Advertisement

Petrol ಸುರಿದು ಬೆಂಕಿ ಹಚ್ಚಿದ ಘಟನೆ: ಪ್ರಿಯತಮೆಯ ತಂದೆಯ ಬಂಧನ

09:26 PM May 28, 2024 | Team Udayavani |

ಮುದ್ದೇಬಿಹಾಳ: ಇಲ್ಲಿನ ಪುರಸಭೆ ಎದುರಿರುವ ಮದರಿಯವರ ಮನೆಯಲ್ಲಿ ಪ್ರೇಮ ಪ್ರಕರಣ ಸಂಬಂಧ ನಡೆದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ ಪ್ರಿಯಕರ ಢವಳಗಿಯ ರಾಹುಲ್ ಅವರ ತಂದೆ ರಾಮನಗೌಡ ಬಿರಾದಾರ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಪ್ರಿಯತಮೆ ಐಶ್ವರ್ಯಳ ತಂದೆ ಅಪ್ಪು (ಪರಶುರಾಮ) ಮದರಿ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Advertisement

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಶಂಕರ್ ಮಾರಿಹಾಳ ಭೇಟಿ ನೀಡಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆ ನಡೆದ ಮೂರನೇ ದಿನವಾದ ಮಂಗಳವಾರವೂ ಪೊಲೀಸರು ಮದರಿಯವರ ಮನೆಗೆ ಬಂದು ತನಿಖೆ ನಡೆಸಿದರು. ಏತನ್ಮಧ್ಯೆ ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿರುವ ರಾಹುಲ್ ಸ್ಥಿತಿ ತೀರ ಗಂಭೀರವಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.

ಇದೇ ಘಟನೆಯಲ್ಲಿ ಗಾಯಗೊಂಡಿರುವ ಐಶ್ವರ್ಯಳ ಚಿಕ್ಕಪ್ಪ ಮುತ್ತು ಮದರಿ, ಚಾಲಕ ನೀಲಕಂಠ ಹರನಾಳ ಸ್ಥಿತಿಯೂ ಗಂಭೀರವಾಗಿದ್ದು ಇವರನ್ನೂ ಸಹಿತ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಆಸ್ಪತ್ರೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ.

ಇನ್ನೋರ್ವ ಗಾಯಾಳು ಮುತ್ತು ಅವರ ಪತ್ನಿ (ಐಶ್ವರ್ಯಳ ಚಿಕ್ಕಮ್ಮ) ಸೀಮಾ ಮದರಿ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಂಡಿದ್ದಾರೆ. ಅಪರಾಧ ವಿಭಾಗದ ಪಿಎಸೈ ಎಸ್.ಆರ್.ನಾಯಕ ಅವರು ಪ್ರಿಯಕರ ರಾಹುಲ್ ಬಿರಾದಾರ, ಎ1 ಆರೋಪಿ ಐಶ್ವರ್ಯಳ ಚಿಕ್ಕಪ್ಪ ಮುತ್ತು ಮದರಿ ಅವರ ಹೇಳಿಕೆಗಳನ್ನು ವಿಡಿಯೋ ಚಿತ್ರೀಕರಣ ಮೂಲಕ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next