Advertisement

ಸಂಗಕ್ಕರ ಹೊಡೆತಕ್ಕೆ ಮೊಬೈಲ್‌ ಪುಡಿ ಪುಡಿ!

03:35 AM Jul 15, 2017 | Team Udayavani |

ಲಂಡನ್‌: ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ಇಂಗ್ಲಿಷ್‌ ಕೌಂಟಿಯಲ್ಲಿ ಪ್ರಚಂಡ ಫಾರ್ಮ್ ತೋರ್ಪಡಿಸುತ್ತಿದ್ದಾರೆ. ಸರ್ರೆ ತಂಡದ ಪರ ಆಡುತ್ತಿರುವ ಅವರು ಲಾರ್ಡ್ಸ್‌ನಲ್ಲಿ ನಡೆದ ಮಿಡ್ಲ್ಸೆಕ್ಸ್‌ ವಿರುದ್ಧದ ಟಿ-20 ಪಂದ್ಯವೊಂದರಲ್ಲಿ 42 ಎಸೆತಗಳಿಂದ 70 ರನ್‌ ಸಿಡಿಸಿದ್ದು ತಾಜಾ ಉದಾಹರಣೆ.

Advertisement

ಸಂಗಕ್ಕರ ಅವರ ಈ ಆರ್ಭಟದ ವೇಳೆ 3 ಸಿಕ್ಸರ್‌ ಮತ್ತು 6 ಬೌಂಡರಿ ಸಿಡಿಯಲ್ಪಟ್ಟಿತು. ಇದರಲ್ಲಿ ಒಂದು ಸಿಕ್ಸರ್‌ ಸ್ಟೇಡಿಯಂನಲ್ಲಿದ್ದ ವೀಕ್ಷಕನೊಬ್ಬನ ಮೊಬೈಲ್‌ ಫೋನಿಗೆ ಹೋಗಿ ಅಪ್ಪಳಿಸಿದೆ. ಪರಿಣಾಮ, ಮೊಬೈಲ್‌ ಪುಡಿ ಪುಡಿ!
ಇದು ಸ್ಟೀವನ್‌ ಫಿನ್‌ ಎಸೆತಕ್ಕೆ ಬಾರಿಸಿದ ಸಿಕ್ಸರ್‌ ಆಗಿತ್ತು. ರಭಸವಾಗಿ ಧಾವಿಸಲ್ಪಟ್ಟ ಚೆಂಡು ನೇರವಾಗಿ ವೀಕ್ಷಕನೊಬ್ಬನ ಮೊಬೈಲ್‌ ಫೋನಿನ ಮೇಲೆರಗಿದೆ. ಮೊಬೈಲ್‌ ಪುಡಿಯಾಗಿದೆ. ಅಸಹಾಯಕ ವೀಕ್ಷಕ ಈ ಹಾನಿಗೊಂಡ ಮೊಬೈಲನ್ನು ಎತ್ತಿ ಹಿಡಿದು ನಗುತ್ತಿದ್ದ ದೃಶ್ಯ ಮೈದಾನದಲ್ಲಿದ್ದ “ಬಿಗ್‌ ಸ್ಕ್ರೀನ್‌’ ಮೇಲೆ ಮೂಡಿಬಂದಾಗಲೇ ಎಲ್ಲರಿಗೂ ಘಟನೆಯ ಅರಿವಾದದ್ದು!

ಸಂಗಕ್ಕರ ಆ ವೀಕ್ಷಕನಿಗೆ ಹೊಸ ಮೊಬೈಲ್‌ ಒದಗಿಸಿದರೇ ಎಂಬುದು ಮಾತ್ರ ತಿಳಿದು ಬಂದಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next