Advertisement
ನಿಮ್ಮ ಮನೆಯ ತೋಟದ, ಅಂಗಳದ ಅಥವಾ ನಿಮಗಿಷ್ಟವಾದ ಹೂವಿನಿಂದ ಫೇಸ್‌ಪ್ಯಾಕ್ ಲೇಪಿಸಿ ಆನಂದಿಸಿ ಜೊತೆಗೆ ಮುಖದ ಸೌಂದರ್ಯವನ್ನು ವರ್ಧಿಸಿಕೊಳ್ಳಿ ! ಇವುಗಳನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.
ಗುಲಾಬಿ ಎಂದರೆ ಹೆಂಗಳೆಯರಿಗೆ ಎಲ್ಲಿಲ್ಲದ ಆಕರ್ಷಣೆ! ಹಾಂ! ಮೊಗದ ಚರ್ಮದ ಕಾಂತಿ, ಮೃದುತ್ವ ವರ್ಧಿಸಿ ಶ್ವೇತ ವರ್ಣ ಉಂಟುಮಾಡಲು ಗುಲಾಬಿ ಹೂವು ಸಹಕಾರಿ.
ವಿಧಾನ: ಎರಡು ತಾಜಾ ಗುಲಾಬಿಯ ಪಕಳೆಗಳನ್ನು 15 ಚಮಚ ನೀರಿನಲ್ಲಿ ಅರ್ಧ ಗಂಟೆ ನೆನೆಸಬೇಕು. ತದನಂತರ ಅದನ್ನು ಅರೆದು 2 ಚಮಚ ಜೇನು ಬೆರೆಸಿ ಲೇಪ ತಯಾರಿಸಬೇಕು. ಇದನ್ನು ತುದಿಬೆರಳುಗಳಿಂದ ಮುಖಕ್ಕೆ ಲೇಪಿಸಿ ಫೇಸ್‌ಪ್ಯಾಕ್ ಮಾಡಬೇಕು. ತದನಂತರ ಈ ಫೇಸ್‌ಪ್ಯಾಕ್ ಮೇಲೆ ಹಾಲಿನಲ್ಲಿ ಅದ್ದಿದ ಗುಲಾಬಿಯ ಪಕಳೆಗಳನ್ನು ಲೇಪಿಸಬೇಕು. 20 ನಿಮಿಷಗಳ ಬಳಿಕ ತೊಳೆದರೆ ಮುಖ ಶುಭ್ರ ಮೃದು ಕಾಂತಿಯುತವಾಗುತ್ತದೆ. ವಾರಕ್ಕೆ ಮೂರು ಸಾರಿಯಂತೆ 6-8 ವಾರ ಬಳಸಿದರೆ ಮುಖದ ಚರ್ಮ ಬೆಳ್ಳಗಾಗುತ್ತದೆ.
Related Articles
ಹದಿಹರೆಯದ ಹೆಣ್ಣು ಮಕ್ಕಳಿಗೆ, ಕಾಲೇಜಿನ ಯುವತಿಯರಿಗೆ ಮೊಡವೆಯ, ಬ್ಲ್ಯಾಕ್‌ಹೆಡ್ಸ್ , ವ್ಹೆ „ಟ್ ಹೆಡ್ಸ್ ಗಳ ಬಾಧೆ ಅಧಿಕ.ಇವುಗಳ ನಿವಾರಣೆಗೆ ಜಾಜಿ, ಮಲ್ಲಿಗೆ ಅಥವಾ ದುಂಡುಮಲ್ಲಿಗೆಯ ಫೇಸ್‌ಪ್ಯಾಕ್ ಬಳಸಿದರೆ ಗುಣಕಾರಿ.
ವಿಧಾನ: ಎರಡು ಹಿಡಿ ಮಲ್ಲಿಗೆಯನ್ನು 1/4 ಕಪ್ ಹಾಲಿನಲ್ಲಿ ನೆನೆಸಿ ಅದರಲ್ಲಿಯೇ 8 ಬಾದಾಮಿಯನ್ನು ನೆನೆಸಿಡಬೇಕು. ಅರ್ಧ ಗಂಟೆಯ ಬಳಿಕ ಎಲ್ಲವನ್ನು ಚೆನ್ನಾಗಿ ಅರೆದು ಲೇಪ ತಯಾರಿಸಬೇಕು. ಮುಖಕ್ಕೆ ಚೆನ್ನಾಗಿ ಲೇಪಿಸಿ ಮೃದುವಾಗಿ ಮಾಲೀಶು ಮಾಡಬೇಕು.
