ಛತ್ತೀಸ್ ಗಢ; ಇಲ್ಲಿನ ಬಸ್ತಾರ್ ಜಿಲ್ಲೆಯಲ್ಲಿ ನಕ್ಸಲೀಯರು ನಡೆಸಿದ ಗುಂಡಿನ ದಾಳಿಯಲ್ಲಿ 22 ಯೋಧರು ಹುತಾತ್ಮರಾದ ಘಟನೆ ನಡೆದ ಸಂದರ್ಭದಲ್ಲಿ ನಕ್ಸಲೀಯರಿಂದ ಅಪಹರಿಸಲ್ಪಟ್ಟಿದ್ದ ಕೋಬ್ರಾ ಕಮಾಂಡೋ ಫೋಟೋವನ್ನು ಬಿಡುಗಡೆ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಾಗಿ ವರದಿ ತಿಳಿಸಿದೆ.
ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರು ಸಣ್ಣ ಜೋಪಡಿಯಲ್ಲಿ ಒಬ್ಬರೇ ಕುಳಿತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಕ್ಸಲೀಯರು ಬಿಡುಗಡೆಗೊಳಿಸಿದ್ದಾರೆನ್ನಲಾದ ಫೋಟೋದ ಬಗ್ಗೆ ಬಸ್ತಾರ್ ವಲಯದ ಇನ್ಸ್ ಪೆಕ್ಟರ್ ಜನರಲ್ ಪೊಲೀಸ್ ಸುಂದರ್ ರಾಜ್ ಪಿ ಅವರು ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದು, ನಾವು ಪ್ರತಿಯೊಂದು ಆಯಾಮದ ಮೂಲಕ ಪರಿಶೀಲನೆ ನಡೆಸುತ್ತಿದ್ದೇವೆ. ಅಲ್ಲದೇ ಯೋಧನನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಂಗಳವಾರ ನಿಷೇಧಿತ ಸಿಪಿಐ ಮಾವೋವಾದಿ ಸಂಘಟನೆ ಹಿಂದಿಯಲ್ಲಿ ಎರಡು ಪುಟಗಳ ಪತ್ರ ಬಿಡುಗಡೆ ಮಾಡಿ, ಕೋಬ್ರಾ ಕಮಾಂಡೋ ನಮ್ಮ ವಶದಲ್ಲಿದ್ದು, ಬಿಡುಗಡೆ ಮಾಡಲು ಸರ್ಕಾರ ಮಧ್ಯಸ್ಥಿಕೆದಾರರನ್ನು ಕಳುಹಿಸುವಂತೆ ಷರತ್ತು ವಿಧಿಸಿತ್ತು ಎಂದು ವರದಿ ವಿವರಿಸಿದೆ.
ಮಾವೋವಾದಿಗಳ ಬೇಡಿಕೆಗೆ ಛತ್ತೀಸ್ ಗಢ ಸರ್ಕಾರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಕ್ಸಲೀಯರು ಬಿಡುಗಡೆಗೊಳಿಸಿದ್ದಾರೆನ್ನಲಾದ ಪತ್ರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರಾಕೇಶ್ವರ್ ಸಿಂಗ್ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಸ್ಥಳೀಯ ಗ್ರಾಮಸ್ಥರಿಗೆ, ಪತ್ರಕರ್ತರಿಗೆ ಮತ್ತು ಸ್ಥಳೀಯ ಸಾಮಾಜಿಕ ಸಂಘಟನೆಗಳಿಗೆ ಶೋಧ ಕಾರ್ಯದಲ್ಲಿ ತೊಡಗಲು ಗುತ್ತಿಗೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.