Advertisement

ಪೆಟ್ರೋಲ್‌ ಬೆಲೆ ಏರಿಕೆ: ಗಾಯದ ಮೇಲೆ ಬರೆ ಬೇಡ

01:25 AM May 14, 2021 | Team Udayavani |

ದೇಶಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟುವ ಸಲುವಾಗಿ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಅಂದರೆ ಈಗಾಗಲೇ ಆಯಾ ರಾಜ್ಯ ಸರಕಾರಗಳು ಲಾಕ್‌ ಡೌನ್‌ ನಂಥ ಕ್ರಮಗಳನ್ನು ಘೋಷಣೆ ಮಾಡಿದ್ದು, ಇದರಿಂದಾಗಿ ಕೈಗಾರಿಕೆಗಳು, ವಾಣಿಜ್ಯ ಉದ್ದಿಮೆಗಳು ಕೆಲಸ ಸ್ಥಗಿತಗೊಳಿಸಿವೆ.

Advertisement

ವ್ಯಾಪಾರ ಚಟುವಟಿಕೆಗಳು ನಿಂತಿವೆ. ಈ ಎಲ್ಲ ಕಾರಣಗಳಿಂದಾಗಿ ಜನರ ಆದಾಯಕ್ಕೂ ಕುತ್ತು ಬಂದಿದ್ದು, ಸದ್ಯದ ಸ್ಥಿತಿಯಲ್ಲಿ ಜೀವನ ಮಾಡುವುದೇ ದುಸ್ತರ ಎಂದೆನಿಸಿದೆ.

ಇಂಥ ಹೊತ್ತಿನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗುತ್ತಿರುವುದು ಜನಸಾಮಾನ್ಯನ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೇ 2ರ ಅನಂತರದಲ್ಲಿ ಪ್ರತೀ ದಿನವೂ ತೈಲ ದರ ಏರಿಕೆಯಾಗುತ್ತಲೇ ಇದೆ. ಸದ್ಯ ಲಾಕ್‌ ಡೌನ್‌ ನಿಂದಾಗಿ ಜನ ಸಾಮಾನ್ಯರು ಹೆಚ್ಚಾಗಿ ಓಡಾಡುತ್ತಿಲ್ಲವಾದರೂ, ಸರಕು ಮತ್ತು ಸಾಗಣೆ ಲಾರಿಗಳು ಮಾತ್ರ ಓಡಾಟ ನಡೆಸುತ್ತಲೇ ಇವೆ.

ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಿಂದಾಗಿ ಈ ವರ್ಗಕ್ಕೆ ಬಹು ದೊಡ್ಡ ಪೆಟ್ಟು ಬೀಳುತ್ತಿರುವುದು ಮಾತ್ರ ಸತ್ಯ.
ಸಾಮಾನ್ಯವಾಗಿ ತೈಲೋತ್ಪನ್ನಗಳ ದರ ಏರಿದಂತೆ ಇತರೆ ವಸ್ತುಗಳ ದರವೂ ಏರಿಕೆಯಾಗುವುದು ಸಾಮಾನ್ಯ. ಕೊರೊನಾದಂಥ ಸಂಕಷ್ಟದ ಸ್ಥಿತಿಯಲ್ಲಿ ಯಾವುದೇ ವಸ್ತುಗಳ ಬೆಲೆ ಏರಿಕೆ ಮಾಡುವುದು ಉಚಿತವಾದ ಕ್ರಮ ಅಲ್ಲವೇ ಅಲ್ಲ. ಇಂಥ ಹೊತ್ತಿನಲ್ಲಿ ತೈಲ ಕಂಪೆನಿಗಳು ತಮ್ಮ ನಷ್ಟದ ಹಣವನ್ನೋ ಅಥವಾ ಲಾಭ ಬರಲಿ ಎಂಬ ಕಾರಣಕ್ಕೋ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಮಾಡಿದರೆ, ದುಡಿಮೆಯನ್ನೇ ಕಾಣದೇ ಮನೆಯಲ್ಲಿ ಕುಳಿತಿರುವ ಜನರ ಗತಿ ಏನು? ಕಷ್ಟದ ಕಾಲದಲ್ಲಿ ಸರಕಾರಗಳು ಜನರಿಗೆ ಸಹಾಯಕವಾಗಿ ನಿಲ್ಲಬೇಕೇ ಹೊರತು ಮತ್ತಷ್ಟು ಪೆಟ್ಟು ನೀಡಬಾರದು.

