Advertisement
ಯಾರು, ಏನು ಎತ್ತ ಗೊತ್ತಿಲ್ಲದ ನಾವು ನೋಡುತ್ತಲೇ ಇದ್ದೇವು. ನಗರದ ಪ್ರಮುಖ ಜಾಗದಲ್ಲಿ ಪುರುಷ ವೇಷ ಧರಿಸಿ, ಕೈಯ್ಯಲ್ಲಿ ಕತ್ತಿ ಹಿಡಿದು, ವಿರುದ್ಧ ದಿಕ್ಕುಗಳಲ್ಲಿ ನೋಡುತ್ತಾ ಕಾವಲುಗಾರರಂತೆ ನಿಂತ ಇವರು ಯಾ ಚಾನ್ ಮತ್ತು ಯಾ ಮೂಕ್ ಎಂದು ತಿಳಿಸಿದ (ಥಾಯ್ ಭಾಷೆಯಲ್ಲಿ ಅಥವಾ ಅಂದರೆ ಅಜ್ಜಿ ). ಸಾಧಾರಣವಾಗಿ ಮಹಿಳೆ ಎಂದರೆ ಮನೆವಾರ್ತೆ ಎಂಬ ನಂಬಿಕೆ ಸಾಂಪ್ರದಾಯಿಕ ಥಾಯ್ ಸಮಾಜದಲ್ಲಿ ಇಂದಿಗೂ ಇರುವಾಗ, ಈ ಅಜ್ಜಿಯರ ಶಿಲ್ಪ ಇಲ್ಲಿರುವುದರ ಬಗ್ಗೆ ಆಶ್ಚರ್ಯವಾಯಿತು. ಇದಕ್ಕೆ ಕಾರಣವಾದ ಎರಡು ಶತಕಗಳ ಹಿಂದೆ ನಡೆದ ಸ್ವಾರಸ್ಯಕರ ಐತಿಹಾಸಿಕ ಘಟನೆ ಹೀಗಿದೆ.
ಚಾನ್ ಮತ್ತು ಮೂಕ್ ಸಹೋದರಿಯರು ಬಾನ್ ಕೀನ್ ಹಳ್ಳಿಯ ಮುಖ್ಯಸ್ಥನ ಮಕ್ಕಳು. ಅಂದಿನ ಪದ್ಧತಿಯಂತೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ಅಕ್ಕ ಚಾನ್ ಗೆ ಬೇಗನೇ ಪತಿವಿಯೋಗ ವಾಯಿತು. ಕೆಲಸಮಯದಲ್ಲೇ ಲಂಗ್ ನಗರದ ರಾಜ್ಯಪಾಲನೊಂದಿಗೆ ಮರು ಮದುವೆಯೂ ಆಯಿತು. ಆದರೆ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಆತನೂ ಕೊನೆಯುಸಿರೆಳೆದ. 1785ರ ಆರಂಭದಲ್ಲಿ ಈ ದುರ್ಘಟನೆ ನಡೆದಾಗ ಚಾನ್‌ಳ ವಯಸ್ಸು ನಲವತ್ತೈದರ ಆಸುಪಾಸು. ಗಂಡನನ್ನು ಕಳೆದುಕೊಂಡ ದುಃಖದಲ್ಲಿರುವಾಗಲೇ ಬರ್ಮಾ ಸೈನ್ಯದ ದಾಳಿಯ ಕುರಿತ ಆಘಾತಕರ ಸುದ್ದಿ ! ನಾಯಕನಿಲ್ಲದಿದ್ದಾಗ ಸುಲಭವಾಗಿ ತಲಂಗ್ ತಮ್ಮ ಕೈವಶ ಮಾಡಿಕೊಳ್ಳಬಹುದು ಎಂಬ ಹುನ್ನಾರ ಬರ್ಮಾ ಸೇನೆಯದ್ದು. ಸುದ್ದಿ ತಿಳಿದು ಗಾಬರಿಯಾದರೂ ಧೈರ್ಯಗೆಡದೆ ತಂಗಿ ಮತ್ತು ಪಟ್ಟಣದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದ ಅಕ್ಕ ಚಾನ್ ಮಹಿಳೆಯರಿಗೂ ಪುರುಷ ಸೈನಿಕರ ವೇಷ ತೊಡಿಸಿ, ಕೈಯಲ್ಲಿ ಕತ್ತಿ ಹಿಡಿಸಿ ಯುದ್ಧಕ್ಕೆ ಸಜ್ಜುಗೊಳಿಸಿದರು. ಇಡೀ ನಗರದ ಸುತ್ತ ಗಸ್ತು ಹೊಡೆಯುತ್ತಿದ್ದ ಅಪಾರ ಸಂಖ್ಯೆಯ ಪುರುಷ ವೇಷಧಾರಿ ಮಹಿಳಾ ಸೈನಿಕರನ್ನು ಕಂಡು ಬರ್ಮಾ ಸೇನೆ ಹೆದರಿತು.ಅದೇ ವರ್ಷ ಮಾರ್ಚ್‌ನಲ್ಲಿ ಐದು ವಾರಗಳ ನಡೆದ ಯುದ್ಧದಲ್ಲಿ ಸೀಮಿತ ಸೈನ್ಯಬಲವಿದ್ದರೂ ಯುಕ್ತಿಯಿಂದ ಗೆಲುವು ಸಾಧಿಸಿದ ಕೀರ್ತಿ ಈ ಸಹೋದರಿಯರದ್ದು!
