Advertisement
ಈ ಪಕ್ಷಿಯ ರೆಕ್ಕೆಯಲ್ಲಿ ಕಪ್ಪು ಬಿಳಿ ಬಣ್ಣದಿಂದ ಕೂಡಿರುತ್ತದೆ. ಇದು ಕೆಲವೊಮ್ಮೆ ತನ್ನ ಉದ್ದ ಕಾಲನ್ನು ಮಡಿಚಿ ಮೊಳ ಕಾಲಿನ ಮೇಲೆ ಕುಳಿತು ಕೊಳ್ಳುತ್ತದೆ. ತಲೆಯಿಂದ ಆರಂಭವಾಗಿ ಕುತ್ತಿಗೆ, ಅದರ ಹಿಂಭಾಗದ ತನಕ ಕಪ್ಪುಬಣ್ಣದಿಂದ ಕೂಡಿರುತ್ತದೆ. ಇದರ ಪುಕ್ಕದ ತುದಿಯ ಗರಿ ಸಹ ಕಪ್ಪಾಗಿದೆ. ಇವು ಗುಂಪಾಗಿ ಇಲ್ಲವೇ ಏಕಾಂಗಿಯಾಗಿ ಸಹ ಹಾರುತ್ತವೆ. ಗಾಬರಿಯಾದಾಗ ಭಯದಿಂದ ವಿಚಿತ್ರ ಕೀರಲು ದನಿಯಲ್ಲಿ ಕೂಗುತ್ತಾ ಹಾರುವುದು ಇದರ ಲಕ್ಷಣ. ಇದರ ಚುಂಚು, ಕಾಲು ಕೆಂಪು ಬಣ್ಣದಿಂದ ಕೂಡಿದೆ. ರೆಕ್ಕೆಯು ಕೂಡ ಕಪ್ಪು ಬಣ್ಣದ್ದೇ. ಸಾಮಾನ್ಯವಾಗಿ ನೀರ ಆಶ್ರಯದಲ್ಲಿರುವ ಎಲ್ಲಾ ಹಕ್ಕಿಗಳ ಚುಂಚು ಸ್ವಲ್ಪ ಕೆಳಮುಖವಾಗಿ ಬಾಗಿರುತ್ತದೆ ಇಲ್ಲವೇ ನೇರವಾಗಿರುತ್ತದೆ. ಆದರೆ ವಾರೆ ಕೊಕ್ಕ ಹಕ್ಕಿಯ ಚುಂಚು ಮೇಲ್ಮುಖವಾಗಿ ಬಾಗಿರುತ್ತದೆ. ಇದು ನೀರಿನಲ್ಲಿ ಇಳಿದು, ಇದರ ಸಹಾಯದಿಂದ ಅಡಿಯಲ್ಲಿರುವ ಕೆಸರನ್ನು ಕುಕ್ಕಿ, ಅಲ್ಲಿರುವ ಹುಳ ನೀರಿನ ಕ್ರಿಮಿ, ಇಲ್ಲವೇ ಅದರ ಮೊಟ್ಟೆ ಅಥವಾ ನೀರು ಕ್ರಿಮಿಗಳನ್ನು ತಿಂದು ಹಾಕುತ್ತದೆ. ಇದರ ಕೊಕ್ಕು ಮೇಲ್ಮುಖವಾಗಿ ಬಾಗಿರುವುದರಿಂದ ಇದಕ್ಕೆ ಅನ್ವರ್ಥವಾಗಿ ವಾರೆ ಕೊಕ್ಕ ಎಂಬ ಹೆಸರು ಬಂದಿದೆ.
ಈ ಪಕ್ಷಿ ಭಾರತ ಪಾಕಿಸ್ತಾನ, ಶ್ರೀಲಂಕಾಗಳಲ್ಲಿ ಕಂಡುಬರುತ್ತವೆ. ಬಾಂಗ್ಲಾದೇಶ, ಬರ್ಮಾ, ಆಗ್ನೇಯ
ಏಷಿಯಾಗಳಲ್ಲಿ ಇವು ಇಲ್ಲ. ಉದ್ದುದ್ದ ಕಾಲಿರುವುದರಿಂದ ಕೆಸರಿನ ಪ್ರದೇಶದಲ್ಲಿ ಸುಲಭವಾಗಿ ಓಡಾಡುತ್ತವೆ. ಕೆಲವೊಮ್ಮ ನೀರಿನಲ್ಲಿ ಈಜುವುದೂ ಉಂಟು. ಇದರ ಕಾಲಿನಲ್ಲಿರುವ ಅರೆ ಜಲಪಾದ ಸಾಮಾನ್ಯ ಆಳದ ನೀರಿನಲ್ಲಿ ಈಜಲು ಸಹಕಾರಿ. ಡೊಂಕಾದ ಕೊಕ್ಕಿನ ಸಹಾಯದಿಂದ ನೀರಿನ ಕೆಸರನ್ನು ಜರಡಿಯಾಡಿದಂತೆ ಮಾಡುತ್ತದೆ. ಚಿಕ್ಕ ಪುಟ್ಟ ಮೀನು, ಶಂಕದ ಹುಳು, ಕಪ್ಪೆ ಚಿಪ್ಪನ್ನು ಸಹ ತಿನ್ನುತ್ತದೆ.
Related Articles
Advertisement
ನೋಡಲು ಸುಂದರವಾಗಿರುವ ಇದೊಂದು ಪುಟ್ಟ ನಿರುಪದ್ರವಿ ಜಲ ಹಕ್ಕಿ. ಅದರಲ್ಲೂ ಕೆಸರಿನಲ್ಲಿ ಓಡಾಡುತ್ತ -ಅಲ್ಲಿರುವ ಹುಳ ಕ್ರಿಮಿಗಳನ್ನು ತಿಂದು ಜಲ ಮಾಲಿನ್ಯವನ್ನು ಪರೋಕ್ಷವಾಗಿ ಕಡಿಮೆ ಮಾಡುತ್ತದೆ. ಇದರ ದೇಹದಲ್ಲಿರುವ ಮಿಲೆನಿನ್ ದ್ರವ ಬಿಳಿ ,ಹಳದಿ, ಕಪ್ಪು ಇಲ್ಲವೇ ಕೆಂಪುಬಣ್ಣ, ಇದರ ಗರಿಗಳಲ್ಲಿ ಮೂಡಲು ಕಾರಣವಾಗಿದೆ.