Advertisement

ಪಿಎಫ್ಐ ನಿಷೇಧ: ಕಾಂಗ್ರೆಸ್ ವಿರುದ್ಧ ಮಹತ್ವದ ದಾಖಲೆ ಬಿಡುಗಡೆ ಮಾಡಿದ ಸರ್ಕಾರ

01:03 PM Oct 03, 2022 | Team Udayavani |

ಬೆಂಗಳೂರು: ಪಿಎಫ್ ಐ ನಿಷೇಧ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ನಿರ್ಣಾಯಕ ಸಮರಕ್ಕೆ ಈಗ ಬಿಜೆಪಿ ಸಜ್ಜಾಗಿದ್ದು, ಪೊಲೀಸ್ ಇಲಾಖೆಯ ವಿರುದ್ಧದ ನಡುವೆಯೂ ಸಿದ್ದರಾಮಯ್ಯ ಸರಕಾರ ಪ್ರಕರಣ ವಾಪಾಸ್ ಪಡೆಯುವ ನಿರ್ಧಾರ ತೆಗೆದುಕೊಂಡಿತ್ತು ಎಂಬ ದಾಖಲೆಯನ್ನು ಸರಕಾರ ಸಂಗ್ರಹಿಸಿದೆ.

Advertisement

ಇದಕ್ಕೆ ಸಂಬಂಧಪಟ್ಟ ದಾಖಲೆಯನ್ನು ಕಂದಾಯ ಸಚಿವ ಆರ್.ಅಶೋಕ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಪಿಎಫ್ ಐ ಬೆಳೆದು ಹೆಮ್ಮರವಾಗುವುದಕ್ಕೆ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ.

ತಮ್ಮ ಸರಕಾರ ಪಿಎಫ್ ಐಗೆ ರಕ್ಷಣೆ ನೀಡಿರಲಿಲ್ಲ ಎಂದು ನಿಷೇಧದ ಬೆನ್ನಲ್ಲೇ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದರು. ಆದರೆ ಈಗ ಸರಕಾರ ಅಧಿಕೃತ ದಾಖಲೆಯನ್ನೇ ಬಿಡುಗಡೆ ಮಾಡಿರುವುದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಮೂಲಕ ಪೇಸಿಎಂ ಅಭಿಯಾನಕ್ಕೆ ಬಿಜೆಪಿ ತಕ್ಕ ತಿರುಗೇಟು ನೀಡಿದೆ.

ಏನಿದು ದಾಖಲೆ?:

ಶಿವಮೊಗ್ಗ ಹಾಸನ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆ ಪ್ರಕರಣದಲ್ಲಿ ಕ್ರಮವಾಗಿ ದಾಖಲಾಗಿದ್ದ 117 ಹಾಗೂ 21 ಮೊಕದ್ದಮೆಗಳನ್ನು ವಾಪಾಸ್ ಪಡೆಯುವಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಶಿವಮೊಗ್ಗದಲ್ಲಿ ಸುಮಾರು 1400, ಹಾಸನದಲ್ಲಿ 300 ಜನರು ಈ ಪ್ರಕರಣದ ಆರೋಪಿಗಳಾಗಿದ್ದು, ಇದರಲ್ಲಿ ಪಿಎಫ್ ಐ ಸಂಘಟನೆ ಸದಸ್ಯರು ಭಾಗಿಯಾಗಿದ್ದರು‌. ಈ ಪೈಕಿ ಶಿವಮೊಗ್ಗದ 114 ಹಾಗೂ ಹಾಸನದ 21 ಪ್ರಕರಣದಲ್ಲಿ ಆರೋಪಿಗಳನ್ನು ಅಭಿಯೋಜನೆಯಿಂದ ಕೈ ಬಿಡುವುದಕ್ಕೆ ಸಂಪುಟ ಉಪ ಸಮಿತಿಯಲ್ಲಿ ಕಾಂಗ್ರೆಸ್ ಸರಕಾರ ನಿರ್ಧರಿಸಿತ್ತು. ಆದರೆ ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಪ್ರಕರಣಗಳು ಅಭಿಯೋಜನೆ ಹಾಗೂ ವಿಚಾರಣೆಯಿಂದ ವಾಪಾಸ್ ಪಡೆಯುವುದಕ್ಕೆ ಅರ್ಹವಾದುದ್ದಲ್ಲ. ಪ್ರಕರಣ ವಾಪಾಸ್ ಪಡೆಯುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಆರೋಪಿಗಳು ಇದರಿಂದ ಮತ್ತಷ್ಟು ಅಪರಾಧಿಕ ಕೃತ್ಯ ನಡೆಸುವುದನ್ನು ತಳ್ಳಿ ಹಾಕುವಂತಿಲ್ಲ. ಅವರು ಕಾನೂನಿನ ಬಗ್ಗೆ ಗೌರವ ಮರೆತು ಇನ್ನಷ್ಟು ಕೃತ್ಯ ಎಸಗಬಹುದು. ಹೀಗಾಗಿ ಪ್ರಕರಣದ ವಿಚಾರಣೆ ನಡೆಸಿ ಇತ್ಯರ್ಥಗೊಳಿಸುವುದು ಸೂಕ್ತ ಎಂದು ಪೊಲೀಸ್ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂಬ ದಾಖಲೆಯನ್ನು ಅಶೋಕ ಬಿಡುಗಡೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next