕ ಖಚಿತ!

Advertisement

ಕರಾವಳಿ ಭಾಗದಲ್ಲಿ ಮಾ. 29ಕ್ಕೆ ಈ ಬಾರಿಯ ಕಂಬಳ ಋತು ಮುಕ್ತಾಯವಾಗಲಿದ್ದು, ಇನ್ನೂ ಕೇವಲ ಮೂರು ಕಂಬಳಗಳು ಮಾತ್ರ ಬಾಕಿಯುಳಿದಿವೆ. ಆದರೆ ಪಿಲಿಕುಳ ಕಂಬಳ ಆಯೋಜನೆ ಬಗ್ಗೆ ರಾಜ್ಯ ಸರಕಾರದಿಂದ ಇನ್ನೂ ಯಾವುದೇ ನಿರ್ಧಾರ ಹೊರ ಬಿದ್ದಿಲ್ಲ. ಒಂದೊಮ್ಮೆ ಈಗ ನಿರ್ಧಾರ ಹೊರಬಿದ್ದರೂ ಈ ಋತುವಿನಲ್ಲಿ ಕಂಬಳ ಆಯೋಜನೆ ಮಾಡುವುದು ಕಷ್ಟಸಾಧ್ಯ. ಇದರೊಂದಿಗೆ ಐದು ವರ್ಷಗಳಿಂದ ಸ್ಥಗಿತಗೊಂಡಿರುವ ಸರಕಾರಿ ಪ್ರಾಯೋಜಕತ್ವದಲ್ಲಿ ಏಕೈಕ ಕಂಬಳ ಈ ಬಾರಿಯೂ ನಡೆಯುವ ಸಾಧ್ಯತೆ ತೀರಾ ಕಡಿಮೆಯಿದ್ದು, ಆ ಮೂಲಕ ಪ್ರತಿಷ್ಠಿತ ಪಿಲಿಕುಳ ಕಂಬಳ ಕಣ್ಮರೆಯ ಹಾದಿ ಹಿಡಿದಿದೆ.

ಪಿಲಿಕುಳದಲ್ಲಿ ನಿಂತು ಹೋಗಿದ್ದ ಕಂಬಳದ ಬಗ್ಗೆ
ದಕ್ಷಿಣ ಕನ್ನಡ ಜಿಲ್ಲಾಡಳಿತ ಒಲವು ತೋರಿ ಜನವರಿ/ ಫೆಬ್ರವರಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿತ್ತು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನವೆಂಬರ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಪಿಲಿಕುಳದಲ್ಲಿ ಜಿಲ್ಲಾಡಳಿತ ವತಿಯಿಂದ ಕಂಬಳ ಆಯೋಜನೆ ಬಗ್ಗೆ ಚರ್ಚೆ ನಡೆದಿತ್ತು. ಆಯೋಜನೆ ಬಗ್ಗೆ ಸರಕಾರದಿಂದ ಸೂಕ್ತ ಮಾಹಿತಿ ಪಡೆದುಕೊಂಡು ಅನುದಾನದ ಬಗ್ಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಜಿಲ್ಲಾಡಳಿತದಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಈ ಪ್ರಸ್ತಾವನೆಗೆ ಸರಕಾರದಿಂದ ಈವರೆಗೆ ಪೂರಕ ಸ್ಪಂದನೆ ಸಿಕ್ಕಿಲ್ಲ.

