Advertisement

ಸಿಎಂ ನೇತೃತ್ವದಲ್ಲಿ ನಾನಾ ಇಲಾಖೆಗಳ ಭೌತಿಕ, ಆರ್ಥಿಕ ಪ್ರಗತಿ ಸಭೆ

11:53 PM Sep 04, 2023 | Team Udayavani |

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾನಾ ಇಲಾಖೆಗಳ ಭೌತಿಕ ಹಾಗೂ ಆರ್ಥಿಕ ಪ್ರಗತಿ ಬಗ್ಗೆ ಮಹತ್ವದ ಸಭೆ ನಡೆದಿದ್ದು, ಈ ವರ್ಷದ ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕಾಗಿ ಹಂಚಿಕೆಯಾದ 54,374 ಕೋಟಿ ರೂ. ಅನುದಾನವನ್ನು ಫೆಬ್ರವರಿ ಯೊಳಗೆ ಖರ್ಚು ಮಾಡುವಂತೆ ಸೂಚನೆ ನೀಡಲಾಗಿದೆ.

Advertisement

ಲೋಕೋಪಯೋಗಿ, ಜಲಸಂಪ ನ್ಮೂಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಯೋಜನಾ ಇಲಾಖೆ (ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ), ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.

ಕಳೆದ ವರ್ಷದ ಆಯವ್ಯಯದಲ್ಲಿ ಬಂಡವಾಳ ವೆಚ್ಚಕ್ಕೆ 46,955 ಕೋ. ರೂ. ಹಂಚಿಕೆ ಮಾಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ 54,374 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದು ಸರಕಾರದ ಆಸ್ತಿ ಸೃಜನೆಗೂ ಪೂರಕವಾಗಿದ್ದು, ಈ ಅನುದಾನ ಸದ್ಬಳಕೆಯಾಗುವುದನ್ನು ಖಾತರಿಪಡಿಸಿ ಕೊಳ್ಳುವಂತೆ ಸಿಎಂ ಸೂಚಿಸಿದರು.

ಚುನಾವಣೆ ಹಾಗೂ ಆಯವ್ಯಯ ಅನುಮೋದನೆ ವಿಳಂಬವಾದ ಕಾರಣ ಒಟ್ಟಾರೆ ಪ್ರಗತಿಯಲ್ಲಿ ಹಿನ್ನಡೆಯಾಗಿದೆ. ಆದರೆ ಶೀಘ್ರವೇ ನಿಗದಿತ ಗುರಿಯಂತೆ ವೆಚ್ಚ ಮಾಡಬೇಕು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಕಳೆದ ವರ್ಷದ 2,000 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ಲಭ್ಯವಿದ್ದು, ಪ್ರಸಕ್ತ ಸಾಲಿನಲ್ಲಿ 3,000 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದ್ದರಿಂದ ಶೀಘ್ರವೇ ಕ್ರಿಯಾ ಯೋಜನೆ ಅನುಮೋದನೆ ಪಡೆದು ಕಾಮಗಾರಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ 1400 ಕೋ.ರೂ. ಲಭ್ಯವಿದೆ. ಅಗತ್ಯ ಔಷಧ ಮತ್ತು ಉಪಕರಣಗಳ ಖರೀದಿಗೆ ಬಳಕೆ ಮಾಡಿಕೊಳ್ಳಲು ಸೂಚಿಸಲಾಯಿತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣದ ಮಾದರಿಯನ್ನು ಇಂಡಿಯನ್‌ ಪಬ್ಲಿಕ್‌ ಹೆಲ್ತ… ಸ್ಟಾಂಡರ್ಡ್‌ಗಳ ಅನ್ವಯ ನಿಗದಿ ಪಡಿಸುವ ಕುರಿತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಆರೋಗ್ಯ ಇಲಾಖೆ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Advertisement

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಸತೀಶ್‌ ಜಾರಕಿಹೊಳಿ, ದಿನೇಶ್‌ ಗುಂಡೂರಾವ್‌, ಎನ್‌.ಎಸ್‌. ಬೋಸರಾಜು, ಡಾ| ಡಿ. ಸುಧಾಕರ್‌, ರಹೀಂ ಖಾನ್‌, ಬೈರತಿ ಸುರೇಶ್‌ ಮುಂತಾದವರಿದ್ದರು.

ಜಲಸಂಪನ್ಮೂಲ ಇಲಾಖೆ ಮೇಲೆ ಕಣ್ಣು
ಜಲಸಂಪನ್ಮೂಲ ಇಲಾಖೆಯಲ್ಲಿ ಅನುಮೋದನೆಗೊಂಡು ಆರಂಭವಾಗ ದಿರುವ ಕಾಮಗಾರಿಗಳ ಬಗ್ಗೆ ನೀರಾವರಿ ನಿಗಮಗಳ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಕೈ ಬಿಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಈ ಮೂಲಕ ಈ ಇಲಾಖೆಯ ಚಟುವಟಿಕೆ ಬಗ್ಗೆ ಅವರು ವಿಶೇಷ ದೃಷ್ಟಿ ಬೀರಿದ್ದಾರೆ. ಜಲ ಸಂಪನ್ಮೂಲ ಇಲಾಖೆಯಲ್ಲಿ 1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಅನುಮೋದಿತ ಕಾಮಗಾರಿಗಳ ಪೈಕಿ ಸುಮಾರು 12,000 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗಳು ಪ್ರಾರಂಭವಾಗಿಲ್ಲ. ಇವುಗಳನ್ನು ಪರಿಶೀಲಿಸಿ, ಕೈಬಿಡುವ ಕುರಿತು ನೀರಾವರಿ ನಿಗಮಗಳ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸುವಂತೆ ಸೂಚನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next