ಬೆಂಗಳೂರು: ಸ್ವತಃ ಬಲವಂತದ ಮತಾಂತರ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬರು ರಾಜ್ಯ ಸರಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರಾಪಾಡಿ ನಿವಾಸಿ ವಿಕ್ಟರ್ ಮಾರ್ಟಿಸ್ ಎಂಬವರು ಮತಾಂತರ ನಿಷೇಧ ಕಾಯ್ದೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯು ಮುಖ್ಯ ನ್ಯಾ| ಪಿ.ಬಿ. ವರಾಲೆ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ರಾಜ್ಯದಲ್ಲಿ ಮತಾಂತರ ನಿಷೇಧಿಸಲು ರಾಜ್ಯ ಸರಕಾರ “ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣ ಕಾಯ್ದೆ-2020′ ಅನ್ನು ಜಾರಿಗೊಳಿಸಿದೆ. ಇದು ಸಂವಿಧಾನ ವಿರೋಧಿಯಾಗಿದ್ದು, ನಿರ್ದಿಷ್ಟವಾಗಿ ಅನ್ಯ ಧರ್ಮವನ್ನು ಗುರಿಯಾಗಿರಿಸಿಕೊಂಡು ಕಾಯ್ದೆಯನ್ನು ರೂಪಿಸಲಾಗಿದೆ. ಇದರಿಂದ ಹಲವು ಧರ್ಮದವರಿಗೆ ತೊಂದರೆ ಆಗಲಿದೆ. ಆದ್ದರಿಂದ ಕಾಯ್ದೆಯನ್ನು ಕಾನೂನು ಬಾಹಿರ ಎಂದು ಘೋಷಿಸಬೇಕು ಮತ್ತು ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ಕೆ. ನಾವದಗಿ, ಮತಾಂತರ ನಿಷೇಧ ಕಾಯ್ದೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ದಾಖಲಿಸಿರುವ ಅರ್ಜಿದಾರರರ ವಿರುದ್ಧವೇ ಬಲವಂತದ ಮತಾಂತರ ಆರೋಪದಲ್ಲಿ 2 ಕ್ರಿಮಿನಲ್ ಪ್ರಕರಣಗಳಿವೆ. ಸ್ವತಃ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಅರ್ಜಿಯನ್ನು ನ್ಯಾಯಾಲಯ ಯಾವುದೇ ಕಾರಣಕ್ಕೂ ಪರಿಗಣಿಸಬಾರದು ಎಂದು ಮನವಿ ಮಾಡಿದರು.
Related Articles
ಅಡ್ವೋಕೇಟ್ ಜನರಲ್ ಅವರ ವಾದವನ್ನು ಪರಿಗಣಿಸಿದ ನ್ಯಾಯಪೀಠ, ಆರೋಪ ಹೊತ್ತಿರುವ ವ್ಯಕ್ತಿ ಸಲ್ಲಿಸಿರುವ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸಲಾಗದು. ಹಾಗಾಗಿ ಒಂದು ವಾರದಲ್ಲಿ ಅರ್ಜಿದಾರರು ಈ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ನ.28ಕ್ಕೆ ಮುಂದೂಡಿತು.