Advertisement

ಗೋಹತ್ಯೆ ನಿಷೇಧಕ್ಕೆ ಪಿಐಎಲ್‌ ಅಡ್ಡಗಾಲು

12:47 AM Nov 26, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿ ಒಂದು ವರ್ಷ ಕಳೆದಿದ್ದು, ಇದರ ಪರಿಣಾಮಕಾರಿ ಜಾರಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೇ ಅಡ್ಡಗಾಲಾಗಿವೆ!

Advertisement

ಹೌದು, ಈ ಕಾಯ್ದೆಗೆ ತಡೆಯಾಜ್ಞೆ ನೀಡಬೇಕು ಎಂದು ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಏಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಇದರಿಂದಾಗಿ ಕಾಯ್ದೆಯನ್ನು ಸರಿಯಾಗಿ ಜಾರಿ ಮಾಡಲು ಆಗುತ್ತಿಲ್ಲ ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಕಾಯ್ದೆ ಜಾರಿಯಾದ ಮೇಲೆ ಒಟ್ಟು 413 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಕ್ರಮವಾಗಿ ಸಾಗಾಟ, ವಧೆಗಾಗಿ ಕೊಂಡೊಯ್ಯಲಾಗುತ್ತಿದ್ದ 10 ಸಾವಿರ ಗೋವುಗಳನ್ನು ರಕ್ಷಿಸಲಾಗಿದೆ.

ಈ ಕಾಯ್ದೆಯಂತೆ ಕೋಲಾರ ಜಿಲ್ಲೆಯಲ್ಲಿ ಅತೀ ಹೆಚ್ಚು 65 ಪ್ರಕರಣಗಳು ದಾಖಲಾಗಿವೆ. ಎರಡನೇ ಸ್ಥಾನದಲ್ಲಿ ಹಾಸನ ಜಿಲ್ಲೆ ಇದ್ದು, 43 ಪ್ರಕರಣ ದಾಖಲಾಗಿದ್ದರೆ, ಉತ್ತರ ಕನ್ನಡದಲ್ಲಿ 41, ದಕ್ಷಿಣ ಕನ್ನಡದಲ್ಲಿ 40 ಪ್ರಕರಣಗಳು ದಾಖಲಾಗಿವೆ.

8 ಜಿಲ್ಲೆಗಳಲ್ಲಿ  ಶೂನ್ಯ ಪ್ರಕರಣ:

Advertisement

ಧಾರವಾಡ, ರಾಯಚೂರು, ಯಾದಗಿರಿ, ಬೀದರ್‌, ರಾಮನಗರ, ತುಮಕೂರು, ದಾವಣ ಗೆರೆ, ವಿಜಯಪುರ ಜಿಲ್ಲೆಗಳಲ್ಲಿ ಅಕ್ರಮ ಗೋ ಸಾಗಣೆ, ಗೋವಧೆ ಪ್ರಕರಣ ದಾಖಲಾಗಿಲ್ಲ.

ಮೈಸೂರು, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದ್ದು, ಬಳ್ಳಾರಿಯಲ್ಲಿ 3, ಕೊಪ್ಪಳದಲ್ಲಿ 4, ಚಿಕ್ಕಬಳ್ಳಾಪುರದಲ್ಲಿ 5, ಹಾವೇರಿ, ಬೆಳಗಾವಿ, ಶಿವಮೊಗ್ಗದಲ್ಲಿ ತಲಾ 6 ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು ಗ್ರಾಮಾಂತರ, ಚಾಮರಾಜನಗರಗಳಲ್ಲಿ ತಲಾ 8, ಬೆಂಗಳೂರು ನಗರ, ಚಿತ್ರ ದುರ್ಗಗಳಲ್ಲಿ ತಲಾ 12, ಮಂಡ್ಯ 14, ಕಲಬುರ್ಗಿ 16, ಉಡುಪಿ 17, ಕೊಡಗು 18, ಚಿಕ್ಕಮಗಳೂರಿನಲ್ಲಿ 32 ಪ್ರಕರಣ ದಾಖಲಾಗಿವೆ.

ಪೊಲೀಸರು ಸ್ಪಂದಿಸುತ್ತಿಲ್ಲ :

ಗೋರಕ್ಷಕರು ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ತಡೆದು ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದರೂ ಪೊಲೀಸ್‌ ಅಧಿಕಾರಿಗಳು ತತ್‌ಕ್ಷಣ ಸ್ಪಂದಿಸದೆ ವಿಳಂಬ ಮಾಡುತ್ತಾರೆ ಎಂದು ಗೋರಕ್ಷಕರು ಆರೋಪಿಸುತ್ತಾರೆ. ಆದರೆ ಪಶುಸಂಗೋಪನೆ ಸಚಿವರು, ಪೊಲೀಸರ ಸಹಕಾರದಿಂದ ಹೆಚ್ಚಿನ ಪ್ರಕರಣ ದಾಖಲಿಸಲು ಸಾಧ್ಯವಾಗಿದೆ ಎಂದಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ 10 ಸಾವಿರ ಗೋವುಗಳ ರಕ್ಷಣೆ ಮಾಡಲಾಗಿದೆ. ಹೈಕೋರ್ಟ್‌ನಲ್ಲಿ ಪಿಐ ಎಲ್‌ ಹಾಕಿರುವುದು ಪ್ರಕರಣ ದಾಖಲಿಸಲು ಅಡ್ಡಿಯಾಗುತ್ತಿದೆ. ಪೊಲೀಸರ ಸಹಕಾರದಿಂದ ಹೆಚ್ಚಿನ ಪ್ರಕರಣ ದಾಖಲಿಸಲು ಸಾಧ್ಯವಾಗಿದೆ.– ಪ್ರಭು ಚೌವಾಣ್‌, ಪಶು ಸಂಗೋಪನ ಸಚಿವ

ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯ ಪ್ರಕಾರವೇ ಪ್ರಕರಣ ದಾಖಲಿಸಲಾಗುತ್ತಿದೆ. ಅಕ್ರಮ ಗೋ ಸಾಗಾಣಿಕೆ ತಡೆಯಲು ನಮ್ಮ ಅಧಿಕಾರಿಗಳು ಈಗ ವಿಶೇಷ ಸ್ಪಂದನೆ ತೋರುತ್ತಿದ್ದಾರೆ. ನಮ್ಮ ಇಲಾಖೆ ಅಧಿಕಾರಿಗಳಿಗೆ ಗೋ ರಕ್ಷಣೆಯಲ್ಲಿ  ಭಾಗವಹಿಸುವಂತೆ ಸೂಚಿಸಿದ್ದೇನೆ.– ಆರಗ ಜ್ಞಾನೇಂದ್ರ, ಗೃಹ ಸಚಿವ

 

- ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next