Advertisement

ಒಂದು ಉಡದ ಫೋಟೋಶೂಟ್‌

08:31 PM Nov 15, 2019 | Lakshmi GovindaRaju |

ಉಡವು ಸರಿಸೃಪ ಜಾತಿಗೆ ಸೇರಿದೆ. ಇದು ಸಕಲ ವಿದ್ಯೆಗಳನ್ನು ಬಲ್ಲ ಸಸ್ತನಿ. ನೀರಿನಲ್ಲಿ ಸರಾಗವಾಗಿ ಈಜಬಲ್ಲುದು. ತನ್ನ ಕಾಲಿನ ಮೇಲೆ ನಿಂತುಕೊಂಡು ಸುತ್ತಲ ಪರಿಸರ ಅವಲೋಕನ ಮಾಡುವ ಸಾಮರ್ಥ್ಯ ಇದಕ್ಕಿದೆ…

Advertisement

ಪಕ್ಷಿಗಳ ಫೋಟೊ ತೆಗೆಯಲೆಂದು, ರಾಣೆಬೆನ್ನೂರಿನ ಸಮೀಪದ ಚೌಡಯ್ಯದಾನಪೂರದತ್ತ ಹೊರಟಿದ್ದೆ. ಗುಡುಗೂರಿನ ಕಾಡನ್ನು ಹೊಕ್ಕುತ್ತಿದ್ದಂತೆಯೇ, ದೂರದಲ್ಲೇನೋ ಪ್ರಾಣಿ ಸರಿದಾಡಿದಂತೆ ಅನ್ನಿಸಿತು. ಮಣ್ಣಿನ ದಿಬ್ಬದ ಮೇಲೆ ಹಾವು ಮಲಗಿದೆಯೇನೋ ಎಂದುಕೊಂಡು ಹತ್ತಿರ ಹೋದೆ. ನೋಡಿದಾಗಲೇ ಗೊತ್ತಾಗಿದ್ದು, ಅದು ಉಡ.

ಸೀಳಿದಂತಿದ್ದ ಕೆಂಗುಲಾಬಿ ಬಣ್ಣದ ನಾಲಿಗೆಯನ್ನು ಹೊರಚಾಚುತ್ತಾ, ಕಲ್ಲಿನ ಮೇಲೆ ಕುಳಿತು ಅತ್ತಿತ್ತ ಕಣ್ಣಾಡಿಸುತ್ತಿತ್ತು. ತಕ್ಷಣ ಪೊದೆಯ ಮರೆಯಲ್ಲಿ ಅವಿತು, ಒಂದಿಷ್ಟು ಫೋಟೊಗಳನ್ನು ತೆಗೆದೆ. ದಪ್ಪದಾದ ಆನೆಯ ಚರ್ಮದಂಥ ಉಡ, ತಿನ್ನಲಿಕ್ಕೆ ಏನನ್ನೋ ಹುಡುಕುತ್ತಿತ್ತು. ಕಲ್ಲು ಬಂಡೆ ಏರುತ್ತಾ, ನಾಲಿಗೆಯನ್ನು ಹೊರಚಾಚುತ್ತಿತ್ತು. ನೋಡಲು ಮೈ ಜುಮ್ಮೆನ್ನುವ ದೃಶ್ಯ. ನನ್ನ ಇರುವಿಕೆ ಗೊತ್ತಾಗುತ್ತಿದ್ದಂತೆ, ಸರಕ್ಕನೆ ಅಲ್ಲಿಂದ ಓಡಿಹೋಯಿತು.

ಉಡವನ್ನು ನಾನು ಚಿಕ್ಕವನಿದ್ದಾಗ ನೋಡಿದ್ದೆ. ದನಗಾಹಿಯೊಬ್ಬ ಉಡವನ್ನು ಹಿಡಿದು, ಅದರ ಸೊಂಟಕ್ಕೆ ಹಗ್ಗ ಕಟ್ಟಿ, ನಮ್ಮ ಊರೆಲ್ಲ ಸುತ್ತಾಡಿದ್ದ. ಹಾಗೆ ಸುತ್ತಾಡುವಾಗ ಉಡವು ನೆಲವನ್ನು ಬಿಗಿಯಾಗಿ ಪಟ್ಟು ಹಿಡಿಯುತ್ತಿತ್ತು. ಅವನು ಅದನ್ನು ಎಳೆದೆಳೆದು ಹಾಕುತ್ತಿದ್ದ. ಪಟ್ಟು ಬಿಡದೇ ಇದ್ದಾಗ ಹಗ್ಗ ಹರಿದು ಹೋಗಿ, ಉಡವು ತಪ್ಪಿಸಿಕೊಳ್ಳಲು ಯತ್ನಿಸಿತ್ತು. ಅದನ್ನು ಅಟ್ಟಾಡಿಸಿ ಮತ್ತೆ ಮತ್ತೆ ಹಿಡಿಯುವ ಅವನ ಸಾಹಸ, ಬಾಲಕರಾಗಿದ್ದ ನಮಗೆ ಮನರಂಜನೆಯಂತೆ ಕಂಡಿತ್ತು.

