Advertisement

ಮಂಗಳೂರಿನಲ್ಲೂ ಪಿಜಿ ನಿಯಮ ಬಿಗಿ ಸಾಧ್ಯತೆ

11:16 PM Dec 04, 2022 | Team Udayavani |

ಮಂಗಳೂರು: ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಪಿಜಿ(ಪೇಯಿಂಗ್‌ ಗೆಸ್ಟ್‌)ಗಳಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಲು ಪೊಲೀಸರು ಮುಂದಾಗಿದ್ದು, ಶೀಘ್ರದಲ್ಲಿ ಸಮಗ್ರ ನಿಯಮಾವಳಿ ರೂಪುಗೊಳ್ಳುವ ಸಾಧ್ಯತೆ ಇದೆ.

Advertisement

ಪಿಜಿ ಆರಂಭಿಸಲು ಸ್ಥಳೀಯಾಡಳಿತ ಸಂಸ್ಥೆಗಳ ಪರವಾನಿಗೆ ಹಾಗೂ ಪೊಲೀಸ್‌ ಆಯುಕ್ತರ ಕಚೇರಿಯಿಂದಲೂ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆಯುವುದು ಮತ್ತು ಪಿಜಿ ನಿವಾಸಿಗಳಿಗೆ ಪೊಲೀಸ್‌ ದೃಢೀಕರಣ ಪ್ರಮಾಣಪತ್ರ (ಪಿಸಿಸಿ)ವನ್ನು ಕಡ್ಡಾಯ ಮಾಡಲಾಗುತ್ತಿದೆ. ಜತೆಗೆ ಸ್ಥಳೀಯ ಆಗುಹೋಗುಗಳ ಮೇಲೆ ಸಾರ್ವಜನಿಕರು ನಿಗಾ ಇಡುವಂತಹ “ನೇಬರ್‌ಹುಡ್‌ ವಾಚ್‌’ ಪರಿಕಲ್ಪನೆಯನ್ನೂ ಜಾರಿಗೊಳಿಸಲು ಪೊಲೀಸರು ಮುಂದಾಗಿದ್ದಾರೆ.

ಮಂಗಳೂರಿನಲ್ಲಿ ನ.19ರಂದು ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿ ಮಹಮ್ಮದ್‌ ಶಾರೀಕ್‌ ಮೈಸೂರಿನಲ್ಲಿ ನಕಲಿ ಗುರುತು ಚೀಟಿ ನೀಡಿ ಬಾಡಿಗೆಗೆ ಮನೆ ಪಡೆದುಕೊಂಡಿದ್ದ. ಅನಂತರ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆಯಲು ಪೊಲೀಸ್‌ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಕಡ್ಡಾಯಗೊಳಿಸಲಾಗಿತ್ತು. ಇನ್ನೂ ಹಲವು ನಗರಗಳಲ್ಲಿ ಇಂತಹ ಬಿಗಿ ನಿಯಮ ಜಾರಿಗೊಳಿಸಲಾಗಿದೆ.

2019ನಿಯಮ ನಿರ್ಲಕ್ಷ್ಯ :

ಮಂಗಳೂರು ನಗರ, ಮೂಲ್ಕಿ, ಮೂಡುಬಿದಿರೆ, ಉಳ್ಳಾಲ ಸಹಿತ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 600ಕ್ಕೂ ಅಧಿಕ ಪಿಜಿಗಳಿವೆ. ಇದರಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು ಮುಂತಾದವರಿದ್ದಾರೆ.

Advertisement

ಅನೈತಿಕ, ಅಪರಾಧ ಕೃತ್ಯಕ್ಕೆ ಕಡಿವಾಣ :

