Advertisement

ಭವಿಷ್ಯನಿಧಿ ಸೌಲಭ್ಯ: ಒಳಗಿದ್ದವರಷ್ಟೇ ಹೊರಗೂ ಇದ್ದಾರೆ!

11:14 AM Jun 03, 2017 | Harsha Rao |

ಉಡುಪಿ: ನೌಕರರ ಭವಿಷ್ಯನಿಧಿ ಸಂಸ್ಥೆ (ಇಪಿಎಫ್) ಕೇಂದ್ರ ಸರಕಾರದ ಅಧೀನದಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಮುಖ್ಯ ಗುರಿಯೇ ಕಾರ್ಮಿಕರ ಹಿತ. ಕಾರ್ಮಿಕರ ಮೂಲವೇತನದ ಶೇ.12ರಷ್ಟನ್ನು ಕಾರ್ಮಿಕರ ವೇತನದಿಂದಲೂ, ಅಷ್ಟೇ ಪ್ರಮಾಣವನ್ನು ಉದ್ಯೋಗದಾತರಿಂದಲೂ ಪಾವತಿಯಾಗುವಂತೆ ನೋಡುತ್ತದೆ.  
ಉದ್ಯೋಗದಲ್ಲಿರುವ ಅವಧಿಯಲ್ಲಿ ಕಾರ್ಮಿಕರಿಂದ ಮತ್ತು ಉದ್ಯೋಗದಾತರಿಂದ ಜಮೆಯಾದ ಮೊತ್ತ ಶೇಖರಣೆಯಾಗುತ್ತ ಬಡ್ಡಿಯೊಂದಿಗೆ ನಿವೃತ್ತಿಯಾಗುವಾಗ ಒಮ್ಮೆಲೆ ಸಿಗುತ್ತದೆ. ಇದರಲ್ಲಿ ಆಂಶಿಕ ಮೊತ್ತ ಜಮೆಯಾಗಿ ಪಿಂಚಣಿಯಾಗಿ ದೊರಕುತ್ತದೆ. ಒಂದು ವೇಳೆ ಪತಿ/ಪತ್ನಿ ಮೃತಪಟ್ಟರೆ ಪತಿ/ಪತ್ನಿಗೆ, 25 ವರ್ಷದೊಳಗಿನ ಮಕ್ಕಳಿಗೆ, ಅವರಿಗೆ 25 ವರ್ಷ ದಾಟಿದರೆ ಇತರ ಕಿರಿಯ ಮಕ್ಕಳಿದ್ದರೆ ಅನಂತರ ಪಿಂಚಣಿ ಸಿಗುವ ವ್ಯವಸ್ಥೆ ಜಗತ್ತಿನಲ್ಲಿ ಬೇರೆಡೆ ಎಲ್ಲಿಯೂ ಇಲ್ಲ ಎಂಬ ಹೆಗ್ಗಳಿಕೆಯೂ ಇದೆ. ಒಂದೇ ಕಂತು ಕಟ್ಟಿದರೂ ಕನಿಷ್ಠ 1,000 ರೂ. ಕುಟುಂಬ ಪಿಂಚಣಿ ದೊರಕುವುದು ಇನ್ನೊಂದು ವಿಶೇಷ. 

Advertisement

ಸಾಮಾನ್ಯರಿಗೂ ಭದ್ರತೆ
ಶೇ.90 ರಷ್ಟು ಮೊತ್ತವನ್ನು ಈಗ ವೈದ್ಯಕೀಯ, ಗೃಹ ನಿರ್ಮಾಣದಂತಹ ಉದ್ದೇಶಕ್ಕೆ ಹಿಂಪಡೆಯಬಹುದಾಗಿದೆ. ಎಲ್ಲರೂ ಸರಕಾರಿ ಸೇವೆಗೆ ಸೇರಬೇಕೆನ್ನುತ್ತಾರೆ ಏಕೆ? ಭದ್ರತೆ ಇದೆ ಎನ್ನುವ ಕಾರಣಕ್ಕೆ. ಭವಿಷ್ಯನಿಧಿಯೂ ಸಾಮಾನ್ಯರಲ್ಲಿ ಸಾಮಾನ್ಯರಿಗೆ ಭದ್ರತೆ ನೀಡುತ್ತದೆ ಎನ್ನುತ್ತಾರೆ ಸಂಸ್ಥೆಯ ಉಡುಪಿ ಪ್ರಾದೇಶಿಕ ಆಯುಕ್ತ ಚಂದ್ರಕಾಂತ ಗಡಿಯಾರ್‌ ಮತ್ತು ಸಹಾಯಕ ಆಯುಕ್ತ ಸೌರಭ್‌ಕುಮಾರ್‌.  

