ಉದಯವಾಣಿ ಸಮಾಚಾರ
ನಿಪ್ಪಾಣಿ: ಪಾಠದ ಜೊತೆಗೆ ಆಟದಲ್ಲಿಯೂ ವಿದ್ಯಾರ್ಥಿಗಳು ಪಾಲ್ಗೊಂಡಲ್ಲಿ ಆರೋಗ್ಯವಂತರಾಗಿದ್ದು ಮಾನಸಿಕ ದೃಢತೆ
ಹೆಚ್ಚಾಗುತ್ತದೆ, ಆತ್ಮವಿಶ್ವಾಸ ವೃದ್ಧಿಸುತ್ತದೆ. ಮುಂದೆ ಸರ್ಕಾರಿ ಕೋಟಾದಡಿ ಉದ್ಯೋಗವನ್ನೂ ಪಡೆಯಬಹುದು ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.
2024-25ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಎಸ್‌ಎಂ ಜಿ.ಐ. ಬಾಗೇವಾಡಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು 83 ಪ್ರಶಸ್ತಿ ಪಡೆಯುವ ಮೂಲಕ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸತ್ಕರಿಸಿ ಅವರು ಮಾತನಾಡಿದರು.
ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಯಶಸ್ಸಿನ ಶಿಖರವನ್ನೇರಲು ಕಠಿಣ ಪರಿಶ್ರಮದೊಂದಿಗೆ ವಿದ್ಯಾಭ್ಯಾಸ ಮಾಡಲೇಬೇಕಾದ ಅನಿವಾರ್ಯತೆಯಿದೆ. ಆದರೆ ಆರೋಗ್ಯವೂ ಅಷ್ಟೆ ಮಹತ್ವದ್ದು. ಆದ್ದರಿಂದ ವಿದ್ಯಾರ್ಥಿಗಳು ಆಟಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ. ನಿಂಗಪ್ಪ ಮಾದಣ್ಣವರ ಮಾತನಾಡಿ, ತಾಲೂಕು ಮಟ್ಟದ ವಿವಿಧ ಕ್ರೀಡೆಗಳಲ್ಲಿ ವೈಯಕ್ತಿಕವಾಗಿ 11 ವಿದ್ಯಾರ್ಥಿಗಳು ಪ್ರಥಮ, 15 ವಿದ್ಯಾರ್ಥಿಗಳು ದ್ವಿತೀಯ ಹಾಗೂ 4 ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದ್ದಾರೆ. ಗುಂಪು ಕ್ರೀಡೆ ವಿಭಾಗಗಳಲ್ಲಿ ಬಾಲಕರ ಮತ್ತು ಬಾಲಕಿಯರ 4×100 ರಿಲೆ, ಬಾಲಕಿಯರ 4×200 ರಿಲೆ, ಬಾಲಕರ ಹಾಗೂ ಬಾಲಕಿಯರ ವಾಲಿಬಾಲ್, ಬಾಲಕರ ಕಬಡ್ಡಿ ಸ್ಪರ್ಧೆಗಳಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕರ 4×400 ರಿಲೆ, ಬಾಲಕಿಯರ ಟೆನ್ನಿ ಕ್ವಾಯಿಟ್ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದರು. ಸಿಇಓ ಡಾ. ಸಿದ್ಧಗೌಡ ಪಾಟೀಲ, ದೈಹಿಕ ಶಿಕ್ಷಣ ಉಪನ್ಯಾಸಕಿ ಅಶ್ವಿನಿ ಬುಲಬುಲಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಅಜಿತರಾವ ಮೋರೆ, ಸಂಜಯ ಮುತ್ನಾಳೆ, ಪ್ರವೀಣ ಪಾಯಮಲ್ಲೆ, ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.