Advertisement

ಔಷಧ ಮಾರಾಟ ಬಂದ್‌: ರೋಗಿಗಳ ಪರದಾಟ

01:13 PM May 31, 2017 | Team Udayavani |

ಮೈಸೂರು: ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡುವುದನ್ನು ವಿರೋಧಿಸಿ ಅಖೀಲ ಭಾರತ ಔಷಧ ವ್ಯಾಪಾರಿಗಳ ಸಂಘ, ದೇಶವ್ಯಾಪಿ ಕರೆ ನೀಡಿದ್ದ ಔಷಧ ಮಾರಾಟ ಬಂದ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲೆಯ ಸುಮಾರು 950 ಔಷಧ ಅಂಗಡಿಗಳು ಬಂದ್‌ ಆಗಿದ್ದವು, ಇದರಿಂದ ರೋಗಿಗಳು ಪರದಾಡುವಂತಾಯಿತು.

Advertisement

ಮೈಸೂರಿನ ಸುತ್ತಮುತ್ತಲಿನ ಊರುಗಳ ಜನತೆಯ ಪಾಲಿಗೆ ದೊಡ್ಡಾಸ್ಪತ್ರೆಯೆಂದೇ ಹೆಸರುವಾಸಿಯಾಗಿರುವ ನಗರದ ಕೆ.ಆರ್‌.ಆಸ್ಪತ್ರೆ ಸುತ್ತಮುತ್ತಲಿನ ನೂರಾರು ಔಷಧ ಅಂಗಡಿಗಳ ಮಾಲೀಕರು ವ್ಯಾಪಾರ ಬಂದ್‌ ಮಾಡಿದ್ದರಿಂದ ದೂರದ ಊರುಗಳಿಂದ ರೋಗಿಗಳನ್ನು ಕರೆತಂದಿದ್ದ ಜನರು ಔಷಧಗಳಿಗಾಗಿ ಪರದಾಡಿದರು. ಕೆ.ಆರ್‌.ಆಸ್ಪತ್ರೆ ಸುತ್ತಮುತ್ತಲಿನ ಧನ್ವಂತ್ರಿ ರಸ್ತೆ, ನ್ಯೂ ಸಯ್ನಾಜಿರಾವ್‌ ರಸ್ತೆಯಲ್ಲಿನ ನೂರಾರು ಔಷಧ ಅಂಗಡಿಗಳು ಬಂದ್‌ ಆಗಿದ್ದವು.

ಹೀಗಾಗಿ ನೂರಾರು ಸಂಖ್ಯೆಯಲ್ಲಿ ಅಂಗಡಿ ಮುಂದೆ ಸರತಿಯಲ್ಲಿ ನಿಂತಿದ್ದ ಜನರಿಗೆ ಔಷಧ ಪೂರೈಸಲು ಕೆ.ಆರ್‌.ಆಸ್ಪತ್ರೆ ಆವರಣದಲ್ಲಿನ ಒಂದೇ ಒಂದು ಜನರಿಕ್‌ ಔಷಧ ಮಳಿಗೆ ಹಾಗೂ ಬೆರಳೆಣಿಕೆಯ ಜನತಾ ಬಜಾರ್‌ ಔಷಧ ಮಳಿಗೆಗಳಿಂದ ಸಾಧ್ಯವಾಗಲೇ ಇಲ್ಲ. ಕೆ.ಆರ್‌.ಆಸ್ಪತ್ರೆಯ ಆವರಣದಲ್ಲಿರುವ ಜನರಿಕ್‌ ಔಷಧ ಮಳಿಗೆಯಲ್ಲಿ ಪ್ರತಿದಿನ ದಿನಗಳಲ್ಲೇ ವೈದ್ಯರು ಬರೆದುಕೊಟ್ಟ ಔಷಧಗಳು ನಮ್ಮಲ್ಲಿಲ್ಲ ಎಂದು ಹೊರಗೆ ಕಳುಹಿಸುತ್ತಾರೆ.