ಒಳಗೆಷ್ಟು? ಹೊರಗೆಷ್ಟು? 
ಉಡುಪಿ ಜಿಲ್ಲೆಯಲ್ಲಿ ಸುಮಾರು 85,000, ದ.ಕ. ಜಿಲ್ಲೆಯಲ್ಲಿ ಇದಕ್ಕೆ ದುಪ್ಪಟ್ಟು  ಖಾತೆದಾರರಿದ್ದಾರೆ. ಈ ಅಂಕಿಅಂಶದಲ್ಲಿ ಬಹುತೇಕರು ಜಿಲ್ಲೆಯೊಳಗೆ ಕಾರ್ಯನಿರ್ವಹಿಸುವ ಕಾರ್ಮಿಕರಾದರೆ, ಅಲ್ಪಾಂಶ ಹೊರಗೆ ನೌಕರರಾಗಿದ್ದು ಇಲ್ಲಿನ ಮೂಲದವರು. ಆದರೆ ಇದಕ್ಕೆ ಅರ್ಹರಾಗಿದ್ದೂ ಇದರ ವ್ಯಾಪ್ತಿಗೆ ಒಳಪಡದವರೆಷ್ಟು? 

ಹೊರಗಿರುವವರ ಶೋಷಣೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ಯೋಜನೆಯ ಸದಸ್ಯರಾದವರ ಸಂಖ್ಯೆಯಷ್ಟೇ ಸದಸ್ಯರಾಗದವರು ಇದ್ದಾರೆ. ಸಂಘಟಿತ ವಲಯದಲ್ಲಿ ಸಮಸ್ಯೆಗಳಿಲ್ಲ. ಅಸಂಘಟಿತ ವಲಯದಲ್ಲಿ ಈ ಸೌಲಭ್ಯ ಸರಿಯಾಗಿ ದೊರಕುತ್ತಿಲ್ಲ. ಸರಕಾರಿ ಸ್ವಾಮ್ಯದ ಸಂಸ್ಥೆಗಳ ಗುತ್ತಿಗೆದಾರರಡಿ ಕೆಲಸ ನಿರ್ವಹಿಸುವವರು ಮತ್ತು ಖಾಸಗಿ ಸಂಸ್ಥೆಗಳ ಹೊರಗುತ್ತಿಗೆಯ ನೌಕರರು, ಮೀನುಗಾರಿಕೆ ಕಾರ್ಮಿಕರು, ಕಟ್ಟಡ ಕಾರ್ಮಿಕ ವರ್ಗ, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಕಾರ್ಮಿಕರು ಭವಿಷ್ಯನಿಧಿಯಿಂದ ಹೊರಗಿದ್ದಾರೆ. ಇವರು ಖಾಯಂ ನೌಕರರಲ್ಲ ಎಂಬ ವಾದವನ್ನು ನಿರಾಕರಿಸುವ ಭವಿಷ್ಯನಿಧಿ ಸಂಸ್ಥೆಯ ಅಧಿಕಾರಿಗಳು “ಎಲ್ಲೋ ಬಿಹಾರ, ಅಸ್ಸಾಂ, ಉತ್ತರಪ್ರದೇಶದಿಂದ 15 ದಿನಗಳ ಕೆಲಸಕ್ಕೆ ಇಲ್ಲಿಗೆ ಬರುತ್ತಾರೋ? ಸಂಸ್ಥೆಯ ಮುಖ್ಯಸ್ಥರು ಉಪ ಗುತ್ತಿಗೆದಾರರ ಮೇಲೆ ಹೊಣೆ ಹಾಕಿ ಅವರನ್ನು ಮಾತ್ರ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಕೆಲವು ಸಂಸ್ಥೆಗಳಲ್ಲಿ 100 ಜನರಿಗೆ ಸೌಲಭ್ಯ ದೊರಕಬೇಕಾದಲ್ಲಿ ಹತ್ತೇ ಜನರಿಗೆ ಸಿಗುತ್ತಿದೆ. ಗುತ್ತಿಗೆದಾರರ ಅಧೀನ ಕಾರ್ಮಿಕರು ಕೆಲಸ ಮಾಡುವುದಾದರೆ ಗುತ್ತಿಗೆದಾರರೇ ಅವರ ಜೀವನ ಸುಸ್ಥಿತಿಗೆ ಬಾಧ್ಯಸ್ಥರಾಗಬೇಕಲ್ಲವೆ?’ ಎಂದು ಹೇಳುತ್ತಾರೆ. 