ತಡೆ ಇಲ್ಲ; ಆಸಕ್ತಿಯ ಕೊರತೆ
ಪಿಲಿಕುಳದಲ್ಲಿ 2014ರಲ್ಲಿ ಕೊನೆಯ ಕಂಬಳ ನಡೆದಿತ್ತು. ಗುತ್ತಿನಮನೆಯ ಮುಂಭಾಗದಲ್ಲಿರುವ “ನೇತ್ರಾವತಿ-ಫಲ್ಗುಣಿ’ ಜೋಡುಕರೆಯಲ್ಲಿ ಕಂಬಳ ವಿಜೃಂಭಣೆಯಿಂದ ನಡೆದಿದ್ದು, 85 ಜತೆ ಕೋಣಗಳು ಇದರಲ್ಲಿ ಪಾಲ್ಗೊಂಡಿದ್ದವು. ಆದರೆ ಆ ಬಳಿಕ ಕಂಬಳದ ವಿರುದ್ಧ ಪೆಟಾ ಸಂಸ್ಥೆ ನ್ಯಾಯಾಲಯದಲ್ಲಿ ಕಾನೂನು ಸಮರ ಆರಂಭಿಸಿದ ಪರಿಣಾಮ ಜಿಲ್ಲಾಡಳಿತ ಪಿಲಿಕುಳದಲ್ಲಿ ಕಂಬಳವನ್ನು ಸ್ಥಗಿತಗೊಳಿಸಿತ್ತು. ಇದೀಗ ಕಾನೂನಿಗೆ ತಿದ್ದುಪಡಿ ತಂದು ಕಾನೂನಾತ್ಮಕ ಸಮಸ್ಯೆಗಳನ್ನು ನಿವಾರಿಸಲಾಗಿದೆ. ನ್ಯಾಯಾಲಯದಿಂದಲೂ ಯಾವುದೇ ತಡೆಯಾಜ್ಞೆ ಇಲ್ಲ .

ಕಂಬಳ ನಡೆಸಲು ಯಾವುದೇ ಸಮಸ್ಯೆಗಳಿಲ್ಲ. ಈ ಬಾರಿ ಕಂಬಳ ಆಯೋಜನೆಗೆ ಅಡ್ಡಿಯಾಗಿದ್ದು ಆಸಕ್ತಿಯ ಕೊರತೆ. 2018ರ ಕಂಬಳ ಋತುವಿನಲ್ಲೂ ಜಿಲ್ಲಾಡಳಿತ ಕಂಬಳ ನಡೆಸಲು ನಿರ್ಧರಿಸಿದ್ದರೂ ಅನುದಾನ ದೊರೆಯದ ಹಿನ್ನಲೆಯಲ್ಲಿ ಪ್ರಸ್ತಾವನೆಯನ್ನು ಅನಂತರದಲ್ಲಿ ಕೈಬಿಡಲಾಗಿತ್ತು.

Advertisement

ಆಯೋಜನೆ ಕಷ್ಟಸಾಧ್ಯ
ಪಿಲಿಕುಳದ ಗುತ್ತಿನಮನೆ ಮುಂಭಾಗದಲ್ಲಿರುವ ಕರೆಯಲ್ಲಿ 5 ವರ್ಷಗಳಿಂದ ಕಂಬಳ ನಡೆಸದೆ ಇರುವುದರಿಂದ ಹೂಳು ತುಂಬಿದೆ. ಗಿಡ-ಗಂಟಿ ಬೆಳೆದಿವೆ. ಕರೆ ಸಂಪೂರ್ಣವಾಗಿ ಪಾಳುಬಿದ್ದಿದೆ. ಕಂಬಳ ಕರೆಯ ಮರುನಿರ್ಮಾಣ, ನೀರು ಹಾಗೂ ಇತರ ಸೌಲಭ್ಯಗಳನ್ನು ವ್ಯವಸ್ಥಿಗೊಳಿಸಬೇಕು. ಇದಕ್ಕೆ ಕಡಿಮೆ ಎಂದರೆ 15ರಿಂದ 20 ದಿನಗಳು ಅಗತ್ಯವಿದೆ. ಸಿದ್ಧತೆಗಳಿಗೆ ಕನಿಷ್ಠ 20 ಲಕ್ಷ ರೂ.ಅಗತ್ಯವಿದೆ. ಇತರ ಖರ್ಚುವೆಚ್ಚ ಸುಮಾರು 20 ಲಕ್ಷ ರೂ.ಅಗಲಿದ್ದು, ಒಟ್ಟು ಕಂಬಳ ಆಯೋಜನೆಗೆ ಕನಿಷ್ಠ 40 ಲಕ್ಷ ರೂ.ಅನುದಾನ ಅಗತ್ಯವಿದೆ. ಇದಲ್ಲದೆ ಮಾರ್ಚ್‌ನಲ್ಲಿ ತೀವ್ರ ಬಿಸಿಲು ಇದ್ದು, ಕೋಣಗಳನ್ನು ತರಲು ಯಜಮಾನರು ಹಿಂದೇಟು ಹಾಕುವ ಸಾಧ್ಯತೆಗಳಿವೆ. ಇದೆಲ್ಲವನ್ನು ಪರಿಗಣನೆಗೆ ತೆಗೆದುಕೊಂಡರೆ ಈ ಬಾರಿಯೂ ಪಿಲಿಕುಳದಲ್ಲಿ ಕಂಬಳ ನಡೆಯುವ ಸಾಧ್ಯತೆ ಇಲ್ಲ.