ಉಡವು ಸರಿಸೃಪ ಜಾತಿಗೆ ಸೇರಿದೆ. ಇದು ಸಕಲ ವಿದ್ಯೆಗಳನ್ನು ಬಲ್ಲ ಸಸ್ತನಿ. ನೀರಿನಲ್ಲಿ ಸರಾಗವಾಗಿ ಈಜಬಲ್ಲುದು. ತನ್ನ ಕಾಲಿನ ಮೇಲೆ ನಿಂತುಕೊಂಡು ಸುತ್ತಲ ಪರಿಸರ ಅವಲೋಕನ ಮಾಡುವ ಸಾಮರ್ಥ್ಯ ಇದಕ್ಕಿದೆ. ಭಾರತದ ಎಲ್ಲ ಕಾಡು ಮತ್ತು ಮರುಭೂಮಿಗಳಲ್ಲೂ ಉಡಗಳು ಕಂಡುಬರುತ್ತವೆ. ಉಡವು ಮನೆಯನ್ನು ಹೊಕ್ಕರೆ ಅಪಶಕುನ ಎನ್ನುವುದು ಕೇವಲ ಮೂಢನಂಬಿಕೆ. ಉಡ ಹೊಕ್ಕಿದ ಮನೆ ಎಂದರೆ ಅದು ಹಳೆಯ ಮನೆಯೇ ಆಗಿರುತ್ತದೆ. ಹಳೆಯ ಮನೆಗೆ ಗೆದ್ದಲು ಹಿಡಿಯುವುದು ಸಾಮಾನ್ಯ.

Advertisement

ಕುಸಿಯಲು ಪ್ರಾರಂಭಿಸುವ ಮನೆಯಾದ ಕಾರಣ, ಅದರಲ್ಲಿ ವಾಸಿಸಬಾರದು ಎನ್ನುವುದಷ್ಟೇ ಈ ಮಾತಿನ ಅರ್ಥ ಇದ್ದಿರಬೇಕು. ದುಃಖಕರ ಸಂಗತಿಯೆಂದರೆ, ಉಡಗಳನ್ನು ಚರ್ಮ ಹಾಗೂ ಮಾಂಸಕ್ಕಾಗಿ ಮನುಷ್ಯ ಬೇಟೆಯಾಡುತ್ತಾನೆ. ಇದರ ಚರ್ಮವನ್ನು ತಮಟೆಗಳಂಥ ಚರ್ಮವಾದ್ಯಗಳ‌ ತಯಾರಿಕೆಯಲ್ಲಿ ಬಳಸುತ್ತಾರೆ. ಹೀಗಾಗಿ, ಈ ಜೀವಿ ಈಗ ಅಳಿವಿನಂಚಿನಲ್ಲಿದೆ.

ಕೋಟೆ ಏರಲು ಉಡಗಳೇ ಏಣಿ!: ಉಡವು ಒಮ್ಮೆ ಮರ ಅಥವಾ ಬಂಡೆಯನ್ನೋ ಗಟ್ಟಿಯಾಗಿ ಹಿಡಿಯಿತೆಂದರೆ ಅದನ್ನು ಸಡಿಲಿಸುವುದೇ ಕಷ್ಟ . ಇದನ್ನರಿತೇ ಹಿಂದೆ ಅರಸರು, ಶತ್ರು ಕೋಟೆಯನ್ನು ಭೇದಿಸಲು ಉಡಗಳನ್ನು ಸಾಕುತ್ತಿದ್ದರು. ಉಡದ ಸೊಂಟಕ್ಕೆ ಹಗ್ಗ ಕಟ್ಟಿ ಶತ್ರುಗಳ ಕೋಟೆಯ ಮೇಲೆ ಹತ್ತಿಸಿ, ಆ ಹಗ್ಗವನ್ನು ಹಿಡಿದು ತಾವೂ ಕೋಟೆಯನ್ನೇರುತ್ತಿದ್ದರು. ಕೋಟೆ ಏರಲು ಆಗ ಉಡಗಳೇ ಏಣಿ. ವಿಶೇಷವಾಗಿ ಶಿವಾಜಿ ಮಹಾರಾಜರು ಉಡದ ಕತೆಯೊಂದಿಗೆ ನಮಗೆ ನೆನಪಾಗುತ್ತಾರೆ.

ಚಿತ್ರ-ಲೇಖನ: ನಾಮದೇವ ಕಾಗದಗಾರ

Advertisement

Udayavani is now on Telegram. Click here to join our channel and stay updated with the latest news.

Next