Related Articles
Advertisement
ಸ್ಥಳೀಯ ಜನತೆ ತಮ್ಮ ಸ್ವಾತಂತ್ರ್ಯಕ್ಕಾಗಿ ಸೆಣಸಾಡಿದ ಈ ಇಬ್ಬರನ್ನೂ ಕತೆ, ಹಾಡಿನ ಮೂಲಕ ಗೌರವಿಸುತ್ತ ಬಂದಿತ್ತು. 1909 ರಲ್ಲಿ ರಾಜ ಆರನೆಯ ರಾಮ, ಈಸಹೋದರಿಯರ ಶಿಲ್ಪ ನಿರ್ಮಿಸುವ ಯೋಜನೆ ಮುಂದಿಟ್ಟ.ಅದು ಕಾರ್ಯಗತವಾಗಿ 1967 ರಲ್ಲಿ ರಾಜ ಒಂಬತ್ತನೆಯ ರಾಮನ ಕಾಲದಲ್ಲಿ ಅದ್ದೂರಿಯಾಗಿ
ಇಲ್ಲಿ ಸ್ಥಾಪನೆಗೊಂಡಿತು. ಐದೂವರೆ ಅಡಿ ಎತ್ತರದ ಲೋಹದ ಶಿಲ್ಪಗಳ ಕೆಳಗೆ ಪುಟ್ಟ ಪ್ರತಿಕೃತಿಯನ್ನು ಇಡಲಾಗಿದ್ದು ಜನರು ಇದಕ್ಕೆ ಪೂಜೆ ಸಲ್ಲಿಸುತ್ತಾರೆ.
ತಮ್ಮ ದ್ವೀಪವನ್ನು ಈ ಯೋಧೆಯರು ರಕ್ಷಿಸುತ್ತಾರೆ ಎಂಬ ಬಲವಾದ ನಂಬಿಕೆ ಜನರದ್ದಾಗಿದೆ. ಹೊರಸಂಚಾರಕ್ಕೆ ಹೋಗುವ ಪ್ರವಾಸಿಗರು, ವಿದ್ಯಾರ್ಥಿಗಳು ಹೀಗೆ ಎಲ್ಲರೂ ಈ ತಮ್ಮ ಸುರಕ್ಷೆ, ಯಶಸ್ಸಿಗಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ನಾಡಿನ
ರಕ್ಷಣೆಗಾಗಿ ದಿಟ್ಟ ಹೆಜ್ಜೆಯಿಟ್ಟ ಈ ಸಹೋದರಿಯರ ಗೌರವಾರ್ಥ ಅಂಚೆ ಚೀಟಿಗಳನ್ನೂ ಸರ್ಕಾರ ಬಿಡುಗಡೆ ಮಾಡಿದೆ. ಪ್ರತೀ ವರ್ಷ ಮಾರ್ಚ್ ತಿಂಗಳಿನಲ್ಲಿ ಎರಡು
ವಾರಗಳ ಕಾಲ ಸಹೋದರಿಯರ ಸ್ಮರಣಾರ್ಥ ಥಾವೋ ಥೆಪ್ ಕ್ರಸಾತ್ರಿ ಮತ್ತು ಥಾವೋ ಸಿ ಸನ್ ಥಾನ್ ಉತ್ಸವ ನಡೆಸಲಾಗುತ್ತದೆ. *ಕೆ. ಎಸ್. ಚೈತ್ರಾ