ಸೌಲಭ್ಯವಂಚನೆ
ಬಹಳ ರಿಸ್ಕ್ ಇರುವ ಮೀನುಗಾರಿಕೆ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರಿದ್ದಾರೆ. ವಿವಿಧೆಡೆ ಹಾಲು ಸಹಕಾರಿ ಸಂಘಗಳಿವೆ. ಇಲ್ಲಿ ಕೆಲಸ ಮಾಡುವವರಿಗೆ ಭವಿಷ್ಯನಿಧಿ ಅನ್ವಯವಾಗಬೇಕಲ್ಲವೆ? ಅವರು ಯಾರಿಗಾಗಿ ಹಾಲು ಸಂಗ್ರಹಿಸುತ್ತಾರೋ ಅವರು ಭವಿಷ್ಯನಿಧಿ ಅನ್ವಯಿಸಲೂ ಹೊಣೆ ಹೊರಬೇಕಲ್ಲವೆ? ಇದೇ ರೀತಿ ಪಿಗ್ಮಿ ಸಂಗ್ರಾಹಕರು. ಇವರು ಯಾವ ಸಂಸ್ಥೆಗಾಗಿ ಪಿಗ್ಮಿ ಸಂಗ್ರಹಿಸುತ್ತಾರೆ? ಅರಣ್ಯ ಇಲಾಖೆಯ ವಾಚರ್‌ಗಳಂತಹ ನೌಕರರು ಈ ಸೌಲಭ್ಯವನ್ನು ಹೊಂದಿಲ್ಲ. ಅನೇಕ ಸರಕಾರಿ ಸ್ವಾಮ್ಯಗಳ ಸಂಸ್ಥೆಯ ಗುತ್ತಿಗೆದಾರರಿಗೆ  ಭವಿಷ್ಯನಿಧಿಯನ್ನು ಅನ್ವಯಿಸುತ್ತಿಲ್ಲ. ಇವರೆಲ್ಲರೂ ಕಾನೂನು ಮತ್ತು ಮಾನವೀಯ ನೆಲೆಯಲ್ಲಿ ಭವಿಷ್ಯನಿಧಿ ಕಾನೂನು ವ್ಯಾಪ್ತಿಗೆ ಬರಬೇಕಾಗಿದೆ. 

Advertisement

ಅಸಂಘಟಿತ ವಲಯಕ್ಕೆ ಸಂಘಟಿತ ಪ್ರಯತ್ನ
ಒಂದಿಬ್ಬರು ಕಾರ್ಮಿಕರು ಮಾತನಾಡಿದರೆ ಅದಕ್ಕೆ ಬಲ ಬರುವುದಿಲ್ಲ. ಒಂದು ಸೊಸೈಟಿ ರೀತಿ ಮಾಡಿಕೊಂಡು ಉದ್ಯೋಗದಾತರಲ್ಲಿ ಮಾತನಾಡಬೇಕು. ನಾವೂ ಉದ್ಯೋಗದಾತರೊಂದಿಗೆ ಮಾತನಾಡಲು ಸಿದ್ಧ. ಇದು ಕಾನೂನಿನ ವಿಷಯ ಎನ್ನುವುದಕ್ಕಿಂತ ಮಾನವೀಯ ಕಳಕಳಿಯ, ನೈತಿಕತೆಯ ವಿಷಯ ಎಂದು ಗಡಿಯಾರ್‌ ಮತ್ತು ಸೌರಭ್‌ ಅಭಿಪ್ರಾಯಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next