Advertisement

ಎಲಿಮಲೆ ಶಾಲೆ ಗೋಡೆಗಳ ಮೇಲೆ ಚಿತ್ರ-ಚಿತ್ತಾರ

02:42 PM Nov 28, 2018 | |

ಸುಳ್ಯ : ಚಿತ್ರಕಲೆಗೂ ಮಗುವಿನ ಮನಸ್ಸಿಗೂ ಒಂದಕ್ಕೊಂದು ಸಂಬಂಧವಿದೆ. ಅದರ ಭಾಗ ಎನ್ನುವಂತೆ ಶಾಲೆಯ ಗೋಡೆಗಳಲ್ಲಿ ಚಿತ್ರ ಬಿಡಿಸುವ ಮೂಲಕ ಮಕ್ಕಳ ಮನಸ್ಸನ್ನು ಕ್ರಿಯಾಶೀಲ ನೆಲೆಯಲ್ಲಿ ಅರಳಿಸುವ ಪ್ರಯತ್ನವೊಂದು ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

Advertisement

ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ಸರಕಾರಿ ಪ್ರೌಢಶಾಲೆ ಎಲಿಮಲೆ ಸುಳ್ಯ ಮತ್ತು ಹಳೆ ವಿದ್ಯಾರ್ಥಿ ಸಂಘ ಸರಕಾರಿ ಪ್ರೌಢಶಾಲೆ ಎಲಿಮಲೆ ಇವರ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರಿಗಾಗಿ ನಡೆದ ಮೂರು ದಿನಗಳ ಜಿಲ್ಲಾಮಟ್ಟದ ಚಿತ್ರಕಲಾ ಶಿಬಿರದಲ್ಲಿ ಇಂತಹ ವಿಶೇಷ ಪ್ರಯತ್ನವೊಂದು ಅಭಿವ್ಯಕ್ತಗೊಂಡಿದೆ.

ಚಿತ್ರಕಲಾ ಶಿಕ್ಷಕರ ವಿಭಿನ್ನ ಯೋಚನೆ ಹೊಸ ಕಲಾ ಕ್ರಾಂತಿಯನ್ನು ಸೃಷ್ಟಿಸಿದೆ. ನಶಿಸಿ ಹೋಗುತ್ತಿರುವ ಜನಪದ ಕಲೆಗಳನ್ನು ಗೋಡೆ ಮೇಲೆ ಚಿತ್ರಿಸುವ ಕಲೆಯೇ ವಿದ್ಯೆಯ ಮೂಲ ಎನ್ನುವುದಿಲ್ಲಿ ಸಾಕಾರಗೊಂಡಿದೆ. ನೀತಿ ಪಾಠ, ಗತಕಾಲದ ವೈಭವ, ಬೇರೆ-ಬೇರೆ ಪ್ರಾಂತ್ಯದ ಜನಪದ ಶೈಲಿಯನ್ನು ಶಾಲೆಯ ಗೋಡೆಯ ಮೇಲೆ ಚಿತ್ರಿಸಿ ಹಳೆಯ ಕಾಲದ ಗತ ವೈಭವನ್ನು ಮಕ್ಕಳಿಗೆ, ಊರವರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. 

ಬಂಗಾಳದ ಜನಪ್ರಿಯ ಕಲೆಯನ್ನಾಧರಿಸಿದ ಚಿತ್ರ, ದ.ಕ. ಜಿಲ್ಲೆಯ ನಾಗಾರಾಧನೆ, ಶಾಂತಿ ಹಾಗೂ ಜ್ಞಾನೋದಯದ ಪ್ರತೀಕವಾದ ಬುದ್ಧ, ಪುರಿ ಜಗನ್ನಾಥ ಶೈಲಿ, ಪುರಾತನ ಕಾಲದ ಜನಪದ ಶೈಲಿ, ಗುರುಭಕ್ತಿಯನ್ನು ಬಿಂಬಿಸುವ ಏಕಲವ್ಯ, ದೈವರಾಧನೆ, ಉತ್ತರ ಕರ್ನಾಟಕದ ಸೂತ್ರದ ಬೊಂಬೆ, ತೆಂಕು ಹಾಗು ಬಡಗುತಿಟ್ಟಿನ ಯಕ್ಷಗಾನದ ಚಿತ್ರಗಳು, ದರ್ಪಣ ಸುಂದರಿ, ವಾಮನ ಬಲಿಯೇಂದ್ರ, ರಾಜಸ್ಥಾನದಲ್ಲಿ ಅಳಿವಿನಂಚಿನಲ್ಲಿರುವ ಬೊಂಬೆಯಾಟ, ಆಂಧ್ರಪ್ರದೇಶದ ಒಂದು ಹಳ್ಳಿಯಲ್ಲಿ ಬಣ್ಣ ತಯಾರಿಸಿ ಬಟ್ಟೆಯ ಮೇಲೆ ಬಿಡಿಸುತ್ತಿದ್ದ ಕಲಂಕಾರಿ ಚಿತ್ರ – ಹೀಗೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳು ಮೂಡಿಬಂದಿವೆ.

ಕಲಿಕೆಗೆ ಪೂರಕ
ಮೂರು ದಿನಗಳ ಕಾಲ ಸುಮಾರು 12 ಚಿತ್ರಕಾರರು ಗೋಡೆಗಳಲ್ಲಿ ಸಾಂಪ್ರದಾಯಿಕ ಹಾಗೂ ಇನ್ನಿತರ ಚಿತ್ರಗಳನ್ನು ಬಿಡಿಸಿದ್ದಾರೆ. ಈ ಮೂಲಕ ಶಾಲಾ ಸೌಂದರ್ಯ ಹಾಗೂ ಕಲಿಕಾ ವಾತಾವರಣಕ್ಕೆ ಪೂರಕವಾದ ಸನ್ನಿವೇಶ ಇಲ್ಲಿ ಮೂಡಿಬಂದಿದೆ. 
-ಚಂದ್ರಶೇಖರ ಪೇರಾಲು
ಮುಖ್ಯ ಶಿಕ್ಷಕ, ಎಲಿಮಲೆ ಶಾಲೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next