Advertisement

ರಾಜ್ಯದಲ್ಲಿ ಪೆಟ್ರೋಲ್‌ ದರ ಇಳಿಕೆ?

06:00 AM Sep 17, 2018 | |

ಬೆಂಗಳೂರು: ದೇಶದಲ್ಲಿ ಏರುಮುಖದಲ್ಲಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಯುವ ಲಕ್ಷಣ ಕಾಣಿಸದೇ ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೆಸ್‌ ಕಡಿಮೆ ಮಾಡಿ ಇವುಗಳ ದರವನ್ನು 2ರಿಂದ 2.5 ರೂ.ನಷ್ಟು ಇಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

Advertisement

ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಸುವ ಕುರಿತು ಪರಿಶೀಲಿಸಿ ಪ್ರಸ್ತಾವನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಹಣಕಾಸು ಇಲಾಖೆ ಅಧಿಕಾರಿಗಳು ದರ ಇಳಿಕೆ ಕುರಿತು ಚರ್ಚಿಸಿದ್ದು, ಮುಖ್ಯಮಂತ್ರಿಗಳೊಂದಿಗೆ ಇನ್ನೊಂದು ಸುತ್ತು ಮಾತುಕತೆ ನಡೆಸಿ ದರ ಇಳಿಕೆ ಆದೇಶ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ದರವನ್ನು 3ರಿಂದ 4 ರೂ.ನಷ್ಟು ಇಳಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿದ್ದರು. ಆದರೆ, ಅಷ್ಟು ಪ್ರಮಾಣದಲ್ಲಿ ಸೆಸ್‌ ಕಡಿಮೆ ಮಾಡಿದರೆ ರಾಜ್ಯದ ಅರ್ಥ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರ ಬದಲು ಸಾಲ ಮನ್ನಾ ಕಾರಣಕ್ಕಾಗಿ ಬಜೆಟ್‌ನಲ್ಲಿ ಹೆಚ್ಚಿಸಿದ್ದ ಶೇ. 2ರಷ್ಟು ಸೆಸ್‌ ಕೈಬಿಡಬಹುದು ಎಂದು ಅಧಿಕಾರಿಗಳು ಸಲಹೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ  ಸಾಲ ಮನ್ನಾ, ಪ್ರಕೃತಿ ವಿಕೋಪದಿಂದ ಆಗುವ ಹೊರೆ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಪ್ರತೀಕೂಲ ಪರಿಣಾಮ ಬೀರದಂತೆ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು 2ರಿಂದ 2.50 ರೂ.ನಷ್ಟು ಇಳಿಸಲು ಆರ್ಥಿಕ ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಈ ಕುರಿತು ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಕಳೆದ ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಕುರಿತು ಘೋಷಣೆ ಮಾಡಿದ್ದು, ಇದಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್‌ಅನ್ನು ಶೇ. 2ರಷ್ಟು ಹೆಚ್ಚಿಸಿದ್ದರು. ಇದರಿಂದ ರಾಜ್ಯದಲ್ಲಿ ಪೆಟ್ರೋಲ್‌ ಮೇಲಿನ ಸೆಸ್‌ ಶೇ. 32 ಮತ್ತು ಡೀಸೆಲ್‌ ಮೇಲಿನ ಸೆಸ್‌ ಶೇ. 21ಕ್ಕೆ ಏರಿಕೆಯಾಗಿತ್ತು. ಇದೀಗ ಸೆಸ್‌ಅನ್ನು ಶೇ. 2.5ರಿಂದ ಶೇ. 3ರಷ್ಟು ಕಡಿಮೆಗೊಳಿಸುವ ಬಗ್ಗೆ ಯೋಚಿಸಲಾಗಿದೆ.

Advertisement

ಲೆಕ್ಕಾಚಾರ ಏನು?:
ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇದೇ ರೀತಿ ಇದ್ದರೆ ಸೆಸ್‌ ಇಳಿಕೆಯಿಂದ ವಾರ್ಷಿಕ 2000 ಕೋಟಿ ರೂ. ನಷ್ಟವಾಗಬಹುದು. ಆದರೆ, ನೆರೆ ರಾಜ್ಯಗಳಲ್ಲಿ, ಅದರಲ್ಲೂ ಮುಖ್ಯವಾಗಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ರಾಜ್ಯಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಈ ರಾಜ್ಯದಿಂದ ಬರುವ ವಾಹನಗಳು ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ತುಂಬಿಸಿಕೊಳ್ಳುತ್ತವೆ. ಇದರಿಂದ ರಾಜ್ಯಕ್ಕೆ ವಾರ್ಷಿಕ 1000 ಕೋಟಿ ರೂ. ಹೆಚ್ಚುವರಿ ಆದಾಯ ಬರಬಹುದು. ಒಟ್ಟಾರೆ ಸೆಸ್‌ ಇಳಿಕೆಯಿಂದ ಬೊಕ್ಕಸಕ್ಕೆ ಒಂದು ಸಾವಿರ ಕೋಟಿ ನಷ್ಟವಾಗಬಹುದು. ಇದನ್ನು ಬೇರೆ ಮೂಲಗಳಿಂದ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬುದು ಆರ್ಥಿಕ ಇಲಾಖೆ ಲೆಕ್ಕಾಚಾರ.

Advertisement

Udayavani is now on Telegram. Click here to join our channel and stay updated with the latest news.

Next