ಸಿದ್ಧತೆ ಅಗತ್ಯವಿದೆ
ಪಿಲಿಕುಳದಲ್ಲಿ ಕಂಬಳ ಆಯೋಜನೆ ಕುರಿತು ಈ ವರೆಗೆ ಸರಕಾರದಿಂದ ಮಾಹಿತಿ ಇಲ್ಲ. 5 ವರ್ಷಗಳಿಂದ ಕಂಬಳ ನಡೆದಿಲ್ಲ. ಕರೆಯು ಕಲ್ಲು ಮುಳ್ಳು ತುಂಬಿ ಕೋಣಗಳು ಕಾಲಿಡಲೂ ಆಗದಂತಹ ಪರಿಸ್ಥಿತಿ ಇದೆ. ಇದನ್ನು ಕಂಬಳಕ್ಕೆ ಸಿದ್ಧಪಡಿಸಲು ಸಾಕಷ್ಟು ಕಾಲಾವಕಾಶ ಅಗತ್ಯವಿದ್ದು, ಈ ಬಾರಿ ಅದು ಕಷ್ಟಸಾಧ್ಯ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್‌. ಶೆಟ್ಟಿ ತಿಳಿಸಿದ್ದಾರೆ.

ಕಂಬಳಕ್ಕೆ ಸರಕಾರದ ನಿರ್ಲಕ್ಷ್ಯ
ಕಂಬಳದ ಕೋಣಗಳನ್ನು ಅತಿವೇಗದಲ್ಲಿ ಓಡಿಸುವ ಓಟಗಾರ ಶ್ರೀನಿವಾಸ ಗೌಡ ಅವರ ಕ್ರೀಡಾ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ ಮೂಲಕ ಕರಾವಳಿಯ ಜಾನಪದ ಕ್ರೀಡೆ ಕಂಬಳ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ್ಯತ್ಲೆಟಿಕ್‌ ರೂಪದಲ್ಲೂ ಗಮನ ಸೆಳೆಯುತ್ತಿದೆ. ಸರಕಾರವೇ ಸುಪ್ರೀಂಕೋರ್ಟ್‌ಗೆ ಕಂಬಳವು ತುಳುನಾಡಿನ ಜಾನಪದ ಕ್ರೀಡೆ ಎಂದು ಮನವರಿಕೆ ಮಾಡಿದೆ. ಪಿಲಿಕುಳದಲ್ಲಿ ಸರಕಾರದ ವತಿಯಿಂದಲೇ ಕಂಬಳ ಆಯೋಜಿಸಿದರೆ ಇದಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬಬಹುದು. ಆದರೆ ಕಡೆಗಣಿಸಿರುವುದು ಕಂಬಳ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಸರಕಾರದ ನಿರ್ದೇಶನ ಬಂದಿಲ್ಲ
ಪಿಲಿಕುಳದಲ್ಲಿ ಕಂಬಳ ಆಯೋಜನೆ ಕುರಿತು ಸರಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಈ ಹಿಂದೆಯೇ ಕಳುಹಿಸಲಾಗಿದೆ. ಸರಕಾರದಿಂದ ಈವರೆಗೆ ಈ ಬಗ್ಗೆ ಯಾವುದೇ ನಿರ್ದೇಶನ ಬಂದಿಲ್ಲ. ನಿರ್ದೇಶನ ಬಂದ ಬಳಿಕ ಈ ಕುರಿತಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
 - ಸಿಂಧೂ ಬಿ. ರೂಪೇಶ್‌, ಜಿಲ್ಲಾಧಿಕಾರಿ

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next