Advertisement
20 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆದು ತೆಗೆಯಬೇಕು. ಹೀಗೆ ವಾರಕ್ಕೆ ಎರಡರಿಂದ ಮೂರು ಬಾರಿ ಮಲ್ಲಿಗೆಯ ಫೇಸ್‌ಪ್ಯಾಕ್ ಮಾಡಿದರೆ 1-2 ತಿಂಗಳಲ್ಲಿ ಮೊಡವೆ ಕಲೆ ಮೊದಲಾದವು ನಿವಾರಣೆಯಾಗಿ ಮುಖ ಶುಭ್ರವಾಗಿ ಹೊಳೆಯುತ್ತದೆ.
ಚೆಂಡು ಹೂವು (ಗೊಂಡೆ ಹೂವಿನ) ಫೇಸ್ಪ್ಯಾಕ್ಮುಖ ಬೆಳ್ಳಗಾಗಲು ಬ್ಲೀಚಿಂಗ್ ಮಾಡುವುದು ಸಾಮಾನ್ಯ. ಆದರೆ ಕೆಮಿಕಲ್ ಬ್ಲೀಚಿಂಗ್‌ಗೆ ಬದಲಾಗಿ ಚೆಂಡು ಹೂವನ್ನೇ ಬಳಸಿ ನೈಸರ್ಗಿಕವಾಗಿ ಬ್ಲೀಚಿಂಗ್ ಪರಿಣಾಮ ಪಡೆಯಬಹುದು!
ವಿಧಾನ: ಒಂದು ದೊಡ್ಡ ತಾಜಾ ಚೆಂಡು ಹೂವಿನ ಎಸಳುಗಳನ್ನು ನಾಲ್ಕು ಚಮಚ ದಪ್ಪ ಮೊಸರಲ್ಲಿ 15 ನಿಮಿಷ ನೆನೆಸಿಡಬೇಕು. ತದನಂತರ ಅದನ್ನು ಅರೆಯಬೇಕು. ಈ ಮಿಶ್ರಣಕ್ಕೆ ಕತ್ತರಿಸಿ ಅರೆದ ಹಸಿ ಆಲೂಗಡ್ಡೆಯ ಪೇಸ್ಟ್ ಮೂರು ಚಮಚ ಬೆರೆಸಬೇಕು. ಎರಡನ್ನೂ ಚೆನ್ನಾಗಿ ಬೆರೆಸಿ, ಮುಖಕ್ಕೆ ಲೇಪಿಸಿ ತುದಿ ಬೆರಳುಗಳಿಂದ ಮಾಲೀಶು ಮಾಡಬೇಕು. ಒಂದು ಗಂಟೆಯ ಬಳಿಕ ತಣ್ಣೀರಿನಲ್ಲಿ ತೊಳೆದರೆ ನೈಸರ್ಗಿಕ ಬ್ಲೀಚಿಂಗ್ ಪರಿಣಾಮ ಉಂಟಾಗುತ್ತದೆ. ಇದನ್ನು ಎರಡು ದಿನಕ್ಕೊಮ್ಮೆಯಂತೆ 1-2 ತಿಂಗಳು ಬಳಸಬಹುದು. ಪಾರಿಜಾತ ಹೂವಿನ ಫೇಸ್‌ಪ್ಯಾಕ್
ಪಾರಿಜಾತ ಹೂವು ಚರ್ಮದ ಸೌಂದರ್ಯದ ಜೊತೆಗೆ ತುರಿಕೆ ಗುಳ್ಳೆಗಳನ್ನೂ ನಿವಾರಣೆ ಮಾಡುತ್ತದೆ.
ವಿಧಾನ: 15 ಪಾರಿಜಾತ ಹೂವುಗಳನ್ನು 5 ಚಮಚ ಕಿತ್ತಳೆ ರಸದಲ್ಲಿ ಅರೆದು ಅದಕ್ಕೆ ಎರಡು ಚಮಚ ಶುದ್ಧ ಜೇನುತುಪ್ಪ ಬೆರೆಸಿ, ಎರಡು ಚಿಟಿಕೆ ಅರಸಿನ ಹುಡಿ ಸೇರಿಸಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ಬಳಿಕ ತೊಳೆದರೆ ಮೊಗದ ಚರ್ಮ ಶುಭ್ರ ಕಾಂತಿಯುತವಾಗುವುದರ ಜೊತೆಗೆ ತುರಿಕೆ ಗುಳ್ಳೆಗಳಿದ್ದರೂ ನಿವಾರಣೆಯಾಗುತ್ತದೆ. ಹೀಗೆ ಹೂಗಳು ಮುಖದ ಸೌಂದರ್ಯಕ್ಕೆ ಹೊಸ ಭಾಷ್ಯ ನೀಡುವ ಸೌಂದರ್ಯದ ಖನಿಯಾಗಿವೆ! – ಡಾ| ಅನುರಾಧಾ ಕಾಮತ್