ನವದೆಹಲಿ/ಬೆಂಗಳೂರು: ಇಂಧನ ಬೆಲೆ ಸೋಮವಾರ(ಜೂನ್ 14) ಮತ್ತೆ ಹೆಚ್ಚಳವಾದ ಪರಿಣಾಮ ಡೀಸೆಲ್ ಬೆಲೆಯೂ ಲೀಟರ್ ಗೆ ನೂರು ರೂಪಾಯಿಗೆ ಸಮೀಪಿಸಿದೆ. ಅದೇ ರೀತಿ ಉದ್ಯಾನನಗರಿ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ ಬೆಲೆ 99.33 ರೂಪಾಯಿಗೆ ಏರಿಕೆಯಾಗಿದ್ದು, ನೂರು ರೂಪಾಯಿಯತ್ತ ದಾಪುಗಾಲಿರಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಭಾರೀ ಇಳಿಕೆ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 70,421 ಕೋವಿಡ್ ಪ್ರಕರಣ ಪತ್ತೆ, 3921 ಸಾವು
ದೇಶಾದ್ಯಂತ ಪೆಟ್ರೋಲ್ ಬೆಲೆ ಲೀಟರ್ ಗೆ ಇಂದು 29-30 ಪೈಸೆಯಷ್ಟು ಹೆಚ್ಚಳವಾಗಿದ್ದು, ಡೀಸೆಲ್ ಬೆಲೆ ಲೀಟರ್ ಗೆ 28-30ಪೈಸೆ ಏರಿಕೆಯಾಗಿದೆ ಎಂದು ರಾಜ್ಯ ಸ್ವಾಮಿತ್ವದ ಇಂಧನ ಮಾರಾಟಗಾರರ ಕಂಪನಿಯ ಪ್ರಕಟಣೆ ತಿಳಿಸಿದೆ. ಬೆಲೆ ಏರಿಕೆಯೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತಷ್ಟು ಹೆಚ್ಚಳವಾದಂತಾಗಿದೆ.
ಬೆಂಗಳೂರಿನಲ್ಲಿ ಡೀಸೆಲ್ ಲೀಟರ್ ಗೆ 92.58 ರೂಪಾಯಿಗೆ ಏರಿಕೆಯಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಬೆಲೆ 96.04 ರೂಪಾಯಿಯಾಗಿದ್ದು, ಡೀಸೆಲ್ ಲೀಟರ್ ಬೆಲೆ 87.28 ರೂಪಾಯಿಗೆ ಹೆಚ್ಚಳವಾಗಿದೆ ಎಂದು ವರದಿ ವಿವರಿಸಿದೆ.
ರಾಜಸ್ಥಾನದ ಶ್ರೀಗಂಗಾನಗರ್ ನಲ್ಲಿ ಡೀಸೆಲ್ ಲೀಟರ್ ಬೆಲೆ 100 ರೂಪಾಯಿಗಿಂತ ಹೆಚ್ಚಳವಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಡಾಖ್ ನಲ್ಲಿ ಪೆಟ್ರೋಲ್ ಲೀಟರ್ ಬೆಲೆ ನೂರು ರೂಪಾಯಿ ಮೀರಿರುವುದಾಗಿ ವರದಿ ತಿಳಿಸಿದೆ.
ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಪೆಟ್ರೋಲ್ , ಡೀಸೆಲ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 102.58 ರೂಪಾಯಿ, ಡೀಸೆಲ್ ಬೆಲೆ ಲೀಟರ್ ಗೆ 94.70 ರೂಪಾಯಿಗೆ ಹೆಚ್ಚಳವಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 97.69 ರೂಪಾಯಿ, ಡೀಸೆಲ್ ಬೆಲೆ ಲೀಟರ್ ಗೆ 91.92 ರೂಪಾಯಿಗೆ ಹೆಚ್ಚಳವಾಗಿದೆ.