ಜತೆಗೆ ಖರೀದಿಸಿದ ಔಷಧವನ್ನು ಮತ್ತೆ ವೈದ್ಯರಿಗೆ ತೋರಿಸುತ್ತೀರಾ ಎಂದು ಕೇಳುವ ಔಷಧ ಮಳಿಗೆಯ ಸಿಬ್ಬಂದಿ, ವೈದ್ಯರಿಗೆ ತೋರಿಸುತ್ತೇವೆ ಎಂದರೆ ಒಂದು ರೀತಿಯ ಹಾಗೂ ತೋರಿಸುವುದಿಲ್ಲ ಎಂದರೆ ಒಂದು ರೀತಿಯ ಔಷಧ ನೀಡುತ್ತಾರೆ. ಅಲ್ಲದೆ, ಈ ಔಷಧ ನಮ್ಮಲ್ಲಿಲ್ಲ ಎಂಬ ಸಿದ್ಧ ಉತ್ತರ ಕೇಳಲು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾಗಿದೆ ಎಂದು ತಮ್ಮ ಸಂಬಂಧಿಯನ್ನು ಚಿಕಿತ್ಸೆಗಾಗಿ ಕೆ.ಆರ್‌.ಆಸ್ಪತ್ರೆಗೆ ಕರೆತಂದು ಔಷಧಕ್ಕಾಗಿ ಜನರಿಕ್‌ ಔಷಧ ಮಳಿಗೆಯಲ್ಲಿ ಸರತಿಯಲ್ಲಿ ನಿಂತಿದ್ದ ಎಚ್‌.ಡಿ.ಕೋಟೆಯ ಚಿಕ್ಕಣ್ಣ, ಮೈಸೂರು ತಾಲೂಕಿನ ಜಯರಾಮ, ಸಿದ್ದಮ್ಮ ಇತರರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆ: ಔಷಧ ವ್ಯಾಪಾರ ಬಂದ್‌ ಮಾಡಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಮೈಸೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಆನ್‌ಲೈನ್‌ನಲ್ಲಿ ಔಷಧ ಮಾರಾಟ ಹಾಗೂ ಸಿ-ಪೋರ್ಟಲ್‌ ವ್ಯವಸ್ಥೆ ಕೈಬಿಡುವಂತೆ ಒತ್ತಾಯಿಸಿದರು. ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದರಿಂದ ಯಾವುದೇ ಅಡೆತಡೆ ಇಲ್ಲದೆ ಜನರ ಕೈಗೆ ಮಾದಕ ಹಾಗೂ ಪ್ರತಿಬಂಧಕ ವಸ್ತುಗಳು ಸಿಗಲಿದ್ದು, ಇದರಿಂದ ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ ಉಂಟಾಗಲಿದೆ.

Advertisement

ಜತೆಗೆ ಕಳಪೆ ಗುಣಮಟ್ಟದ ಔಷಧ ಹಾಗೂ ಬಳಕೆಯ ವಿಧಿ ವಿಧಾನದ ಮಾಹಿತಿಯ ಕೊರತೆಯಿಂದ ರೋಗಿಯ ಮೇಲೆ ಮಾರಕ ಪರಿಣಾಮ ಉಂಟಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಜೀವ ರಕ್ಷಕ ಔಷಧಗಳ ಕೊರತೆ ಉಂಟಾಗಲಿದೆ. ಜತೆಗೆ ಔಷಧ ವ್ಯಾಪಾರವನ್ನೇ ನಂಬಿಕೊಂಡಿರುವ ಲಕ್ಷಾಂತರ ಜನರ ಕುಟುಂಬ ಬೀದಿಗೆ ಬೀಳಲಿದೆ. ಹೀಗಾಗಿ ಆನ್‌ಲೈನ್‌ ಔಷಧ ಮಾರಾಟ-ಖರೀದಿ ವ್ಯವಸ್ಥೆ ಜಾರಿಗೆ ತರಬಾರದು.

ಸಿ-ಪೋರ್ಟಲ್‌ ಮೂಲಕ ವಹಿವಾಟಿನ ಲೆಕ್ಕಪತ್ರ ನೀಡುವುದು ಸಮಸ್ಯೆಯಾಗಲಿದೆ. ಹೀಗಾಗಿ ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಕುಮಾರಸ್ವಾಮಿ ಎಸ್‌., ಕಾರ್ಯದರ್ಶಿ ರವೀಂದ್ರ ಬಾಬು ಆರ್‌, ಖಜಾಂಚಿ ರಾಜು ಎಂ. ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next