ಫ್ರಾಂಕ್‌ಫರ್ಟ್/ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಜಗತ್ತಿನಲ್ಲಿ ಕಚ್ಚಾ ತೈಲದ ಬೆಲೆ ಏಳು ವರ್ಷಗಳ ಗರಿಷ್ಠಕ್ಕೆ ಏರಿಕೆಯಾಗಿದೆ. ಕಚ್ಚಾ ತೈಲ ಉತ್ಪಾದಿಸುವ ರಾಷ್ಟ್ರಗಳ ಒಕ್ಕೂಟ ಒಪೆಕ್ ಕೊರೊನಾ ಶುರುವಾಗುವುದಕ್ಕಿಂತ ಹಿಂದಿನ ಸಂದರ್ಭದಲ್ಲಿ ಮಾಡಲಾಗುತ್ತಿದ್ದ ಉತ್ಪಾದನೆಯ ಪ್ರಮಾಣಕ್ಕೇ ವಾಪಸಾಗಲು ನಿರ್ಧರಿಸಿರು ವಂತೆಯೇ ಈ ಬೆಳವಣಿಗೆ ನಡೆದಿದೆ.
ಪ್ರತೀ ಬ್ಯಾರೆಲ್ ಕಚ್ಚಾ ತೈಲದ ಬೆಲೆ ಶೇ.3 ಅಂದರೆ ಪ್ರತೀ ಬ್ಯಾರೆಲ್‌ಗೆ 2.32 ಡಾಲರ್ ಏರಿಕೆ ಯಾಗಿದೆ. ಹೀಗಾಗಿ ನ್ಯೂಯಾರ್ಕ್ ಮರ್ಕೆಂಟೈಲ್ ಎಕ್ಸ್‌ಚೇಂಜ್‌ನಲ್ಲಿ 78.17 ಡಾಲರ್‌ಗೆ ತಲುಪಿದೆ. 2014ರ ಬಳಿಕ ಇದು ಗರಿಷ್ಠ ಏರಿಕೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.2.8ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 81.48 ಡಾಲರ್ ಆಗಿದೆ. ಜಗತ್ತಿನಾ ದ್ಯಂತ ಸೋಂಕಿನ ಅಲೆಯ ತೀವ್ರತೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಒಪೆಕ್ ಕಚ್ಚಾ ತೈಲ ಉತ್ಪಾದನೆ ತಗ್ಗಿಸಲು ನಿರ್ಧರಿಸಿತ್ತು. ಇದೀಗ, ಜಗತ್ತಿನಲ್ಲಿ ತೈಲ ಬೇಡಿಕೆ ಹೆಚ್ಚಾಗುತ್ತಿರುವಂತೆಯೇ, ಗರಿಷ್ಠ ಪ್ರಮಾ ಣಕ್ಕೆ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ.
ಶ್ವೇತಭವನದಲ್ಲಿ ಮಾತನಾಡಿದ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯಾಕ್ ಸಲ್ಲಿವನ್ ಹೆಚ್ಚಾಗುತ್ತಿರುವ ಕಚ್ಚಾ ತೈಲ ಬೆಲೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮಂಗಳವಾರ ಏರಿಕೆ ಕಂಡಿದ್ದು, ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದೆ. ದೇಶದಲ್ಲಿನ ಇಂಧನ ಬೆಲೆಯು ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯ ಬೆಲೆಯನ್ನು ಆಧರಿಸಿರುತ್ತದೆ. ಅಲ್ಲಿ ಬೆಲೆ ಹೆಚ್ಚಿದ್ದರಿಂದಾಗಿ ದೇಶದಲ್ಲಿಯೂ ಬೆಲೆ ಹೆಚ್ಚಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಸೇರಿಕೊಂಡು ಈ ಪರಿಸ್ಥಿತಿಯನ್ನು ನಿಯಂತ್ರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 25 ಪೈಸೆ ಹೆಚ್ಚಳವಾಗಿದ್ದು, ಲೀಟರ್‌ಗೆ 102.64 ರೂ. ಆಗಿದೆ. ಡೀಸೆಲ್ 30 ಪೈಸೆ ಏರಿಕೆಯಾಗಿದ್ದು, ಲೀ.ಗೆ 91.07 ರೂ. ಆಗಿದೆ. “ನಾವು 100 ಲೀಟರ್ ಇಂಧನ ಬಳಸಿದರೆ ಅದರಲ್ಲಿ 99 ಲೀಟರ್ ಅನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ.
ಇದನ್ನೂ ಓದಿ:ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ : ಸಿದ್ದರಾಮಯ್ಯ
ಇಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಇಂಧನದ ಮೇಲೆ ತೆರಿಗೆ ಹಾಕುತ್ತಿವೆ. ಕೇಂದ್ರ ನಿಶ್ಚಿತ ತೆರಿಗೆಯನ್ನು ಮಾತ್ರ ಹಾಕುತ್ತಿದೆ. ಆದರೆ ರಾಜ್ಯಗಳು ವ್ಯಾಟ್ ಅನ್ನೂ ಹಾಕುತ್ತಿವೆ. ಹಾಗಾಗಿ ನಾವು ಒಟ್ಟಾಗಿ ಪರಿಸ್ಥಿತಿ ನಿಭಾಯಿಸಬೇಕು’ ಎಂದು ಸಚಿವೆ ತಿಳಿಸಿದ್ದಾರೆ.