ರಾಜಸ್ಥಾನವೂ ಸೇರಿ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್‌ ದರ ಈಗಾಗಲೇ 100 ರೂ. ದಾಟಿದೆ. ಪೆಟ್ರೋಲ್‌ ದರ ನೂರು ರೂ. ಮುಟ್ಟಲ್ಲ, ಅದರಳೊಗೇ ಇರಲಿದೆ ಎಂಬ ಜನರ ನಿರೀಕ್ಷೆ ಸುಳ್ಳಾಗಿದೆ. ಇಂದು ರಾಜಸ್ಥಾನದಲ್ಲಿ ಆಗಿರುವುದು ನಾಳೆ ಕರ್ನಾಟಕದಲ್ಲೂ 100 ರೂ. ದಾಟಬಹುದು. ಇದು ಮಧ್ಯಮ ವರ್ಗಕ್ಕೆ ತೀರಾ ಸಂಕಷ್ಟ ತಂದು ಕೊಡಬಹುದು.
ದೇಶದಲ್ಲಿ ಸಾಮಾನ್ಯವಾಗಿ ಕಾರ್‌, ಬೈಕ್‌ ಬಳಕೆ ಮಾಡುವುದು ಮಧ್ಯಮ ವರ್ಗ. ಅದು ವೇತನ ಪಡೆದೇ ಜೀವನ ಮಾಡುವ ವರ್ಗವಾಗಿರುವುದರಿಂದ ಕೊರೊನಾ ಕಾಲದಲ್ಲಿ ಇವರ ಖರ್ಚೂ ಹೆಚ್ಚಿರುತ್ತದೆ. ಅಲ್ಲದೇ ಬಹುತೇಕ ಕಂಪೆನಿಗಳು, ಸರಕಾರಿ ಉದ್ಯೋಗಿಗಳು ಕಳೆದ ಎರಡು ವರ್ಷಗಳಿಂದ ವೇತನ ಹೆಚ್ಚಳ ಅನುಕೂಲ ಪಡೆದಿಲ್ಲ. ಲೆಕ್ಕಾಚಾರದಲ್ಲಿ 2019ರ ವೇತನದಲ್ಲೇ ಇಂದಿಗೂ ಜೀವನ ಮಾಡುತ್ತಿದ್ದಾರೆ. ಆದರೂ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಈ ರೀತಿಯಲ್ಲೇ ಏರಿಕೆ ಮಾಡುತ್ತಾ ಹೋದರೆ, ವೇತನದಾರನ ಜೀವನ ಕಷ್ಟಕ್ಕೀಡಾಗುತ್ತದೆ. ಏಕೆಂದರೆ ಅವರ ಖರ್ಚು ಮತ್ತು ವೆಚ್ಚಕ್ಕೂ ತಾಳೆಯಾಗದೇ ಕಷ್ಟ ಅನುಭವಿಸುತ್ತಾನೆ.

Advertisement

ರಾಜ್ಯ ಸರಕಾರವೂ ಪೆಟ್ರೋಲ್‌, ಡೀಸೆಲ್‌ ವಿಚಾರದಲ್ಲಿ ಕೇಂದ್ರ ಸರಕಾದ ಕಡೆ ನೋಡದೇ, ರಾಜ್ಯದ ಪಾಲಿನ ತೆರಿಗೆಯನ್ನಾದರೂ ಕಡಿಮೆ ಮಾಡಬೇಕು. ಸರಕಾರಕ್ಕೆ ಆದಾಯ ಬರಬೇಕು ಎಂಬುದು ನಿಜ. ಆದರೆ ಜನರ ಹೊಟ್ಟೆ ಮೇಲೆ ಹೊಡೆದು, ಆದಾಯ ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ.

Advertisement

Udayavani is now on Telegram. Click here to join our channel and stay updated with the latest news.

Next