ಕೆಲವು ಪಿಜಿಗಳಲ್ಲಿ ಡ್ರಗ್ಸ್‌, ಅನೈತಿಕ ಮತ್ತು ಇತರ ಅಪರಾಧ  ಚಟುವಟಿಕೆಗಳು ನಡೆದಿವೆ. ತನಿಖೆ ವೇಳೆ ಯಾವುದೇ ದಾಖಲೆಗಳಿಲ್ಲದೆ ವಾಸ್ತವ್ಯವಿದ್ದ ವಿಚಾರ, ಪಿಜಿಗಳು ಪರವಾನಿಗೆ ಹೊಂದದಿರುವ ಮಾಹಿತಿಯೂ ಲಭಿಸಿತ್ತು. ಇವೆಲ್ಲದರ ಹಿನ್ನೆಲೆಯಲ್ಲಿ ಸ್ಪಷ್ಟ ಸೂಚನೆ ನೀಡಲಾಗಿತ್ತು. ಆದಾಗ್ಯೂ ನಿರ್ಲಕ್ಷ್ಯ ಕಂಡುಬಂದಿದೆ. ಪಿಜಿಗಳ ನಿವಾಸಿಗಳು ಹಾಗೂ ಸಾರ್ವಜನಿಕರ ಸುರಕ್ಷೆ ದೃಷ್ಟಿಯಿಂದ ಅವುಗಳ ಮೇಲೆ ಇಲಾಖೆ ಹಾಗೂ ಸಾರ್ವಜನಿಕರ ನಿಗಾ ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಎಲ್ಲ ಪಿಜಿಗಳ ಬಗ್ಗೆ ನಿಖರ ಮಾಹಿತಿ ಸ್ಥಳೀಯಾಡಳಿತ ಸಂಸ್ಥೆ, ಪೊಲೀಸ್‌ ಇಲಾಖೆಯಲ್ಲಿಲ್ಲ. ಕಮಿಷನರೆಟ್‌ ವ್ಯಾಪ್ತಿಯ ಪಿಜಿ, ಸರ್ವಿಸ್‌ ಅಪಾರ್ಟ್‌ಮೆಂಟ್‌ಗಳು, ಹಾಸ್ಟೆಲ್‌ಗ‌ಳಿಗೆ ಸಂಬಂಧಿಸಿ ಕರ್ನಾಟಕ ಪೊಲೀಸ್‌ ಕಾಯ್ದೆ 1963ರ ಕಲಂ 65 ಮತ್ತು 70ರ ಅಡಿ ಅಧಿಕಾರ ಚಲಾಯಿಸಿ 2019ರಲ್ಲಿ ಅಂದಿನ ಪೊಲೀಸ್‌ ಆಯುಕ್ತರು ನಿಯಮಾವಳಿ ರೂಪಿಸಿದ್ದರು. ಪಿಜಿಗಳಲ್ಲಿರುವ ವಿದ್ಯಾರ್ಥಿಗಳ ಹೆಸರು, ದೂರವಾಣಿ ಸಂಖ್ಯೆ, ಗುರುತಿನ ಚೀಟಿಯನ್ನು ಪೊಲೀಸ್‌ ಠಾಣೆಗೆ ನೀಡಬೇಕು. ವಿದೇಶಿ ವಿದ್ಯಾರ್ಥಿಗಳಿದ್ದರೆ ವಾಸ್ತವ್ಯಕ್ಕೆ ಬಂದ 15 ದಿನಗಳೊಳಗಾಗಿ ಅವರ ಪೂರ್ಣ ಮಾಹಿತಿಯೊಂದಿಗೆ ಪಾಸ್‌ಪೋರ್ಟ್‌ ಹಾಗೂ  ವೀಸಾದ ವಿವರಗಳನ್ನು ಠಾಣೆಗೆ ಸಲ್ಲಿಸಬೇಕು, ಪಿಜಿಗಳಲ್ಲಿ ಸಿಸಿ ಕೆಮರಾ ಅಳವಡಿ ಸಬೇಕು ಮೊದಲಾದ ನಿಯಮ ರೂಪಿಸಲಾಗಿತ್ತು. ಆದರೆ ಬೆರಳೆಣಿಕೆಯ ಪಿಜಿಗಳು ಮಾತ್ರ ಇದನ್ನು ಪಾಲಿಸಿವೆ.

ಪಿಜಿಗಳಿಗೆ ಸಂಬಂಧಿಸಿ ಈಗಾಗಲೇ ಇರುವ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಲಾಗುವುದು.  ಜತೆಗೆ “ನೇಬರ್‌ಹುಡ್‌ ವಾಚ್‌ ಸ್ಕೀಂ’ ಮಾದರಿಯಲ್ಲಿ  ಕ್ರಮ ಕೈಗೊಳ್ಳುವ ಚಿಂತನೆ ಇದೆ. ಶೀಘ್ರದಲ್ಲೇ ಪಿಜಿಗಳಿಗೆ ಸಂಬಂಧಿಸಿದ ಸಮಗ್ರ ನಿಯಮಾವಳಿ ರೂಪಿಸಿ ಅನುಷ್ಠಾನಗೊಳಿಸಲಾಗುವುದು.ಎನ್‌. ಶಶಿಕುಮಾರ್‌,ಪೊಲೀಸ್‌ ಆಯುಕ್ತರು, ಮಂಗಳೂರು 

- ಸಂತೋಷ್‌ ಬೊಳ್ಳೆಟ್ಟು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next