ಲಡಾಖ್/ನವದೆಹಲಿ: ಎರಡು ವರ್ಷಗಳಿಂದ ಪೂರ್ವ ಲಡಾಖ್‌ನ ಗೋಗ್ರಾ-ಹಾಟ್ ಸ್ಪ್ರಿಂಗ್ಸ್‌ನಲ್ಲಿ ತಳವೂರಿದ್ದ ಚೀನ ಸೇನೆ ಅಲ್ಲಿಂದ ವಾಪಸಾಗಿರುವುದು ಖಚಿತವಾಗಿದೆ.
ಸೋಮವಾರ (ಸೆ.12) ಮುಕ್ತಾಯವಾದ ಸೇನಾ ವಾಪಸಾತಿ ಬಳಿಕ ಈ ಅಂಶ ದೃಢಪಟ್ಟಿದೆ. ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯ ಮಾನವ ರಹಿತ ಪ್ರದೇಶದಿಂದ ಮೂರು ಕಿಮೀ ವ್ಯಾಪ್ತಿಯಷ್ಟು ಹಿಂದಕ್ಕೆ ಡ್ರ್ಯಾಗನ್ ಸೇನೆ ಹಿಂದಕ್ಕೆ ಸರಿದಿದೆ.
ಈ ಬಗ್ಗೆ ಅಮೆರಿಕದ ಕೊಲೆರಾಡೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ ಮ್ಯಾಕ್ಸರ್ ಟೆಕ್ನಾಲಜೀಸ್ ಎರಡು ದಿನಗಳ ಹಿಂದೆ ತೆಗೆದ ಫೋಟೋಗಳಿಂದ ದೃಢಪಟ್ಟಿದೆ.
ಆ.12ರಂದು ತೆಗೆಯಲಾಗಿದ್ದ ಫೋಟೋಗಳಲ್ಲಿ ಚೀನ ಸೇನೆ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಯಾದ್ಯಂತ ಸೇನಾ ನೆಲೆಗಳನ್ನು ನಿರ್ಮಿಸಿದ್ದು ದೃಢಪಟ್ಟಿತ್ತು. ಆ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ ಭಾರತದ ಸೇನೆ ಗಸ್ತು ತಿರುಗುತ್ತಿತ್ತು. ಸೆ.12ರಂದು 2 ಸೇನೆಗಳು ಹಾಲಿ ಇದ್ದ ಪ್ರದೇಶದಿಂದ ವಾಪಸಾಗಿದ್ದವು. ಸೆ.15ರಂದು ಮ್ಯಾಕ್ಸರ್ ಟೆಕ್ನಾಲಜೀಸ್ ತೆಗೆದಿದ್ದ ಫೋಟೋಗಳಲ್ಲಿ ಕಂಡು ಬಂದಿರುವಂತೆ 2020ರ ಬಳಿಕ ಚೀನ ಸೇನೆ ತಾನು ನಿರ್ಮಿಸಿದ್ದ ಎಲ್ಲಾ ತಾತ್ಕಾಲಿಕ ಕಟ್ಟಡಗಳನ್ನು ಮತ್ತು ಅವುಗಳ ಅವಶೇಷಗಳನ್ನೂ ತೆರವುಗೊಳಿಸಿದೆ.
ಲಡಾಖ್‌ನ ಚುಶುಲ್ ಕ್ಷೇತ್ರದ ಜನಪ್ರತಿನಿಧಿ ಕಾನ್‌ಚಾರ್ ಸ್ಟಾನ್‌ಜಿನ್ ಅವರು ಹೇಳುವ ಪ್ರಕಾರ ಪಟ್ರೋಲಿಂಗ್ ಪಾಯಿಂಟ್ 15ರಿಂದ ಸೇನೆ ವಾಪಸ್ ಪಡೆದಿರುವುದರ ಜತೆಗೆ 50 ವರ್ಷಗಳಿಂದ ಬಂದೋಬಸ್ತ್ ನಲ್ಲಿ ಇದ್ದ ಪಟ್ರೋಲಿಂಗ್ ಪಾಯಿಂಟ್ 16ರಿಂದಲೂ ಕೂಡ ಸೇನೆ ವಾಪಸಾಗಿದೆ. ಇದು ನಿಜಕ್ಕೂ ಕೇಂದ್ರ ಸರ್ಕಾರಕ್ಕೆ ಹಿನ್ನಡೆ ಎಂದು ಪ್ರತಿಪಾದಿಸಿದ್ದಾರೆ. ಈ ಪ್ರದೇಶವನ್ನು ಸ್ಥಳೀಯರು ಬಳಕೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಜು.17ರಂದು 2 ದೇಶಗಳ ಸೇನಾಧಿಕಾರಿಗಳ ನಡುವೆ ನಡೆದಿದ್ದ 17ನೇ ಸುತ್ತಿನ ಮಾತುಕತೆ ಬಳಿಕ ಗೋಗ್ರಾ- ಹಾಟ್‌ಸ್ಪ್ರಿಂಗ್‌ನಿಂದ 2 ದೇಶಗಳ ಸೇನೆ ವಾಪಸಾಗಿದೆ.
ಎಲ್ಲಿ ಬಾಕಿ ಇದೆ?
ಗೋಗ್ರಾದ ಉತ್ತರ ಭಾಗದಲ್ಲಿ ಇರುವ ದೆಸ್ಪಾಂಗ್ ತಪ್ಪಲು ಪ್ರದೇಶದಲ್ಲಿ ಚೀನದ ಸೇನೆ ಇನ್ನೂ ದೇಶದ ಸೇನಾ ಪಡೆಗಳಿಗೆ ಗಸ್ತು ತಿರುಗಲು ಅಡ್ಡಿ ಉಂಟು ಮಾಡುತ್ತವೇ ಇದೆ. ಈ ಪ್ರದೇಶಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ಫಲಪ್ರದವಾಗಿಲ್ಲ.